ಜಾತ್ರೆಗೆ ಚುನಾವಣಾ ನೀತಿ ಚೌಕಟ್ಟು ಸಾಧ್ಯತೆ : ಎಸ್ಪಿ

ಜಾತ್ರೆಗೆ ಚುನಾವಣಾ ನೀತಿ ಚೌಕಟ್ಟು ಸಾಧ್ಯತೆ : ಎಸ್ಪಿ

ದಾವಣಗೆರೆ, ಮಾ. 13 – ಈ ಬಾರಿ ನಗರದ ದುರ್ಗಾಂಬಿಕಾ ಜಾತ್ರೆ, ಓಕುಳಿ ಹಬ್ಬ, ರಂಜಾನ್ ಹಾಗೂ ಗುಡ್‌ಫ್ರೈಡೆ ವೇಳೆಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದಿರುವ ಸಾಧ್ಯತೆ ಇದೆ. ಹೀಗಾಗಿ ನೀತಿ ಸಂಹಿತೆಗೆ ಅನುಗುಣ ವಾಗಿ ಹಬ್ಬ ಹಾಗೂ ಜಾತ್ರೆಗಳ ಆಚರಣೆಗೆ ಸನ್ನದ್ಧವಾಗಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಜಾತ್ರೆ ಹಾಗೂ ಹಬ್ಬಗಳ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀತಿ ಸಂಹಿತೆ ಜಾರಿಯಾದಲ್ಲಿ ಚುನಾವಣಾ ನಿಯಮ ಗಳನ್ನು ಸಂಪೂರ್ಣವಾಗಿ ಪಾಲಿಸಬೇಕಿದೆ. ಸಾರ್ವಜನಿಕ ಹಬ್ಬಗಳ ಆಚರಣೆಗಾಗಿ ಅನುಮತಿ ಪಡೆಯಬೇಕಿದೆ. ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು. ಇದೆಲ್ಲದಕ್ಕೂ ಮಾನಸಿಕವಾಗಿ ಸಿದ್ಧವಾಗಿರಬೇಕು ಎಂದು ಎಸ್ಪಿ ಹೇಳಿದರು.

ಜಾತ್ರೆ ಹಾಗೂ ಹಬ್ಬಗಳ ಆಚರಣೆ ವೇಳೆ ಎಲ್ಲರೂ ಕಾನೂನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಬೇಕು. ಕಿಡಿಗೇಡಿಗಳು ಹಾಗೂ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಲಾಗುವುದು ಎಂದವರು ಎಚ್ಚರಿಸಿದರು.

ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಪ್ರಚೋದನಕಾರಿ ಪೋಸ್ಟ್‌ ಹಾಕುವವರು ಹಾಗೂ ಫೇಕ್ ನ್ಯೂಸ್ ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಉಮಾ ಪ್ರಶಾಂತ್ ಹೇಳಿದರು.

ಅಬಕಾರಿ ಇಲಾಖೆಯ ಜೊತೆ ಮಾತನಾಡಿ ದುರ್ಗಾಂಬಿಕ ಜಾತ್ರೆಯ ವೇಳೆ ಪಾನ ನಿಷೇಧದ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು. ದುರ್ಗಾಂಬಿಕಾ ಜಾತ್ರೆ ವೇಳೆ ಪ್ರಾಣಿ ಬಲಿ ಹಾಗೂ ಮೌಢ್ಯಾಚರಣೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದರು.

ಜಾತ್ರೆಯ ವೇಳೆ ಸಂಚಾರ ನಿಯಂತ್ರಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ. ಎಲ್ಲ ಸಂಚಾರ ನಿರ್ಬಂಧ ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ತಿಳಿಸಿದರು.

ಓಕುಳಿ ಹಬ್ಬದ ಸಂದರ್ಭದಲ್ಲೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಧ್ವನಿವರ್ಧಕಗಳಿಗೆ ಅನುಮತಿ ಪಡೆಯಬೇಕು. ಕಿಡಿಗೇಡಿತನ, ಬೇಜವಾಬ್ದಾರಿ ವಾಹನ ಚಾಲನೆ, ಪಾನಮತ್ತವಾಗಿ ವಾಹನ ಚಲಾಯಿಸುವುದು, ಕರ್ಕಶ ಧ್ವನಿಯ ವಾಹನ ಚಾಲನೆಗೆ ಅವಕಾಶ ಇರುವುದಿಲ್ಲ ಎಂದು ಎಸ್ಪಿ ಹೇಳಿದರು.

ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ ಮಾತನಾಡಿ, ಹಬ್ಬಗಳ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು. ಜಿಲ್ಲಾ ಆರೋಗ್ಯ ಇಲಾಖೆಯಿಂದ ದುರ್ಗಾಂಬಿಕಾ ಜಾತ್ರೆ ಸ್ಥಳದಲ್ಲಿ ಆರೋಗ್ಯ ತಂಡವೊಂದನ್ನು ನಿಯೋಜಿಸಲಾಗುವುದು. ಪಾಲಿಕೆ ವತಿಯಿಂದ ಕುಡಿಯುವ ನೀರು ಹಾಗೂ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ, ದುರ್ಗಾಂಬಿಕಾ ಜಾತ್ರೆಯ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಮೌಢ್ಯದ ಬಗ್ಗೆ ಜಾಗೃತಿ ಮೂಡಿಸಲು ನಿರಂತರ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಪಾಲಿಕೆ ಸದಸ್ಯ  ಎಲ್.ಡಿ. ಗೋಣೆಪ್ಪ,  ಸಮಾಜದ ಮುಖಂಡರಾದ ಚನ್ನಬಸಪ್ಪ ಗೌಡ್ರು, ಕೆ.ಬಿ. ಶಂಕರನಾರಾಯಣ, ಬಿ.ಹೆಚ್. ವೀರಭದ್ರಪ್ಪ, ತಿಮ್ಮಣ್ಣ, ಆವರಗೆರೆ ಉಮೇಶ್, ಸೋಮಲಾಪುರದ ಹನುಮಂತಪ್ಪ, ಷಾ ನವಾಜ್ ಖಾನ್, ಜೊಳ್ಳಿ ಗುರು, ದಯಾಸಾಗರ್, ಎಲ್.ಎಂ.ಹೆಚ್. ಸಾಗರ್, ಸರ್ದಾರ್ ಚನ್ನಗಿರಿ, ಅಮಾನುಲ್ಲಾ ಖಾನ್ ಮತ್ತಿತರರು ಮಾತನಾಡಿದರು.

ವೇದಿಕೆಯ ಮೇಲೆ ಎಎಸ್‌ಪಿ ವಿಜಯ ಕುಮಾರ್ ಸಂತೋಷ್, ಜಿಲ್ಲಾ ಪಂಚಾಯ್ತಿ ಉಪ ನಿರ್ದೇಶಕ ಡಿ.ಎಸ್. ಕೃಷ್ಣ ನಾಯ್ಕ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್, ಆರ್.ಟಿ.ಒ. ಪ್ರಮುತೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!