ಖಾಲಿ ಕಾಲುವೆಯಲ್ಲಿ ರೈತರ ಧರಣಿ ಸತ್ಯಾಗ್ರಹ

ಖಾಲಿ ಕಾಲುವೆಯಲ್ಲಿ ರೈತರ ಧರಣಿ ಸತ್ಯಾಗ್ರಹ

ಕುಕ್ಕುವಾಡ ಕಬ್ಬು ಬೆಳೆಗಾರರ ಸಂಘದ ನೇತೃತ್ವ

ದಾವಣಗೆರೆ, ಫೆ. 21- ಭದ್ರಾ ನೀರು ಕಳೆದ ಬಾರಿಯೂ ತಲುಪಿಲ್ಲ. ಈಗ ನೀರು ಹರಿಸಲು ಆರಂಭವಾಗಿ ನಾಲ್ಕೈದು ದಿನಗಳಾದರೂ ದಾವಣಗೆರೆ ಶಾಖಾ ನಾಲೆ ಎರಡನೇ ವಲಯಕ್ಕೆ ಒಂದು ಹನಿಯೂ ನೀರು ಹರಿಯದಿರುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಸಲುವಾಗಿ ಕುಕ್ಕುವಾಡ ಕಬ್ಬು ಬೆಳೆಗಾರರ ಸಂಘದಿಂದ ಖಾಲಿ ಕಾಲುವೆಯಲ್ಲಿ ಕುಳಿತು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಇದೇ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್ ಅವರು, ದಿನೇ ದಿನೇ ಬೆಳೆಗಳು ಒಣಗುತ್ತಿರುವುದು ಆತಂಕವನ್ನು ಹೆಚ್ಚಿಸುತ್ತಿದೆ. ರೈತರ ತಾಳ್ಮೆಯನ್ನು ಇನ್ನೂ ಪರೀಕ್ಷಿಸಬೇಡಿ. ಮಕ್ಕಳನ್ನು ಸಾಕುವ ಹಾಗೆ ತೋಟಗಳನ್ನು ನೋಡಿಕೊಳ್ಳಲಾಗುತ್ತಿದೆ. ಸಾಲ ಮಾಡಿ ಕೊಳವೆಬಾವಿ ಕೊರೆಸಿದರೂ, ನೀರು ಸಿಗುತ್ತಿಲ್ಲ. ಈ ಹಿಂದೆ ನೀರು ನೀಡುತ್ತಿದ್ದ ಕೊಳವೆಬಾವಿಗಳು ಖಾಲಿಯಾಗುತ್ತಿವೆ. ಸಮರ್ಪಕ ನೀರು ಹರಿದರೆ ಮಾತ್ರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದರು.

ನೀರಿನ ಸಮಸ್ಯೆ ಎನ್ನುವುದು ಇದ್ದಕ್ಕಿದ್ದಂತೆ ಸೃಷ್ಠಿಯಾಗುವಂತಹದ್ದಲ್ಲ. ಭದ್ರಾ ಜಲಾಶಯದ ಸಂಗ್ರಹ ಅವಲಂಬನೆ ಲೆಕ್ಕಾಚಾರ ಮಾಡಿಯೇ ಮಳೆಗಾಲ ಮತ್ತು ಬೇಸಿಗೆ ಕಾಲದ ನೀರಿನ ವೇಳಾಪಟ್ಟಿ ನಿಗದಿಪಡಿಸಬೇಕಾಗುತ್ತದೆ.

ಐಸಿಸಿ ಸಭೆಯಲ್ಲಿ ನೀರಾವರಿ ಇಂಜಿನಿಯರ್ ದಿವ್ಯ ಮೌನ್ ರೈತರಿಗೆ ಸಂಕಷ್ಟವಾಗಿ ಪರಿಣಮಿಸಿದೆ. ನಾಳೆ ಟ್ರ್ಯಾಕ್ಟರ್ ಗಳ ಸಹಿತ ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಷಣ್ಮುಖಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರ ಪ್ರತಿಭಟನೆಗಳು ನಿರಂತರವಾಗಿ ನಡೆಯುವುದು ಆಡಳಿತದ ವೈಖರಿಯನ್ನು ಬಿಂಬಿಸುತ್ತದೆ ಎಂದರು.

ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಕೆ.ಎನ್. ಮಂಜುನಾಥ ಮಾತನಾಡಿ, ಒಣಗುತ್ತಿರುವ ಬೆಳೆಗಳು ಆಡಳಿತಕ್ಕೆ ಕಾಣದೇ ಇರುವುದು ಆಕ್ರೋಶವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ರೈತರ ಶಾಂತಿಯುತ ಧರಣಿ ದೌರ್ಬಲ್ಯ ಅಲ್ಲ ಎಂದು ಕೋಳೆನಹಳ್ಳಿ ಸತೀಶ್ ತಿಳಿಸಿದರು. ಸಾಂವಿಧಾನಿಕ ಚೌಕಟ್ಟಿನಲ್ಲಿ ಬೇಡಿಕೆ ಪ್ರಸ್ತಾಪಕ್ಕೆ ಬೆಲೆನೇ ಇಲ್ಲವೇ? ಎಂದು ವಕೀಲ ಮತ್ತಿ ಹನುಮಂತಪ್ಪ ಹೇಳಿದರು.

ಸಂಘದ ಉಪಾಧ್ಯಕ್ಷ ಮುದಹದಡಿ ದಿಳ್ಯೆಪ್ಪ ಮಾತನಾಡಿ, ರೈತರ ಸಮಸ್ಯೆಯನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಡಿ. ಮಲ್ಲೇಶಪ್ಪ, ಮಹೇಶ್ವರಪ್ಪ, ಗೋಪಾಲ್, ಕಲ್ಲೇಶಪ್ಪ, ಅರವಿಂದ್, ದಿನೇಶ್, ನಿರಂಜನಮೂರ್ತಿ, ಸಿರಿಗೆರೆ ಪ್ರಭು, ಕಿರಣ್, ಹರೀಶ್, ಜಿ.ಸಿ.ಮಂಜುನಾಥ್, ಗಂಗಾಧರ ಮತ್ತಿತರರು ಇದ್ದರು. 

error: Content is protected !!