ದಾವಣಗೆರೆ, ಫೆ.25- ಇಲ್ಲಿಗೆ ಸಮೀಪದ ಶ್ಯಾಗಲೆ ಗ್ರಾಮದ ಸುಕ್ಷೇತ್ರ ಶ್ರೀಶೈಲ ಪರ್ವತ ಮಲ್ಲಪ್ಪನವರ ದೇವ ಸ್ಥಾನದ ಆವರಣದಲ್ಲಿ ಭಾವೈಕ್ಯತೆಯ ಪ್ರತೀಕವಾಗಿ ಲಕ್ಷದ ಒಂದು ಲಿಂಗು ಪ್ರತಿಷ್ಠಾಪನಾ ಕಾರ್ಯ ಕ್ರಮವು ಶ್ರೀ ಬಸವರಾಜ ಗುರೂಜಿ ಮಾರ್ಗ ದರ್ಶನದಂತೆ ವಿಜೃಂಭಣೆಯಿಂದ ಜರುಗಿತು.
ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಲಕ್ಷದ ಒಂದು ಲಿಂಗು ಪ್ರತಿಷ್ಠಾಪನೆಯು ಶ್ಯಾಗಲೆ ಗ್ರಾಮದಲ್ಲಿಯೇ ಪ್ರಥಮವಾಗಿರುತ್ತದೆ. ಈ ಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸಿ ಬಿಲ್ವಪತ್ರೆಗಳನ್ನು ಸಮರ್ಪಿಸಿ ಪ್ರದಕ್ಷಿಣೆ ಮಾಡಿದರೆ ಕೋಟಿ ಲಿಂಗ ಗಳ ದರ್ಶನ ಮಾಡಿದ ಪುಣ್ಯ ಪ್ರಾಪ್ತಿಯಾಗುವುದಲ್ಲದೇ ತಮ್ಮ ಇಷ್ಟಾರ್ಥಗಳು ಈಡೇರುವವು ಎಂದು ಸ್ವಾಮೀಜಿ ತಿಳಿಸಿದರು.
ಸಣ್ಣ ಮಲ್ಲಪ್ಪ ಅವರು ಕಾವಿ ಹಾಕದಿದ್ದರೂ ಸಂಸಾರಿಯಾಗಿದ್ದುಕೊಂಡೇ ಜೀವನಪೂರ್ತಿ ಪಂಚಾಕ್ಷರಿ ಮಹಾಮಂತ್ರವನ್ನು ಪಠಿಸುತ್ತಾ ದಿವ್ಯ ಜ್ಞಾನಿಗಳಾಗಿದ್ದಾರೆ. ಅವರ ಸಂಕಲ್ಪದ ಫಲವಾಗಿ ಈ ಕ್ಷೇತ್ರ ನಿರ್ಮಾಣವಾಗಿದೆ. ಕಾರಣ ಸುತ್ತಮುತ್ತಲಿನ ಗ್ರಾಮದ ಸರ್ವ ಸಮಾಜದ ಬಂಧು-ಬಾಂಧವರು ಶ್ರೀಕ್ಷೇತ್ರಕ್ಕೆ ಬಂದು ಧ್ಯಾನ, ಪೂಜೆ, ಬಿಲ್ವಾರ್ಚನೆ ಮಾಡುವ ಮುಖಾಂತರ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಬೇಕು. ಇದು ಮುಂದೆ ಭವ್ಯವಾದ ಕ್ಷೇತ್ರವಾಗುತ್ತದೆ ಎಂದು ಆಶಿಸಿ, ಸಣ್ಣ ಮಲ್ಲಪ್ಪನವರ ಕುಟುಂಬ ದವರು ಹಾಗೂ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಪೂಜ್ಯರು ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮೀನಾಕ್ಷಿ ಹಾಲಿವಾಣ, ಶ್ರೀಮತಿ ನೀಲಮ್ಮ ಶ್ಯಾಗಲೆ ಪ್ರಭು ಎಸ್., ರಮೇಶ್ ನ್ಯಾಮತಿ, ಶ್ರೀಮತಿ ಕವಿತ ನ್ಯಾಮತಿ, ಸಂಗಪ್ಪ ತೋಟದ ಶಾಮನೂರು, ತಿಪ್ಪೇಸ್ವಾಮಿ ಹಾಲಿವಾಣ, ಸಣ್ಣ ಮಲ್ಲಪ್ಪ ಶ್ಯಾಗಲೆ, ಚಂದ್ರಕುಮಾರ್ ಶ್ಯಾಗಲೆ, ಶ್ರೀಮತಿ ಸ್ನೇಹ ಶ್ಯಾಗಲೆ, ಶ್ರೀಮತಿ ಸುಧಾ, ಉಮೇಶ್ ಬಿ., ಶ್ರೀಮತಿ ಗಿರಿಜಮ್ಮ ಶ್ಯಾಗಲೆ, ಚಂದ್ರಯ್ಯ ಶ್ಯಾಗಲೆ, ಮಹೇಶ್ವರ ಸ್ವಾಮಿ ಶ್ಯಾಗಲೆ ಮತ್ತಿತರರು ಭಾಗವಹಿಸಿದ್ದರು.