ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರ `ಮಾರಾಟ ವಲಯ’

ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರ `ಮಾರಾಟ ವಲಯ’

ದಾವಣಗೆರೆ, ಫೆ. 26- ಬೀದಿ ಬದಿಯ ವ್ಯಾಪಾರಸ್ಥರಿಗಾಗಿ ನಗರದಲ್ಲಿ ಶೀಘ್ರದಲ್ಲಿಯೇ `ಮಾರಾಟ ವಲಯ’ (ವೆಂಡಿಂಗ್ ಜೋನ್) ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಹೇಳಿದರು.

ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಬೀದಿ ಬದಿ ಸ್ಥಿರ ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಸಮಾ ವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ 5 ಕಡೆಗಳಲ್ಲಿ ಜಾಗ ಗುರುತಿಸಲಾಗಿದ್ದು, ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಾರಾಟ ವಲಯ ನಿರ್ಮಾಣವಾದರೆ ವ್ಯಾಪಾರಸ್ಥರಿಗೆ ಅಗತ್ಯವಾಗಿ ಬೇಕಾದ ಬೆಳಕು, ನೆರಳು, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಫುಟ್‌ಪಾತ್ ಅಥವಾ ರಸ್ತೆ ಅಕ್ರಮಿಸದೇ, ಯಾರಿಗೂ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು. ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ಹಂತ ಹಂತವಾಗಿ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೇಣುಕಾ ತಿಳಿಸಿದರು.

10,500 ಬೀದಿ ಬದಿ ವ್ಯಾಪಾರಸ್ಥರಿಗೆ ತಲಾ ಹತ್ತು ಸಾವಿ ರೂ.ನಂತೆ 1200 ಜನರಿಗೆ 50 ಸಾವಿರ ಹಾಗೂ 150 ಜನರಿಗೆ 1 ಲಕ್ಷ ರೂ. ಸಾಲ ನೀಡಲಾಗಿದೆ. 4000 ಆಶ್ರಯ ಮನೆಗಳು ಮಂಜೂರಾಗಿದ್ದು, ಇವುಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ನಂತರ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಭಾರತಿ ಮಾತನಾಡಿ, ಜನಸಂದಣಿ ಇರುವ ಕಡೆ ಮಾರಾಟ ವಲಯ ನಿರ್ಮಾಣ ಮಾಡಬೇಕು. ಅನರ್ಹರಿಗೆ ಗುರುತಿನ ಚೀಟಿ ನೀಡಿರುವುದರ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಆರ್.ಎಲ್. ಶಿವಪ್ರಕಾಶ್ ಮಾತನಾಡಿ, ಮಹಾನಗರ ಪಾಲಿಕೆಯಿಂದ ಅರ್ಹರಿಗೆ ಆಶ್ರಯ ಮನೆಗಳು ಸಿಗುತ್ತಿಲ್ಲ. ಲಕ್ಷ ಲಕ್ಷ ಹಣ ಕೊಟ್ಟವರಿಗೆ ಸಿಗುತ್ತಿವೆ. ಆದ್ದರಿಂದ ಬೀದಿ ಬದಿಯ ವ್ಯಾಪಾರಸ್ಥರು ಸಚಿವರು, ಶಾಸಕರ ಮನೆಗಳಿಗೆ ಹೋಗಿ ಘೇರಾವ್ ಹಾಕಿ ಒತ್ತಾಯಿಸಬೇಕೆಂದರು.

ವ್ಯಾಪಾರ ಸ್ಥಳ ಗುರುತಿಸಿ ಕೊಡುವವರೆಗೂ ಜಕಾತಿ ಕೊಡಬೇಡಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ಎಸ್. ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್, ನಿವೃತ್ತ ನ್ಯಾಯಾಧೀಶ ಈಶ್ವರಪ್ಪ ಜಂತಲಿ, ಸಂಘದ ಪದಾಧಿಕಾರಿಗಳಾದ ಮಂಜುನಾಥ್ ಕೈದಾಳೆ, ಎಸ್.ಕೆ. ರಹಮತ್ ವುಲ್ಲಾ, ಎಸ್. ದುಗ್ಗಪ್ಪ, ಹೆಚ್.ಸಿ. ಮಲ್ಲಪ್ಪ, ಪೂಜಾ ಸೇರಿದಂತೆ ಅನೇಕರಿದ್ದರು.

error: Content is protected !!