ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ
ದಾವಣಗೆರೆ, ಫೆ. 20 – ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಗಳ ಸಂಯುಕ್ತಾಶ್ರ ಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುಂಚೆ 8.5 ಕೋಟಿ ರೂ.ಗಳ ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿ ಸಲು ಪ್ರಯತ್ನಿಸಲಾಗುವುದು ಎಂದವರು ಹೇಳಿ ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದಾರೆ. ಇದರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕ್ರೀಡಾಪಟುಗಳು ಸಾಧನೆ ಮಾಡಲು ನೆರವಾಗಿದೆ ಎಂದವರು ಹೇಳಿದರು.
ಸರ್ಕಾರಿ ನೌಕರರಾದ ನಂತರ ಹಲವರು ಐ.ಎ.ಎಸ್. ಹಾಗೂ ಐ.ಪಿ.ಎಸ್. ಹುದ್ದೆಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನಷ್ಟು ನೌಕರರು ಈ ಸ್ಥಾನ ಪಡೆದುಕೊಳ್ಳಲಿ ಎಂದು ಆಶಿಸಿದರು.
ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮಾತನಾಡಿ, ಕ್ರೀಡೆಯಿಂದ ಉದ್ಯೋಗದಲ್ಲಿ ದಕ್ಷತೆ, ಕ್ರಿಯಾಶೀಲತೆ ಹಾಗೂ ಆವಿಷ್ಕಾರಿ ಚಿಂತನೆ ತರಲು ಸಾಧ್ಯ. ಮೊಬೈಲ್ ವ್ಯಸನದಂತಹ ಸಮಸ್ಯೆಗಳಿಂದ ಹೊರ ಬರಲೂ ಕ್ರೀಡೆ ನೆರವಾಗುತ್ತದೆ ಎಂದರು.
ಕೇವಲ 60 ವರ್ಷವಷ್ಟೇ ಅಲ್ಲ, 80 ವರ್ಷ ದವರೆಗೂ ರೋಗ ಮುಕ್ತವಾಗಿ ಚಟುವಟಿಕೆ ಯಿಂದ ಇರಲು ಕ್ರೀಡೆ ನೆರವಾಗುತ್ತದೆ. ಕ್ರೀಡೆಗಳಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಕ್ರೀಡೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಈ ಬಾರಿ ಜೂನ್ – ಜುಲೈ ತಿಂಗಳಲ್ಲಿ ರಾಜ್ಯ ಮಟ್ಟದ ನೌಕರರ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ದಾವಣಗೆರೆ ಜಿಲ್ಲೆ ಗೆಲ್ಲುವಂತಾಗಬೇಕು ಎಂದರು.
ಇದೇ ದಿನಾಂಕ 27ರಂದು ಸರ್ಕಾರಿ ನೌಕರರ ರಾಜ್ಯ ಸಮ್ಮೇಳನ ನಡೆಯಲಿದೆ. 7ನೇ ವೇತನ ಆಯೋಗ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿ ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ಷಡಾಕ್ಷರಿ ಹೇಳಿದರು.
ಯುವ ಯೋಗ ಪಟುಗಳಾದ ಸೃಷ್ಟಿ, ನಮಿತ ಹಾಗೂ ಅನುಷ್ಕ ಅವರು ಯೋಗ ನೃತ್ಯ ಪ್ರದರ್ಶನ ನೀಡಿದರು.
ವೇದಿಕೆಯ ಮೇಲೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಆರ್. ಜಯಲಕ್ಷ್ಮಿ ಬಾಯಿ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವೀರೇಶ ಎಸ್. ಒಡೇನಪುರ, ಪದಾಧಿಕಾರಿಗಳಾದ ಸಿ. ಗುರುಮೂರ್ತಿ, ಬಿ.ಆರ್. ತಿಪ್ಪೇಸ್ವಾಮಿ, ಮಂಜಮ್ಮ, ಬಿ. ಪಾಲಾಕ್ಷಿ, ಹೆಚ್. ಬಸವರಾಜ, ಸಿ. ತಿಪ್ಪೇಸ್ವಾಮಿ, ಕೆ.ಎಂ.ಹೆಚ್. ಸ್ವಾಮಿ, ಬಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.