ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ರಥೋತ್ಸವಕ್ಕೆ ಜನಸಾಗರ

ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ರಥೋತ್ಸವಕ್ಕೆ ಜನಸಾಗರ

ತುಂಗಭದ್ರಾ ನದಿ ನಡುಗಡ್ಡೆಯಲ್ಲಿ ಬಿಡಾರ ಹಾಕಿದ ಭಕ್ತರು

ಮಲೇಬೆನ್ನೂರು, ಮಾ.11- ದಕ್ಷಿಣ ಭಾರತದ ಕಾಶಿ ಕ್ಷೇತ್ರವೆನಿಸಿರುವ ಮತ್ತು ಪವಾಡಗಳ ಪುಣ್ಯಭೂಮಿಯಾಗಿರುವ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾರಥೋತ್ಸವವು ಸೋಮವಾರ ಬೆಳಿಗ್ಗೆ ಜನಸಾಗರದ ನಡುವೆ ವೈಭವದೊಂದಿಗೆ ಜರುಗಿತು. 

ರಥದಲ್ಲಿ ಅಜ್ಜಯ್ಯನ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. 

ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರು ಅಜ್ಜಯ್ಯ… ಅಜ್ಜಯ್ಯ… ಎಂಬ ಜಯಘೋಷಗಳೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು.

ರಥೋತ್ಸವದ ಸಂದರ್ಭದಲ್ಲಿ ಭಕ್ತರು ರಥದ ಮೇಲೆ ಮಂಡಕ್ಕಿ – ಮೆಣಸಿನ ಕಾಳು ಮತ್ತು ಬಾಳೆ ಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಇನ್ನೂ ಕೆಲವು ರಥದ ಚಕ್ರಗಳಿಗೆ ತೆಂಗಿನ ಕಾಯಿಗಳನ್ನು ಒಡೆದು ಭಕ್ತಿ ಸಲ್ಲಿಸಿದರು. ಡೊಳ್ಳು, ವೀರಗಾಸೆ, ಕೀಲು ಕುಣಿತ, ಭಜನೆ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ-ಮೇಳಗಳು ರಥೋತ್ಸವಕ್ಕೆ ಮೆರಗು ತಂದವು.

ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂ ಗಾಣ, ತಮಿಳುನಾಡು ಸೇರಿದಂತೆ ಕರ್ನಾಟಕ ಹಲವಾರು ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರಿಂದ ಕೆಲ ಕಾಲ ನೂಕುನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ದೇವಸ್ಥಾನದ ಟ್ರಸ್ಟ್ ಕಮಿಟಿ ಹಾಗೂ ಸ್ವಯಂ ಸೇವಕರು ಹರಸಾಹಸಪಟ್ಟರು.

ಪುಣ್ಯಸ್ನಾನ : ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರೆಗೆ ಆಗಮಿಸಿದ್ದ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಅಜ್ಜಯ್ಯನ ಗದ್ದುಗೆ ದರ್ಶನ ಮಾಡಿದರು. ಅನೇಕರು ನದಿ ದಡದಲ್ಲಿ ಅಡುಗೆ ಮಾಡಿ, ಗಂಗೆ ಪೂಜೆ ಸಲ್ಲಿಸಿ, ಅಜ್ಜಯ್ಯನಿಗೆ ಎಡೆ ಮಾಡಿದರು.

ನದಿಯಲ್ಲಿ ನೀರಿನ ಹರಿವು ಬಹಳ ಕಡಿಮೆ ಇದ್ದ ಕಾರಣ ಜನರು ನದಿಯ ನಡು ಗಡ್ಡೆಯಲ್ಲಿ ಬಿಡಾರ ಹಾಕಿ ಅಲ್ಲಿಯೇ ತಂಗಿದ್ದರು.

ದೇವಸ್ಥಾನದ ಕಲ್ಯಾಣ ಮಂಟಪಗಳು ಮತ್ತು ಎಲ್ಲಾ ವಸತಿ ಗೃಹಗಳು ಭರ್ತಿಯಾಗಿದ್ದರಿಂದ ಭಕ್ತರು ತೋಟಗಳಲ್ಲಿ ಬಿಡಾರ ಹಾಕಿದ್ದರು.

ಅನ್ನದಾಸೋಹ ನಿರಂತರವಾಗಿ ನಡೆಯುತ್ತಿದ್ದು, ಭಕ್ತರು ಸ್ವಚ್ಛತೆಗೆ ಒತ್ತು ನೀಡಿ, ಸಹಕರಿಸುವಂತೆ ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಮನವಿ ಮಾಡಿದ್ದಾರೆ.

ಇದೇ ದಿನಾಂಕ 17 ರವರೆಗೆ ಅಜ್ಜಯ್ಯನ ಜಾತ್ರೆ ನಡೆಯಲಿದ್ದು, ಹರಿಹರ, ದಾವಣಗೆರೆ, ಹೊನ್ನಾಳಿ, ರಾಣೇಬೆನ್ನೂರು, ತುಮ್ಮಿನಕಟ್ಟೆ, ರಟ್ಟಿಹಳ್ಳಿಯಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದೆ. 

error: Content is protected !!