ಬರ: ನೀರಿನ ಕೊರತೆಯಾಗದಂತೆ ಕ್ರಮ ವಹಿಸಿ

ಬರ: ನೀರಿನ ಕೊರತೆಯಾಗದಂತೆ ಕ್ರಮ ವಹಿಸಿ

ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ: ಕೆಡಿಪಿ ಸಭೆಯಲ್ಲಿ ಸಚಿವ ಮಲ್ಲಿಕಾರ್ಜುನ್

ದಾವಣಗೆರೆ, ಮಾ.6- ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಿಸಲು ಹಣದ ಕೊರತೆ ಇಲ್ಲ. ಎಲ್ಲಿಯೇ ಸಮಸ್ಯೆ ಉಂಟಾದರೂ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಯ್ತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಅವರು ಮಾತನಾಡಿದರು.

ಕುಡಿಯುವ ನೀರಿಗೆ ಎಲ್ಲೂ ಹಾಹಾಕಾರ ಬರಬಾರದು. ಅಗತ್ಯವಿದ್ದರೆ ಬೋರ್‌ವೆಲ್ ಕೊರೆಸಿ ನೀರು ಕೊಡಿ. ಫ್ಲೋರೈಡ್ ಇರುವ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿ. ಹಣದ ಸಮಸ್ಯೆ ಇಲ್ಲ. 10 ಕೋಟಿ ರೂಪಾಯಿ ಹಣ ಮೀಸಲಿದೆ ಎಂದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 22 ಗ್ರಾಮಗಳಲ್ಲಿ 27 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು, ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ತಹಶೀಲ್ದಾರ್‌ಗಳಿಗೂ ಹಣ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್ ಹೇಳಿದರು.

ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಮಾತನಾಡಿ, ನೀರು ಪೂರೈಕೆಗೆ ಟ್ಯಾಂಕರ್ ಬಳಕೆಗೆ ಅನುಮತಿ ನೀಡಿದ್ದು ಜಿಪಿಎಸ್ ಅಳವಡಿಸಿದ ಟ್ಯಾಂಕರ್ ಬಾಡಿಗೆ ಪಡೆಯಲು ಷರತ್ತು ವಿಧಿಸಿದ್ದು ಇದರಿಂದ ಟ್ಯಾಂಕರ್ ಸಿಗುತ್ತಿಲ್ಲ ಎಂದಾಗ ಯಾವ ಟ್ಯಾಂಕರ್ ಪಡೆಯಲಾಗುತ್ತದೆಯೋ ಅದೇ ಟ್ಯಾಂಕರ್‍ಗೆ ಜಿಪಿಎಸ್ ಅಳವಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ತಲುಪದ ಫಲಾನುಭವಿಗಳನ್ನು ಗುರುತಿಸಿ, ಅಭಿಯಾನ ನಡೆಸಿ, ಆಧಾರ್ ಜೋಡಣೆ, ಬ್ಯಾಂಕ್ ಕೆವೈಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಾಂತ್ರಿಕ ಪರಿಣಿತರೊಂದಿಗೆ  ಸಮಸ್ಯೆ ಇತ್ಯಾರ್ಥಕ್ಕೆ ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು.

ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ಕೆ.ಜಿ ವರೆಗೆ ಅಕ್ಕಿಯನ್ನು ಕಡಿಮೆ ಕೊಡುತ್ತಿರುವ ದೂರುಗಳಿವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿದಾಗ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಲು ತಿಳಿಸಿ ಪ್ರಮಾಣಕ್ಕಿಂತ ಕಡಿಮೆ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಲಾಯಿತು.

ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡರವರು ಕೆಲವರು ಕೆರೆ ಒತ್ತುವರಿ ಮಾಡುವ ಜೊತೆಗೆ ಸ್ಮಶಾನವನ್ನು ಒತ್ತುವರಿ ಮಾಡಿದ್ದಾರೆ ಎಂದಾಗ ಸರ್ಕಾರಿ ಜಾಗವನ್ನು ಗುರುತಿಸಿ ಒತ್ತುವರಿ ಮಾಡದಂತೆ ಬೀಟ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮತ್ತು ಕೆರೆ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುವರೆಂದು ತಿಳಿಸಿದರು.

ಬರುವ ಜೂ.1ನೇ ತಾರೀಖಿನೊಳಗೆ ಎಲ್ಲಾ ಶಾಲೆಗಳಲ್ಲಿ ಶೌಚಾಲಯಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕಟ್ಟಿಸುವಂತೆ ಶಾಸಕ ಶಿವಗಂಗಾ ಬಸವರಾಜ್ ಡಿಡಿಪಿಐ ಅವರಿಗೆ ಸೂಚಿಸಿದರು.

ಮಾಯಕೊಂಡದಲ್ಲಿ ರಾತ್ರಿ ಪಾಳೆಯಕ್ಕೆ ವೈದ್ಯರ ಅಗತ್ಯವಿದೆ ಎಂದಾಗ, ವೈದ್ಯರ ವಸತಿ ಗೃಹ ನಿರ್ಮಾಣ ಸಾಧ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿ, ವಸತಿಗೃಹವಾದರೆ ರಾತ್ರಿ ವೈದ್ಯರ ಕೊರತೆ ನೀಗುತ್ತದೆ ಎಂದು ಡಿಹೆಚ್‌ಒ ಅವರಿಗೆ ಸೂಚಿಸಿದರು.

ಉಕ್ಕಡಗಾತ್ರಿ ಅಜ್ಜಯ್ಯನ ದರ್ಶನಕ್ಕೆ  ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಹರೀಶ್ ಹೇಳಿದರೆ, ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತಿದ್ದು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಬಸವಂತಪ್ಪ ಡಿಹೆಚ್‌ಒ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರುಗಳಾದ ಬಿ.ಪಿ. ಹರೀಶ್, ಡಿ.ಜಿ. ಶಾಂತನಗೌಡ, ಶಿವಗಂಗಾ ಬಸವರಾಜ್, ಕೆ.ಎಸ್. ಬಸವಂತಪ್ಪ,  ಜಿಲ್ಲಾಧಿಕಾರಿ ಡಾ.ವೆಂಟಕೇಶ್ ಎಂ.ವಿ, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ  ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!