ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಸಂಸ್ಕಾರ ನೀಡಿದ ಮೇರು ವ್ಯಕ್ತಿತ್ವದ ಗುರುರಾಯರು

ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಸಂಸ್ಕಾರ ನೀಡಿದ ಮೇರು ವ್ಯಕ್ತಿತ್ವದ ಗುರುರಾಯರು

31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದಲ್ಲಿ ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ

ದಾವಣಗೆರೆ, ಮಾ.11- ಶ್ರೀ ರಾಘವೇಂದ್ರ ಸ್ವಾಮಿಗಳು ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಸಂಸ್ಕಾರ ನೀಡಿದ ಮೇರು ವ್ಯಕ್ತಿತ್ವದ ಗುರುಗಳು ಎಂದು ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ  31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಉದ್ಘಾಟನಾ ಸಮಾರಂಭ ದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.

ಭಗವಂತನನ್ನು ಕಾಣಬೇಕಾದರೆ ಗುರುಗಳು ಬೇಕು. ರಾಯರು ಬಹಳ ಎತ್ತರದ ಸ್ಥಾನದಲ್ಲಿರುವ ಗುರುಗಳು. ಅವರು ಜಾತಿ, ಮತ, ಲಿಂಗ ಭೇದಗಳನ್ನು ಮೀರಿದವರು ಎಂದು ತಿಳಿಸಿದರು.

ಪ್ರತಿಯೊಂದು ಊರಿನಲ್ಲಿ ರಾಯರ ಮಠಗಳು ಇರುವುದರಿಂದ ನಾಸ್ತಿಕರೆಲ್ಲರೂ ಆಸ್ತಿಕರಾಗಿ ಇಡೀ ಸಮಾಜ ಸುಸಂಸ್ಕೃತವಾಗಿದೆ ಎಂದು ಶ್ರೀಗಳು ವಿಶ್ಲೇಷಿಸಿದರು.

ಈ ವರ್ಷ ದಾವಣಗೆರೆಯಲ್ಲಿ ಉತ್ಸವ ನಡೆಯುತ್ತಿದ್ದು ರಾಯರು ಕಾರುಣ್ಯ ತೋರಿದ್ದಾರೆ. ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಸಹಕಾರ ನೀಡುವ ಮೂಲಕ ರಾಯರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಶಾಮನ (ಕೃಷ್ಣ) ಊರಿನವರು ಶಾಮನೂರು ಎಂದು ಬಣ್ಣಿಸಿದರು.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಘವೇಂದ್ರ ಸ್ವಾಮಿಗಳು ಮಹಾತ್ಮರು. ಕಾಲಿಲ್ಲದವರಿಗೆ ನಡೆಯುವ ಶಕ್ತಿಯನ್ನು ಕೊಟ್ಟ ಕರುಣಾಳುಗಳು. ಅಂಥವರ ಉತ್ಸವ ಆಚರಿಸುತ್ತಿರುವುದರಿಂದ ದಾವಣಗೆರೆಗೆ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಂತ್ರಾಲಯದ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣೆ ಸಮಿತಿ ಅಧ್ಯಕ್ಷರಾದ ಅರ್ಚಕ ಪರಿಮಳಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಗುರುರಾಯರು ಜನ್ಮ ತಾಳಿದ್ದು ಹಾಗೂ ಪಟ್ಟಾಭಿಷಕ್ತರಾದದ್ದು ಫಾಲ್ಗುಣ ಮಾಸದಂದು. ಈ ಎರಡೂ ದಿನಗಳ ಕಾರಣದಿಂದಾಗಿ ಪ್ರತಿ ವರ್ಷ ರಾಯರ ಸಪ್ತಾಹ ಆಚರಿಸಲಾಗುತ್ತದೆ ಎಂದು ಹೇಳಿದರು.

ಮಂತ್ರಾಲಯ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ನಿರ್ದೇಶಕ ಕೆ. ಅಪ್ಪಣ್ಣಾಚಾರ್ಯರು, ಮಹೋತ್ಸವ ಸಮಿತಿ ಅಧ್ಯಕ್ಷ ಸಂಪನ್ನ ಮುತಾಲಿಕ್, ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್, ಸತ್ಯಬೋಧ ಕುಲಕರ್ಣಿ, ಡಾ.ಎಂ.ಸಿ. ಶಶಿಕಾಂತ್, ಎನ್. ಆರ್. ನಾಗಭೂಷಣ ರಾವ್, ಕೆ. ವಿಠ್ಠಲ್ ಇದ್ದರು. ಪಿ.ಆರ್. ಪ್ರಹ್ಲಾದರಾವ್ ನಿರೂಪಿಸಿದರು.

error: Content is protected !!