ದುಗ್ಗಮ್ಮನ ಜಾತ್ರೆ: ಭಕ್ತಾದಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿ

ದುಗ್ಗಮ್ಮನ ಜಾತ್ರೆ: ಭಕ್ತಾದಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿ

ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಸೂಚನೆ

ದಾವಣಗೆರೆ, ಮಾ. 5 – ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆಯು ಇದೇ ಮಾ.17 ರಿಂದ 20 ರ ವರೆಗೆ ಅದ್ದೂರಿಯಾಗಿ ಜರುಗುವುದರಿಂದ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ದಾವಣಗೆರೆ ದಕ್ಷಿಣ ಶಾಸಕರು ಹಾಗೂ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

 ಮಂಗಳವಾರ ದೇವಸ್ಥಾನದ ಆವರಣದಲ್ಲಿ ಜಾತ್ರಾ
ಸಿದ್ದತೆ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ ಜನರಿಗೆ ಸುಗಮ ಸಂಚಾರ, ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ, ಪೊಲೀಸ್ ಬಂದೋಬಸ್ತ್, ಶೌಚಾಲಯದ ವ್ಯವಸ್ಥೆ ಸೇರಿದಂತೆ ಜನರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.

ಜಾತ್ರೆಯಲ್ಲಿ ಜನರು ಹರಕೆಯ ವಸ್ತುಗಳನ್ನು ಬಿಡುವುದು, ಹೂ, ಬೇವಿನಸೊಪ್ಪು ತರುವುದರಿಂದ ಆಗಿಂದಾಗ್ಗೆ ತೆರವು ಮಾಡಬೇಕಾಗುತ್ತದೆ. ಇದಕ್ಕಾಗಿ ಪಾಲಿಕೆಯಿಂದ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಮತ್ತು ನಿರಂತರ ನೀರು ಸರಬರಾಜು ಮಾಡಬೇಕು. ದೇವಸ್ಥಾನದ ಬಳಿ ಎರಡು ಶೌಚಾಲಯಗಳು ಇದ್ದು ಹೆಚ್ಚುವರಿಯಾಗಿ ಮೊಬೈಲ್ ಟಾಯ್ಲೆಟ್‍ಗಳನ್ನು ಪಾಲಿಕೆಯಿಂದ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು. 

 ಪಾಲಿಕೆ ಆಯುಕ್ತರು ಮಾತನಾಡಿ ಪಾಲಿಕೆಯಿಂದ ಸ್ವಚ್ಚತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮತ್ತು ಈಗಾಗಲೇ ಇಲ್ಲಿನ ರಸ್ತೆ ಗುಂಡಿ ಮುಚ್ಚಲು, ಚರಂಡಿ ದುರಸ್ಥಿಗೆ ಹಾಗೂ ಈ ಭಾಗದಲ್ಲಿನ 40 ದೇವಸ್ಥಾನಗಳ ಸುಣ್ಣ ಬಣ್ಣಕ್ಕಾಗಿ ಪಾಲಿಕೆಯಿಂದ 2 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು. 

ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು ಪಾಲಿಕೆಯಿಂದ ಚರಂಡಿಗಳಿಗೆ ರಾಸಾಯನಿಕ ಸಿಂಪರಣೆ ಮಾಡಬೇಕು. ಆರೋಗ್ಯ ಇಲಾಖೆಯಿಂದ ಮೊಬೈಲ್ ಚಿಕಿತ್ಸಾಲಯ ನಿಯೋಜಿಸಿ ತುರ್ತು ಸೇವೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಬೆಸ್ಕಾಂ ಇಲಾಖೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಸೂಚಿಸಿದರು.

ಜಾತ್ರೆಯಲ್ಲಿ ಜೇಬುಗಳ್ಳರು, ಸರಗಳ್ಳಲು ಹೆಚ್ಚಾಗುವ ಸಂದರ್ಭವಿರುತ್ತದೆ. ಎಲ್ಲಾ ಕಡೆ ಸಿಸಿ ಕ್ಯಾಮೆರಾ ಅಳವಡಿಕೆಯನ್ನು ದೇವಸ್ಥಾನ ಸಮಿತಿಯಿಂದ ಮಾಡಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

18 ಕಡೆ ಚೆಕ್ ಪೋಸ್ಟ್‍ಗಳ ನಿರ್ಮಾಣ ಮಾಡಲಾಗುತ್ತದೆ. ರಸ್ತೆ ಬದಿಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ಅವಕಾಶ ಮಾಡಿಕೊಡದೆ ಸುಗಮ ಸಂಚಾರಕ್ಕಾಗಿ ಅನುಕೂಲ ಮಾಡಿಕೊಡಬೇಕು. ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಬೇಕಾ ಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹುಟ್ಟಿಸುವ ಪೋಸ್ಟ್‍ಗಳನ್ನು ಹಾಕಬಾರದು. ಜಾತ್ರಾ ವೇಳೆ ಜಗಳಗಳು ನಡೆಯದಂತೆ ದೇವಸ್ಥಾನ ಸಮಿತಿಯಿಂದ ಸ್ವಯಂ ಸೇವಕರನ್ನು ನೇಮಿಸುವ ಮೂಲಕ ಆಗಮಿಸುವ ಭಕ್ತರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ನೋಡಿಕೊಂಡು ಅನಾವಶ್ಯಕವಾಗಿ ಪೊಲೀಸ್ ಭಾಗಿಯಾಗದಂತೆ ನೋಡಿಕೊಳ್ಳಬೇಕೆಂದರು.

ದೇವಸ್ಥಾನದ ಟ್ರಸ್ಟ್‌ ಧರ್ಮದರ್ಶಿ  ಗೌಡ್ರ ಚನ್ನಬಸಪ್ಪ ಮಾತನಾಡಿ, ಎಲ್ಲರ ಸಹಕಾರದಿಂದ ಜಾತ್ರೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗೋಣ ಎಂದರು.

ಪಾಲಿಕೆ ಮೇಯರ್ ವಿನಾಯಕ್ ಬಿ.ಹೆಚ್, ಟ್ರಸ್ಟ್ ಸದಸ್ಯ ಅಥಣಿ ವೀರಣ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್, ಪಾಲಿಕೆ ಆಯುಕ್ತರಾದ ರೇಣುಕಾ, ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ಡಾ.ಅಶ್ವಥ್ ಎಂ.ಬಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!