ಪೋಕ್ಸೋ : ಪದೇ ಪದೇ ಸಮಸ್ಯೆ ನೀಡುವವರ ಗಡಿಪಾರು

ಪೋಕ್ಸೋ : ಪದೇ ಪದೇ ಸಮಸ್ಯೆ ನೀಡುವವರ ಗಡಿಪಾರು

ಮಕ್ಕಳೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್

ದಾವಣಗೆರೆ, ಫೆ. 16 – ಮಕ್ಕಳಿಗೆ ಪದೇ ಪದೇ ಸಮಸ್ಯೆ ನೀಡುವವರನ್ನು ಗಡೀಪಾರು ಮಾಡ ಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಮಕ್ಕಳೊಂದಿಗೆ ಕಾನೂನು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೌರ್ಜನ್ಯ ಎಸಗಿದ ವ್ಯಕ್ತಿಯ ವಿರುದ್ಧ ದೂರು ನೀಡಿದರೆ ಆತ ಬಿಡುಗಡೆ ನಂತರ ಬಾಲಕಿಗೆ ಸಮಸ್ಯೆ ನೀಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದರು. 

ಯಾವುದೇ ಮಗು ವ್ಯಕ್ತಿಯ ವಿರುದ್ಧ ಕೊಡಬೇಕಾದಾಗ ಇಂತಹ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ, ದೌರ್ಜನ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ತಕ್ಷಣವೇ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಪೊಲೀಸ್ ಠಾಣೆಗೆ ಹೋಗಲು ಹಿಂಜರಿಕೆ ಇರುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಮಕ್ಕಳ ರಕ್ಷಣಾ ಅಧಿಕಾರಿಗಳನ್ನೂ ನೇಮಿಸಿದೆ. ಅವರು ಮಕ್ಕಳ ಹಿತೈಷಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಮಕ್ಕಳಿಗೆ ಅಗತ್ಯ ಕಾನೂನು ಹಾಗೂ ಪೊಲೀಸ್ ನೆರವು ಕೊಡಿಸುತ್ತಾರೆ ಎಂದು ಹೇಳಿದರು.

ಪದೇ ಪದೇ ಮಕ್ಕಳಿಗೆ ಸಮಸ್ಯೆ ಮಾಡಿದರೆ ಪೊಲೀಸ್ ಇಲಾಖೆಯಿಂದ ಗೂಂಡಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಹಾಗೂ ಜಿಲ್ಲೆಯಿಂದ ಗಡೀಪಾರು ಮಾಡಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ ಮಾತನಾಡಿ, ಜಾಮೀನು ಪಡೆದು ಬಂದವರು ಮತ್ತೆ ಅಪ್ರಾಪ್ತರಿಗೆ ತೊಂದರೆ ನೀಡುವ ಘಟನೆಗಳು ನಡೆದಿವೆ. ಈ ಬಗ್ಗೆ ಅರಿವು ಮೂಡಿಸಲಿಕ್ಕಾಗಿಯೇ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತಿದೆ. ಜನ ಸಾಮಾನ್ಯರಿಗೂ ಕಾನೂನಿನ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಎ.ಎಸ್.ಪಿ. ವಿಜಯಕುಮಾರ್ ಸಂತೋಷ್ ಮಾತನಾಡಿ, ಪೋಕ್ಸೋ ಪ್ರಕರಣಗಳಲ್ಲಿ ಸಿಲುಕಿದವರ ಮೇಲೆ ಪೊಲೀಸರು ನಿಗಾ ಇಟ್ಟಿರುತ್ತಾರೆ. ಪದೇ ಪದೇ ಅಪರಾಧ ಮಾಡುವವರನ್ನು ರೌಡಿ ಪಟ್ಟಿಗೆ ಸೇರಿಸಲಾಗುತ್ತದೆ. ಇಂತಹವರ ಬಗ್ಗೆ 112 ಸಂಖ್ಯೆ ಮೂಲಕ ಮಾಹಿತಿ ನೀಡಿ. ಹತ್ತು ನಿಮಿಷಗಳಲ್ಲೇ ಪೊಲೀಸ್ ವಾಹನ ಘಟನಾ ಸ್ಥಳಕ್ಕೆ ತಲುಪುತ್ತದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ಮಾತನಾಡಿ, ಪೋಕ್ಸೋ ಪ್ರಕರಣದಲ್ಲಿ ಸಿಲುಕಿದವರಿಗೆ ಬಂಧನಕ್ಕಿಂತ ಇನ್ನೊಂದು ಶಿಕ್ಷೆ ಇಲ್ಲ. ಒಂದು ಬಾರಿ ಜೈಲಿಗೆ ಹೋಗಿ ಬಂದರೆ ಪಶ್ಚಾತ್ತಾಪವಾಗುವ ಸುಮಾರು ಸಂದರ್ಭಗಳಿವೆ. ಸಾಮಾಜಿಕ ಅವಹೇಳನವಾಗುತ್ತದೆ ಹಾಗೂ ಆರ್ಥಿಕವಾಗಿ ಹೊಡೆತ ಬೀಳುತ್ತದೆ. ಪೊಲೀಸ್, ನ್ಯಾಯಾಲಯ ಹಾಗೂ ಹಲವಾರು ಇಲಾಖೆಗಳ ದಾಖಲೆಗಳಲ್ಲಿ ಇಂಥವರ ಹೆಸರು ಸೇರಿರುತ್ತರೆ. ಅವರ ಮೇಲೆ ನಿಗಾ ಇರುತ್ತದೆ ಎಂದು ಹೇಳಿದರು.

error: Content is protected !!