ಉದ್ಯೋಗಕ್ಕೆ ಇಂಗ್ಲಿಷಿದ್ದರೂ ಮನಸ್ಸು ಕನ್ನಡವಾಗಿರಲಿ: ಸಾಹಿತಿ ಬಿ.ಟಿ. ಜಾಹ್ನವಿ

ಉದ್ಯೋಗಕ್ಕೆ ಇಂಗ್ಲಿಷಿದ್ದರೂ ಮನಸ್ಸು ಕನ್ನಡವಾಗಿರಲಿ: ಸಾಹಿತಿ ಬಿ.ಟಿ. ಜಾಹ್ನವಿ

ದಾವಣಗೆರೆ, ಮಾ. 5 – ಉದ್ಯೋಗಕ್ಕಾಗಿ ಇಂದು ಇಂಗ್ಲಿಷ್ ಬೇಕಾಗಿದ್ದರೂ, ಮನಸ್ಸು ಮಾತ್ರ ಕನ್ನಡವೇ ಆಗಿರಲಿ. ಎಲ್ಲೇ ಇದ್ದರೂ ಕನ್ನಡವಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಹೆಬ್ಬಯಕೆಯಾಗಿರಬೇಕಿದೆ ಎಂದು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಬಿ.ಟಿ. ಜಾಹ್ನವಿ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ಹೆಬ್ಬಾಳಿನ ಶ್ರೀ ರುದ್ರೇಶ್ವರ ವಿರಕ್ತಮಠದ ಅನುಭವ ಮಂಟಪದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಕುಂದುತ್ತಿದೆ. ವ್ಯಾವಹಾರಿಕವಾಗಿ ಕನ್ನಡ ಬಳಕೆ ಕಡಿಮೆಯಾಗುತ್ತಿದೆ. ವೃತ್ತಿಪರ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ಉದ್ಯೋಗಿಗಳಿಗೆ ಇಂಗ್ಲಿಷ್ ಕಡ್ಡಾಯವಾಗುತ್ತಿದೆ ಎಂದು ಹೇಳಿದರು.

ಇಂಗ್ಲಿಷ್ ವಿರೋಧಿಸಿ ಭಾವನಾತ್ಮಕವಾಗಿ ಕೂಗಾಡಿದರೆ ಪ್ರಯೋಜನವಿಲ್ಲ. ಕನ್ನಡಕ್ಕಿಂತಲೂ ಪ್ರಾಮುಖ್ಯತೆ ಪಡೆಯುವಷ್ಟು ಇಂಗ್ಲಿಷ್ ಇಂದು ಅನಿವಾರ್ಯ ಆಗಿದೆ. ನಿತ್ಯ ಮಾತಿನ ಮುಕ್ಕಾಲು ಭಾಗ ಇಂಗ್ಲೀಷೇ ಆಗಿದೆ ಎಂದು ಜಾಹ್ನವಿ ಹೇಳಿದರು.

ಈ ವಾಸ್ತವವನ್ನು ಒಪ್ಪಿಕೊಳ್ಳಬೇಕಿದೆ. ಭಾವನಾತ್ಮಕವಾಗಿ ಆವೇಶಗೊಳ್ಳುವ ಬದಲಿಗೆ ತಾರ್ಕಿಕವಾಗಿ ಚಿಂತಿಸಿ ಕ್ರಿಯಾತ್ಮಕವಾಗಿ ವರ್ತಿಸ ಬೇಕಿದೆ. ಶಿಕ್ಷಣ ಹಾಗೂ ಉದ್ಯೋಗಕ್ಕೆ ಭಾಷೆ ಇಂಗ್ಲಿಷೇ ಆಗಿದ್ದರೂ ಮನಸ್ಸು ಕನ್ನಡವಾಗಿರಲಿ. ಈ ನಿಟ್ಟಿನಲ್ಲಿ ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿ ಪ್ರತಿಯೊಬ್ಬ ಕನ್ನಡಿಗನ ಹೆಬ್ಬಯಕೆಯಾಗಲಿ ಎಂದವರು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಎಸ್. ಬಸವಂತಪ್ಪ, ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಅಭಿಯಾನ ಬೆಳೆಸಿಕೊಳ್ಳಬೇಕು. ದೇಶದಲ್ಲೇ ಕನ್ನಡ ಪರಂಪರೆ ಮಾದರಿ ಆಗಬೇಕು ಎಂದರು.

ರಾಜ್ಯ ಸರ್ಕಾರ ವಾಣಿಜ್ಯ ಫಲಕಗಳಲ್ಲಿ ಶೇ.60ರಷ್ಟು ಕನ್ನಡಕ್ಕೆ ಮೀಸಲಿಡಲು ಕಾನೂನು ತಂದಿದೆ. ಅದೇ ರೀತಿ ಕಾರ್ಖಾನೆಗಳಲ್ಲಿ ಶೇ.80-90ರಷ್ಟು ಸ್ಥಾನಗಳು ಕನ್ನಡಿಗರಿಗೆ ಮೀಸಲಿಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತ ನಾಡಿ, ವಚನಕಾರರಿಂದ ಜಾನಪದ ಕಲಾವಿದ ರವರೆಗೆ ಕನ್ನಡದ ಸೇವೆ ಮಾಡಿದ ಪರಂಪರೆ ಇದೆ. ಇಂತಹ ಪರಂಪರೆಯನ್ನು ಉಳಿಸಿ, ಬೆಳೆಸಬೇಕಿದೆ. ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಿದರೂ, ವಚನ, ದಾಸ ಸಾಹಿತ್ಯ ಹಾಗೂ ಜನಪದ ಕಲಿಸಿ ಎಂದು ಕಿವಿಮಾತು ಹೇಳಿದರು.

ನಿಕಟಪೂರ್ವ ತಾಲ್ಲೂಕು ಸಮ್ಮೇಳನಾಧ್ಯಕ್ಷ  ಬಿ.ಎನ್. ಮಲ್ಲೇಶ್ ಅವರು ಜಾಹ್ನವಿ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.

ಇದಕ್ಕೂ ಮುಂಚೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಹಲವಾರು ಕಲಾ ತಂಡಗಳು ಭಾಗವಹಿಸಿದ್ದವು.

ವೇದಿಕೆಯ ಮೇಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ತಾಲ್ಲೂಕು ಕ.ಸಾ.ಪ.  ಅಧ್ಯಕ್ಷೆ ಸುಮತಿ ಜಯಪ್ಪ, ಜಾನಪದ ವಿದ್ವಾಂಸ ಎಂ.ಜಿ. ಈಶ್ವರಪ್ಪ, ಹೆಬ್ಬಾಳು ಗ್ರಾ.ಪಂ. ಅಧ್ಯಕ್ಷೆ ಹಂಪಮ್ಮ, ಮುಖಂಡರಾದ ಮಹೇಂದ್ರಪ್ಪ, ಮುಜಾಹಿದ್ ಖಾನ್, ನೆಸ್ವಿ ಶಾಂತಪ್ಪ ನರಗನಹಳ್ಳಿ, ರತ್ನಮ್ಮ, ಹೆಚ್.ಪಿ. ಮುರುಗೇಂದ್ರಪ್ಪ ಹೆದ್ನೆ, ಶಿವಾ ನಂದ ಗುರೂಜಿ, ಶಿವಕುಮಾರ್ ಹೆಬ್ಬಾಳ್, ಹೆಚ್.ಎಸ್. ಮುರುಗೇಂದ್ರಪ್ಪ ಹೊನ್ನನಾಯ್ಕನಹಳ್ಳಿ, ದೊರೆಸ್ವಾಮಿ, ಲೋಕಾಚಾರ್ ಮಣ್ಣೂರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!