ನವೀಕೃತ ಈಜುಕೊಳ ನಾಳೆ ಸೇವೆಗೆ ಲೋಕಾರ್ಪಣೆ

ನವೀಕೃತ ಈಜುಕೊಳ  ನಾಳೆ ಸೇವೆಗೆ ಲೋಕಾರ್ಪಣೆ

ದೂರು ಬರದಂತೆ, ಜನರು ಖುಷಿಯಿಂದ ವಾಪಸ್ ಹೋಗುವಂತಾಗಬೇಕು : ರೇಣುಕಾ, ಗಡಿಗುಡಾಳ್ ಮಂಜುನಾಥ್ ಸೂಚನೆ

ದಾವಣಗೆರೆ, ಫೆ. 18 – ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ನವೀಕೃತ ಈಜುಕೊಳದ ಲೋಕಾರ್ಪಣೆ ಕಾರ್ಯಕ್ರಮವು ಇದೇ ದಿನಾಂಕ 20ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ರೀತಿಯ ದೂರು ಬರದಂತೆ ನಿರ್ವಹಿಸಿಕೊಂಡು ಹೋಗುವಂತೆ ಸೂಚಿಸಿದರು. 

ನವೀಕೃತ ಈಜುಕೊಳ ಇದಾಗಿದ್ದು, ಸಾರ್ವಜನಿಕರಿಗೆ ಲೋಕಾರ್ಪಣೆ ಯಾಗುತ್ತಿದೆ. ಬೆಳಿಗ್ಗೆ 6 ರಿಂದ 9 ರವರೆಗೆ ಸಾರ್ವಜನಿಕರು, 10 ರಿಂದ 11  ರವರೆಗೆ ಮಹಿಳೆಯರಿಗೆ ಮಾತ್ರ, 12 ರಿಂದ ಮಧ್ಯಾಹ್ನ 3 ರವರೆಗೆ ಎಲ್ಲರಿಗೂ ಪ್ರವೇಶ ನೀಡಲಾಗುತ್ತಿದೆ. ಸಂಜೆ ಈಜು ಕಲಿಯುವವರಿಗೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ನುರಿತ ಈಜು ತರಬೇತುದಾರರನ್ನು ನೇಮಕ ಮಾಡಲಾಗಿದೆ. 

ಪ್ರತಿ ಗಂಟೆಗೆ 10 ವರ್ಷದೊಳಗಿನ ಮಕ್ಕಳಿಗೆ 40 ರೂಪಾಯಿ, 10 ವರ್ಷ ಮೇಲ್ಪಟ್ಟವರಿಗೆ 60 ರೂಪಾಯಿ ನಿಗದಿಪಡಿಸಲಾಗಿದೆ. ಒಂದು ತಿಂಗಳಿಗೆ ಮಕ್ಕಳಿಗೆ 800 ರೂಪಾಯಿ ಹಾಗೂ ಹಿರಿಯರಿಗೆ 1000 ರೂಪಾಯಿ ನಿಗದಿ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ಈಜುಕೊಳದ ಮೇಲುಸ್ತುವಾರಿ ಮಧು ಎಂಬುವವರು ನೋಡಿಕೊಳ್ಳಲಿದ್ದು, ತರಬೇತುದಾರರ ನೇಮಕ ಮಾಡಲಾಗಿದೆ. 

ಈ ಈಜುಕೊಳವು ಉತ್ತಮ ನಿರ್ವಹಣೆ ಆಗಬೇಕು. ಯಾವುದೇ ರೀತಿಯ ದೂರು ಬರಬಾರದು. ಅವಘಡ ಸಂಭವಿಸದಂತೆ ನೋಡಿಕೊಳ್ಳಬೇಕು. ನೀರನ್ನು ಆಗಾಗ್ಗೆ ಬದಲಾಯಿಸಬೇಕು. ಇಲ್ಲಿಗೆ ಬಂದು ಹೋಗುವವರು ಖುಷಿಯಿಂದ ವಾಪಸ್ ಹೋಗಬೇಕು. ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ. ಜನರು ಬೇಸರದಿಂದ ಹೋಗಬಾರದು. ಸಂತೋಷದಿಂದ ನೀರಿನಲ್ಲಿ ಆಟವಾಡಿ ಮಕ್ಕಳು, ಮಹಿಳೆಯರು, ಹಿರಿಯರು ಹೋಗುವಂತಹ ವಾತಾವರಣ ಕಲ್ಪಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು. 

ಈಜುಕೊಳ ನವೀಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗಮನಕ್ಕೆ ತಂದ ಬಳಿಕ ಅವರು ಇದಕ್ಕೆ ಅನುದಾನ ನೀಡಿದ್ದರು. ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದೆವು. ಅವರೂ ಸಹ ಸಹಕಾರ ನೀಡಿದ್ದಾರೆ ಎಂದು ಗಡಿಗುಡಾಳ್ ಮಂಜುನಾಥ್ ಸ್ಮರಿಸಿದ್ದಾರೆ.

error: Content is protected !!