ನಾಡಿನ ಯುವ ಶಿವಾಚಾರ್ಯರಿಗೆ ಮಾರ್ಗದರ್ಶಕರಾಗಿದ್ದ ಸದ್ಯೋಜಾತ ಶ್ರೀ

ನಾಡಿನ ಯುವ ಶಿವಾಚಾರ್ಯರಿಗೆ ಮಾರ್ಗದರ್ಶಕರಾಗಿದ್ದ ಸದ್ಯೋಜಾತ ಶ್ರೀ

ಶ್ರೀ ಸದ್ಯೋಜಾತ ಶಿವಾಚಾರ್ಯರ ಸ್ಮರಣೋತ್ಸವದಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ

ದಾವಣಗೆರೆ, ಮಾ. 4- ಸರಳ, ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದ ನಗರದ ಹಿರೇಮಠದ ಲಿಂ. ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಯವರು ನಾಡಿನ ಯುವ ಶಿವಾಚಾರ್ಯರಿಗೆ ಉತ್ಸಾಹ, ಪ್ರೋತ್ಸಾಹ ತುಂಬುವ ಮೂಲಕ ಶಿವಾಚಾರ್ಯರು ಹೇಗಿರಬೇಕೆಂಬುದರ ಬಗ್ಗೆ ಸದಾ ಮಾರ್ಗದರ್ಶನ ನೀಡುತ್ತಾ ಬಂದವರಾಗಿದ್ದರು ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಡಾ. ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಹಿರೇಮಠದ ಆವರಣದಲ್ಲಿ ಹಿರೇಮಠದ ವಂಶಸ್ಥರು ಇಂದು ಸಂಜೆ ಹಮ್ಮಿಕೊಂಡಿದ್ದ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರೂ, ದಾವಣಗೆರೆ ಹಿರೇಮಠದ ಪೀಠಾಧ್ಯಕ್ಷರೂ ಆಗಿದ್ದ ಡಾ. ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ 16 ನೇ ಸಂಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಸದ್ಯೋಜಾತ ಶ್ರೀಗಳು ಭಕ್ತರಿಗೆ ಧರ್ಮ ಪ್ರಚಾರಕರಾಗಿ, ಉತ್ತಮ ವಿದ್ಯಾ ಗುರುಗಳಾಗಿ, ಶಿವಾಚಾರ್ಯರಿಗೆ ಸನ್ಮತಿಯ ಮಾರ್ಗದರ್ಶಕ ರಾಗಿದ್ದರು. ಬದುಕಿನ ಪಯಣದಲ್ಲಿ ಪ್ರಗತಿಪರ ಚಿಂತನೆ ಮಾಡಿಕೊಂಡು ಬಂದಿದ್ದರು ಎಂದು ಶ್ರೀಗಳ ಗುಣಗಾನ ಮಾಡಿದರು.

ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಸ್ಥಾಪನೆ ಮಾಡುವ ಮೂಲಕ ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ನಾಡಿನ ಎಲ್ಲಾ ಪ್ರಾಂತದ ಶಿವಾಚಾರ್ಯರನ್ನು ಆಮಂತ್ರಿಸಿ, ಬೃಹತ್ ಅಧಿವೇಶನ ಮಾಡಿದ ಕೀರ್ತಿ ಸದ್ಯೋಜಾತ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಸಮಾಜಕ್ಕೆ ಏನು ಬೇಕಾಗಿತ್ತೋ ಅದನ್ನು ಕೊಡುವುದರ ಜೊತೆಗೆ ಬದುಕನ್ನು ಬಂದ ಹಾಗೆಯೇ ಸ್ವೀಕರಿಸಿದ ಗುರುಗಳು. ಎಲ್ಲಾ ರೀತಿಯ ವಿಚಾರಧಾರೆಗಳನ್ನು ಭಕ್ತರೊಂದಿಗೆ ಹಂಚಿಕೊಂಡ ವರು ಸದ್ಯೋಜಾತ ಶ್ರೀಗಳು. ಇಂತಹ ಪೂಜ್ಯರ ಸ್ಮರಣೆ ಅತ್ಯವಶ್ಯ ಎಂದು ಹೇಳಿದರು.

ಮಹಾತ್ಮರ ಸ್ಮರಣೆ ಮಾಡುವುದರಿಂದ ಮನುಷ್ಯನ ಜೀವನದಲ್ಲಿ ಆಯುಷ್ಯ, ಕೀರ್ತಿ, ಯಶಸ್ಸು, ಬಲ  ಎಂಬ ನಾಲ್ಕು ರೀತಿಯ ಫಲಗಳು ಲಭಿಸುತ್ತವೆ. ಅದರಂತೆ ಸಮಾಜದಲ್ಲಿ ಗುರು-ಹಿರಿಯರನ್ನು, ತಂದೆ-ತಾಯಿಗಳನ್ನು ಸ್ಮರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದರು.

ಜವಳಿ ವರ್ತಕ ಬಿ.ಸಿ. ಉಮಾಪತಿ ಮಾತ ನಾಡಿ, ಸದ್ಯೋಜಾತ ಸ್ವಾಮೀಜಿಯವರು ಕೇವಲ ಸ್ವಾಮಿಗಳಾಗಿರದೇ, ಕಾಯಕ ಜೀವಿಯಾಗಿ, ಉತ್ತಮ ಬೋಧಕರಾಗಿ, ಧಾರ್ಮಿಕ ಪ್ರಚಾರಕ ರಾಗಿ ಜೀವನದುದ್ದಕ್ಕೂ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆಂದು ಹೇಳಿದರು.

ಶ್ರೀಗಳ ಧರ್ಮ ಕಾರ್ಯಗಳನ್ನು ಪಾಲಿಸುತ್ತಾ ಬಂದಿದ್ದ ನಾಡಿನ ಶಿವಾಚಾರ್ಯರಿಗೆ ದಾವಣಗೆರೆ ಹಿರೇಮಠ ತವರು ಮನೆಯಂತಿತ್ತು. ಯುವ ಜನರಿಗೆ ಧರ್ಮ ಬೋಧನೆ ಮಾಡುತ್ತಾ ಬಂದವರು. ಸಮಾಜ ಸೇವಾ ಕಾರ್ಯಗಳು ಶ್ಲ್ಯಾಘನೀಯ ಎಂದರು.

ಇಂದಿನ ಯುವ ಜನತೆ ಧಾರ್ಮಿಕ ವಿಚಾರಗಳಿಂದ ದೂರ ಉಳಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಯುವಕರಿಂದ ಸ್ಮರಿಸುವಂತಹ ಕೆಲಸಗಳು ಆಗುತ್ತಿಲ್ಲ. ಕೇವಲ ಓದಿಗೆ ಸೀಮಿತರಾಗಿದ್ದಾರೆ. ನಾನು ಡಾಕ್ಟರ್, ಇಂಜಿನಿಯರ್ ಆಗಬೇಕೆಂಬ ಕನಸು ಕಾಣುತ್ತಾರೆ. ಸಂಸ್ಕಾರವನ್ನು ಮರೆಯುತ್ತಾರೆ. ಮನೆಯಲ್ಲಿ ಮೊದಲು ಮಕ್ಕಳಿಗೆ ಓದಿನ ಜೊತೆಗೆ ಸಂಸ್ಕಾರ ವನ್ನು ಕಲಿಸಬೇಕಾಗಿದೆ ಎಂದು ಕರೆ ನೀಡಿದರು.

ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾ ಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿ ಕಂಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದಾವಣಗೆರೆ ವಿವಿ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್.ಜಿ. ವಿಜಯಕುಮಾರ್ `ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು.

ಹರಿಹರದ ಕೆ.ವೈ. ಸೃಷ್ಠಿ, ನಮಿತ, ಮಲ್ಲಿಕಾರ್ಜುನ್ ಇವರು ಮನೋಜ್ಞವಾದ ಯೋಗ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು. ಎಸ್. ಅರ್ಚನಾ ನಿರೂಪಿಸಿದರು. ಡಾ. ಸ್ವಾಮಿ ತ್ರಿಭುವಾನಂದ ಸ್ವಾಗತಿಸಿದರು.

ಶ್ರೀಮತಿ ವಿಜಯ ಹಿರೇಮಠ, ವಾಸವಿ ಯುವತಿಯರ ಭಜನಾ ಮಂಡಳಿಯ ಡಿ.ಆರ್. ಕೃಷ್ಣವೇಣಿ ಸಂಗಡಿಗರು ಹಾಗೂ ಶ್ರೀ ಗುರು ಪಂಚಾಕ್ಷರ ಸಂಗೀತ ವಿದ್ಯಾಲಯದ ವಿದ್ಯಾರ್ಥಿ ವೃಂದದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 

error: Content is protected !!