ಶಾಂತಿಸಾಗರದಲ್ಲಿ ಇನ್ನು 20 ದಿನಗಳಿಗೆ ಮಾತ್ರ ನೀರಿನ ಸಂಗ್ರಹ

ಶಾಂತಿಸಾಗರದಲ್ಲಿ ಇನ್ನು 20 ದಿನಗಳಿಗೆ ಮಾತ್ರ ನೀರಿನ ಸಂಗ್ರಹ

ಅನಧಿಕೃತ ಪಂಪ್‍ಸೆಟ್ ತೆರವಿಗೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಸೂಚನೆ

ದಾವಣಗೆರೆ,ಫೆ. 28-  ಶಾಂತಿ ಸಾಗರದಲ್ಲಿ (ಸೂಳೆಕೆರೆ) ಮುಂದಿನ 20 ದಿನಗಳಿಗೆ ಮಾತ್ರ  ನೀರಿನ ಸಂಗ್ರಹವಿದ್ದು ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವು ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬೆಸ್ಕಾಂ, ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್‍ಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಸೂಚನೆ ನೀಡಿದರು. 

ವಿಪತ್ತು ನಿರ್ವಹಣೆ ಕುರಿತಂತೆ  ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ  ಮಾತನಾಡಿದ ಅವರು ಶಾಂತಿಸಾಗರದ ಮೂಲಕ ಚನ್ನಗಿರಿ, ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗಳಿಗೆ ಬಳಕೆಯಾಗುತ್ತಿದೆ ಎಂದರು. 

ಶಾಂತಿಸಾಗರದಿಂದ ಎರಡು ಜಿಲ್ಲೆಗಳ ಪ್ರಮುಖ ಪಟ್ಟಣ, ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಕೆರೆಗೆ ಅನಧಿಕೃತವಾಗಿ ಪಂಪ್‍ಸೆಟ್ ಅಳವಡಿಸಿಕೊಂಡು ಅಕ್ರಮವಾಗಿ ನೀರೆತ್ತಲಾಗುತ್ತಿದೆ. ಇದರಿಂದ ನೀರಿನ ಸಂಗ್ರಹ ತುಂಬಾ ಇಳಿಕೆಯಾಗಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆಯಾಗಲಿದೆ ಎಂದರು. 

ಬೆಸ್ಕಾಂನಿಂದ ವಿದ್ಯುತ್ ಪರಿವರ್ತಕ ಗಳನ್ನು ಅಳವಡಿಸಿಕೊಟ್ಟಿದ್ದರಿಂದ ರೈತರು ಅನಧಿಕೃತವಾಗಿ ಕೆರೆಯಲ್ಲಿನ ನೀರನ್ನು ಬಳಕೆ ಮಾಡುತ್ತಿದ್ದಾರೆ. ಅನಧಿಕೃತವಾಗಿ ಅಳವಡಿಸಿ ರುವ ವಿದ್ಯುತ್ ಪರಿವರ್ತಕಗಳನ್ನು ತೆರವು ಮಾಡಲು ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲು ಬೆಸ್ಕಾಂ ಇಂಜಿನಿಯರ್‍ಗೆ ಸೂಚನೆ ನೀಡಿದರು. ಶಾಂತಿಸಾಗರದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಕಾಲುವೆ ಮೂಲಕ ನೀರು ಶೇಖರಣೆಗೆ ಕ್ರಮವಹಿಸಲಾಗುತ್ತದೆ ಎಂದರು. 

ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾದಲ್ಲಿ ಖಾಸಗಿ ಕೊಳವೆ ಬಾವಿ ಸಿಗದಿದ್ದಲ್ಲಿ ತಕ್ಷಣವೇ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಬೇಕು. ದೂರದ ಆಧಾರದ ಮೇಲೆ ಈಗಾಗಲೇ ಪ್ರತಿ ಟ್ಯಾಂಕರ್‍ಗೆ ರೂ.500, 600  ಹಾಗೂ ರೂ.900ರವರೆಗೆ ದರ ನಿಗದಿ ಮಾಡ ಲಾಗಿದೆ. ಟೆಂಡರ್ ಕರೆಯಲಾಗಿಲ್ಲ ಎಂದು ತಾಂತ್ರಿಕ ನೆಪವೊಡ್ಡಿ ಜನರಿಗೆ ನೀರು ಕೊಡದಿ ರುವುದನ್ನು ಗಂಭೀರವಾಗಿ ಪರಿಗಣಿಸ ಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

 ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ಸಾಂಕ್ರಾಮಿಕ ಕಾಯಿಲೆಗಳು ಸೇರಿದಂತೆ ವಿಕೋಪದಿಂದಾಗುವ ಸಮಸ್ಯೆಗಳನ್ನು ಎದು ರಿಸಲು ಅಧಿಕಾರಿಗಳು ಸದಾ ಸನ್ನದ್ದ ರಾಗಿರಬೇಕು. ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿವೆ ಎಂದು ಪರಿಶೀಲನೆ ನಡೆಸಿ ಆಳಕ್ಕೆ ಕೊರೆಯಬೇಕಾಗಿದ್ದಲ್ಲಿ ಅಂತಹ ಕೊಳವೆಬಾವಿಗಳ ವಿವರದೊಂದಿಗೆ ಪ್ರಸ್ತಾವನೆಯನ್ನು ಆಯಾ ತಾಲ್ಲೂಕು ತಹಶೀಲ್ದಾರರಿಗೆ ಸಲ್ಲಿಸಬೇಕು ಎಂದರು. 

ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ತಕ್ಷಣವೇ ಸಹಾಯವಾಣಿ ಆರಂಭಿಸಬೇಕು. ಜನರು ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆಯಾದಲ್ಲಿ ಮತ್ತು ಇತರೆ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳುವರು. 

ಜಿಲ್ಲೆಯ  14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 22 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.   ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದಾದ 169 ಗ್ರಾಮಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ 171 ಕಡೆ ಖಾಸಗಿ ಬೋರ್‍ವೆಲ್ ಗುರುತಿಸಿ 89 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 

ಬರಗಾಲ ಎದುರಿಸಲು ತುರ್ತು ಕೆಲಸಗಳಿಗಾಗಿ ಅಂದರೆ ಕುಡಿಯುವ ನೀರು, ಮೇವು ಪೂರೈಕೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ.16.10 ಕೋಟಿ, ಮತ್ತು ಎಲ್ಲಾ ತಹಶೀಲ್ದಾರರ ಖಾತೆಯಲ್ಲಿ ರೂ.2.67 ಕೋಟಿ ಸೇರಿ, ಒಟ್ಟು 18.77 ಕೋಟಿ ರೂ. ಹಣವಿದ್ದು ಯಾವುದೇ ಅನುದಾನದ ಕೊರತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ವೀಡಿಯೋ ಕಾನ್ಫರೆನ್ಸ್‍ನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಉಪವಿಭಾಗಾಧಿಕಾರಿ ಅಭಿಷೇಕ್, ದುರ್ಗಶ್ರೀ, ಡಿಡಿಎಲ್‍ಆರ್ ಭಾವನಾ ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

error: Content is protected !!