ಈ ಬಾರಿಯ ಬಿಸಿಲು ಬಿರುಸಿನಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆಯ ಇತ್ತೀಚಿನ ವರದಿಗಳು ತಿಳಿಸಿವೆ. ಕಳೆದ 2024ರ ಬೇಸಿಗೆ ಯಾವುದೇ ಕಾರಣಕ್ಕೂ ಹಿತಾನುಭವ ಇಲ್ಲವೇ ಅಚ್ಛೇ ದಿನ್ ಕೊಡುವ ಗ್ಯಾರಂಟಿ ಇಲ್ಲ ಎಂದು ವಿಜ್ಞಾನಿಗಳು ಕಳೆದ ವರ್ಷದಿಂದಲೇ ಹೇಳುತ್ತಿದ್ದಾರೆ. ಇತ್ತೀಚಿನ ಹವಾಮಾನ ಇಲಾಖೆಯ ವರದಿ ಆ ಮುನ್ಸೂಚನೆಯ ಮುಂದುವರಿದ ಭಾಗವಾಗಿದೆ ಅಷ್ಟೇ.
ಆದರೆ, ಜೀವ ಜಲದ ವಿಷಯದಲ್ಲಿ ಆಡಳಿತ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಎಂಬುದಷ್ಟೇ ಈಗಿರುವ ಪ್ರಶ್ನೆಯಾಗಿದೆ. ಬೇಸಿಗೆ ಬೆಳೆ ಬೆಳೆಯುವುದು ದೂರದ ಮಾತಾಗಿದೆ. ದೀರ್ಘಾವಧಿ ತೋಟದ ಬೆಳೆ ಉಳಿಸಿಕೊಂಡು, ಜನ – ಜಾನುವಾರುಗಳ ಕುಡಿಯುವ ನೀರಿನ ಅಗತ್ಯ ನೋಡಿಕೊಂಡರೆ ಸಾಕೆಂಬ ಪರಿಸ್ಥಿತಿ ಇದೆ. ಅಣೆಕಟ್ಟೆ, ಕೆರೆಗಳು ಹಾಗೂ ಬೋರುಗಳಲ್ಲಿರುವ ಅಷ್ಟೋ ಇಷ್ಟೋ ನೀರನ್ನು ಜೂನ್ವರೆಗೆ ಬಳಕೆ ಮಾಡಿಕೊಳ್ಳುವ ಬಗ್ಗೆ ಸಮರ್ಪಕ ಯೋಜನೆ ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಕಳೆದ 2023ರಲ್ಲಿ ಇದೇ ಭದ್ರಾ ಅವಧಿಯಲ್ಲಿ ಭದ್ರಾ ಅಣೆಕಟ್ಟೆಯಲ್ಲಿ 168 ಅಡಿ ಮಟ್ಟದ ನೀರಿತ್ತು. ಅಣೆಕಟ್ಟೆಯಲ್ಲಿದ್ದ 51 ಟಿಎಂಸಿ ನೀರಿನಲ್ಲಿ ಬಳಸಿ ಉಳಿಸಲೂ ಅವಕಾಶವಿತ್ತು. ಆದರೆ, ಜೂನ್ ವೇಳೆಗೆ ಜಲಾಶಯದ ನೀರಿನ ಮಟ್ಟ ಏನಿಲ್ಲ.. ಏನಿಲ್ಲ.. ಎಂಬ ಹಂತಕ್ಕೆ ಹೋಗಿತ್ತು. ಇದು ನಮ್ಮಲ್ಲಿ ನೀರು ಸಮೃದ್ಧವಾಗಿದ್ದಾಗ ಉಳಿಸಿಕೊಳ್ಳುವ ದೂರಾಲೋಚನೆ ಕೊರತೆ ಇರುವುದನ್ನು ತೋರಿಸುತ್ತದೆ. ಈ ಬಾರಿ ನೀರಿನ ಮಟ್ಟ 137.5 ಅಡಿಗೆ ಕುಸಿದಿದೆ. ಇರುವ 12-13 ಟಿಎಂಸಿ ನೀರನ್ನು ಮುಂದಿನ ಜೂನ್ವರೆಗೂ ಎಳೆಯಬೇಕಿದೆ.
ಭಾರತಕ್ಕಿಂತ ಕಡಿಮೆ ಮಳೆ ಬಂದರೂ, ಫಲವತ್ತಾದ ಮಣ್ಣಿರದೇ ಇದ್ದರೂ ಸಮೃದ್ಧಿ ಕಾಣುವ ಇಸ್ರೇಲ್ನಂತಹ ದೇಶಗಳು ಒಂದೆಡೆ. ಬೆಳೆಗೆ ಅಗತ್ಯವಾದ ಬಿಸಿಲು, ಮಳೆ ಹಾಗೂ ಫಲವತ್ತಾದ ಮಣ್ಣಿದ್ದರೂ ಪದೇ ಪದೇ ಸಂಕಷ್ಟಕ್ಕೆ ಗುರಿಯಾಗುವ ಭಾರತ ಮತ್ತೊಂದೆಡೆ.
ಭಾರತದ ಕೃಷಿಯು ನೆರೆ ಹಾಗೂ ಬರದ ಜೊತೆ ಹೋರಾಟ ನಡೆಸುವುದು ಹೊಸ ವಿಷಯವೇನೂ ಅಲ್ಲ. ಹವಾಮಾನ ಮುನ್ಸೂಚನೆ ಹಾಗೂ ನೀರಿನ ಅಗತ್ಯತೆಯ ಬಗ್ಗೆ ತಿಳುವಳಿಕೆ ಈಗ ಅಪಾರವಾಗಿ ಹೆಚ್ಚಾಗಿದೆ. ಆದರೂ, ನೀರಿನ ಬಳಕೆಯ ವಿಷಯದಲ್ಲಿ ಗಂಭೀರತೆಯ ಕೊರತೆ ಇದೆ. ಭಾರತದ ನಗರ ಪ್ರದೇಶಗಳಲ್ಲಿ ಉತ್ಪಾದನೆಯಾಗುವ ಕೊಳಚೆ ನೀರನ್ನು ಸಂಸ್ಕರಿಸುವ ಪ್ರಮಾಣ ಶೇ.28-30ರ ಹಂತದಲ್ಲಿದೆ ಎಂದು ವರದಿಗಳು ತಿಳಿಸುತ್ತವೆ. ಮತ್ತೊಂದೆಡೆ ಇಸ್ರೇಲ್ನಂತಹ ದೇಶ ತನ್ನಲ್ಲಿನ ಶೇ.90ರಷ್ಟು ನೀರನ್ನು ಮರು ಬಳಕೆ ಮಾಡಿಕೊಳ್ಳುತ್ತಿದೆ. ಜಲ ಎಂಬ ಸಂಪನ್ಮೂಲವನ್ನು ಭಾರತದಲ್ಲಿ ನಿರ್ಲಕ್ಷ್ಯದಿಂದ ಕಾಣುತ್ತಿರುವುದಕ್ಕೆ ಇದೇ ಉದಾಹರಣೆಯಾಗಿದೆ.
ಮಳೆ ಬಂದಾಗ ಸಮರ್ಪಕ ನೀರು ಒದಗಿಸುವಲ್ಲಿ ಹೆಗ್ಗಳಿಕೆಯೇನೂ ಇಲ್ಲ. ನಿಜವಾದ ಹೆಗ್ಗಳಿಕೆ – ವಿಕಸಿತ ಭಾರತ ಎಂದರೆ ಮಳೆ ಕೊರತೆಯ ಸಂದರ್ಭದಲ್ಲೂ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಪರಿಸ್ಥಿತಿ ನಿಭಾಯಿಸುವುದಾಗಿದೆ.
ನೀರಿನ ಬಳಕೆಯ ಕುರಿತ ಮನೋಭಾವ ಬದಲಾಗುವ ತುರ್ತು ಅಗತ್ಯವಿದೆ. ದೇಶದಲ್ಲಿ ಕಾನೂನು ತಗಾದೆಯಲ್ಲಿ ಸಿಲುಕದೇ ಇರುವ ನದಿಗಳೇ ಇಲ್ಲ ಎನ್ನಬಹುದು. ಅಂತರ ರಾಜ್ಯಗಳ ನಡುವೆ ಜಲ ವಿವಾದಗಳಿವೆ. ಸಾಲದು ಎಂಬಂತೆ, ರಾಜ್ಯದೊಳಗೆ ಇರುವ ಅಣೆಕಟ್ಟೆಗಳಲ್ಲಿನ ನೀರಿನ ಬಳಕೆಗೂ ತಗಾದೆಗಳು. ಬಲ – ಎಡ ದಂಡೆಗಳು, ಮೇಲ್ಭಾಗ – ಕೊನೆ ಭಾಗದ ತಕರಾರುಗಳಿಗೆ ಅಂತ್ಯವಿಲ್ಲದಂತಾಗಿದೆ.
ಹೋಗಲಿ ಭಾರತದಲ್ಲಿ ನೀರಿನ ಕೊರತೆಯೇನಾದರೂ ಇದೆಯಾ ಎಂದರೆ, ಅದೂ ಇಲ್ಲ. ಉದಾಹರಣೆಗೆ ತುಂಗಾದಲ್ಲಿ ನೀರು ಹೆಚ್ಚಾಗಿ ಆಂಧ್ರಕ್ಕೆ ಹರಿದು ಹೋಗುತ್ತಿದೆ. ಭದ್ರಾದಲ್ಲಿ ನೀರಿನ ಸಮಸ್ಯೆ ಆಗಾಗ ಕಾಡುತ್ತಲೇ ಇರುತ್ತದೆ. ಭದ್ರಾ ಮೇಲ್ದಂಡೆಯಂತಹ ಯೋಜನೆ ಜಾರಿ ಕುಂಟುತ್ತಾ ಸಾಗುತ್ತಿದೆ. ಈ ಯೋಜನೆ ಜಾರಿಗೆ ಬಂದಿದ್ದರೆ, ತುಂಗಾ ಅಣೆಕಟ್ಟೆಯಿಂದ ಭದ್ರಾ ಜಲಾಶಯಕ್ಕೆ ನೀರು ತರಲು ಸಾಧ್ಯವಾಗುತ್ತಿತ್ತು. ಆಗ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಮಸ್ಯೆ ಇಷ್ಟಾಗಿ ಕಾಡುತ್ತಿರಲಿಲ್ಲ.
ಭಾರತಕ್ಕಿಂತ ಕಡಿಮೆ ಮಳೆ ಬಂದರೂ, ಫಲವತ್ತಾದ ಮಣ್ಣಿರದೇ ಇದ್ದರೂ ಸಮೃದ್ಧಿ ಕಾಣುವ ಇಸ್ರೇಲ್ನಂತಹ ದೇಶಗಳು ಒಂದೆಡೆ. ಬೆಳೆಗೆ ಅಗತ್ಯವಾದ ಬಿಸಿಲು, ಮಳೆ ಹಾಗೂ ಫಲವತ್ತಾದ ಮಣ್ಣಿದ್ದರೂ ಪದೇ ಪದೇ ಸಂಕಷ್ಟಕ್ಕೆ ಗುರಿಯಾಗುವ ಭಾರತ ಮತ್ತೊಂದೆಡೆ.
ಬೃಹತ್ ಹೆದ್ದಾರಿ, ರೈಲು ಮಾರ್ಗ, ಸೇತುವೆ ಇತ್ಯಾದಿ ಮೂಲಭೂತ ಸಂಪರ್ಕ ಸೃಷ್ಟಿಸುವುದರಿಂದ ದೇಶದ ಅಭಿವೃದ್ಧಿಯಾಗುತ್ತದೆ. ಅದೇ ರೀತಿ ನೀರಿನ ದಕ್ಷ ಬಳಕೆಗೆ ಬೃಹತ್ ಹೂಡಿಕೆ ಮಾಡಿದರೂ ಅಭಿವೃದ್ಧಿಯಾಗುತ್ತದೆ. ಹೀಗಾಗಿ ನೀರಿನ ಸಂಗ್ರಹ, ಸಾಗಣೆ ಹಾಗೂ ಬಳಕೆಗಾಗಿ ದಕ್ಷ ಯೋಜನೆಗಳಿಗೆ ಹೂಡಿಕೆ ಮಾಡಲು ಇದು ಸಕಾಲ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ, ನೀರಿನ ಬಳಕೆ ಬಗ್ಗೆ ದೀರ್ಘಾವಧಿ ಯೋಜನೆ ಹಾಗೂ ಜಲ ವಿವಾದಗಳ ಇತ್ಯರ್ಥಕ್ಕೆ ಸಮರ್ಪಕ ವ್ಯವಸ್ಥೆಗಳಿಲ್ಲ. ವಿವಾದ ಗಳು ಸಂಘರ್ಷಗಳಾಗಿ, ಜಲ ಸಮರಗಳಾಗಿ ಪರಿವರ್ತನೆ ಯಾಗುವುದಕ್ಕೆ ಮುಂಚೆ ನೀರಿನ ಬಳಕೆಯ ಹಾದಿ ಬದಲಿಸಿಕೊಳ್ಳಬೇಕಿದೆ.
ಅಸ್ಮಿತ