ದಾವಣಗೆರೆ, ಫೆ. 15- ಇದೇ ದಿನಾಂಕ 19 ಕ್ಕೆ ಭದ್ರಾ ಜಲಾಶಯದಿಂದ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಯದಿದ್ದರೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ರೈತ ಮುಖಂಡ ತೇಜಸ್ವಿ ಪಟೇಲ್ ಎಚ್ಚರಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಯವರಿಗೆ ಇಂದು ಸಲ್ಲಿಸಿದ ಮನವಿಯಲ್ಲಿ ಈ ಬಗ್ಗೆ ತಿಳಿಸಿರುವ ಅವರು, ಜ. 15 ರಂದು ಭದ್ರಾ ಜಲಾಶಯದಿಂದ 12 ದಿನಗಳ ಕಾಲ ಹರಿಸಿದ ನೀರು ಬೆಳೆದು ನಿಂತ ಬೆಳೆಗಳಿಗೆಂದು ತಿಳಿಯಲಾಗಿತ್ತು. ಆದರೆ ತ್ಯಾವಣಗಿ ಉಪ ವಿಭಾಗ ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಲ್ಲಿ ನೀರು ತಲುಪಿಲ್ಲ. ಫೆ. 16 ರಿಂದ (ನಾಳೆ) ಹರಿಸುವ ನೀರು ಈ ಬಾರಿಯೂ ತಲುಪದೇ ಇದ್ದರೆ ರೈತರು ತೀವ್ರ ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸುಮಾರು 20 ರಿಂದ 25 ವರ್ಷಗಳಿಂದ ತೋಟದ ಮೇಲೆ ಅವಲಂಬಿತರಾಗಿರುವವರಿಗೆ ನೀರಿಲ್ಲದೇ ತೋಟ ನಾಶವಾದರೆ ಬದುಕು ನಾಶವಾದಂತೆ. ಆದ್ದರಿಂದ ಈ ಬಾರಿ ನೀರು ನಿರ್ವಹಣೆಯ ಬಗ್ಗೆ ಜಿಲ್ಲಾಧಿಕಾರಿಗಳು ಸಂಪೂರ್ಣ ನಿಗಾ ವಹಿಸಬೇಕೆಂದು ತೇಜಸ್ವಿ ಪಟೇಲ್ ಮನವಿ ಮಾಡಿದ್ದಾರೆ.
ಈ ಕೂಡಲೇ ಭದ್ರಾ ಯೋಜನೆಯ ಅಧೀಕ್ಷಕ ಅಭಿಯಂತರರನ್ನು ಕರೆಯಿಸಿ, ಜಲ ಸಂಪನ್ಮೂಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಳೆದ ಬಾರಿ ನೀರು ನಿರ್ವಹಣೆಯಲ್ಲಾಗಿರುವ ವ್ಯತ್ಯಾಸಗಳನ್ನು ಗುರುತಿಸಿ, ಜಲ ಸಂಪನ್ಮೂಲ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ರೆಗ್ಯುಲಾರಿಟಿ-2 ರಲ್ಲಿ ವಿನ್ಯಾಸಿತ ನೀರು 13 ಅಡಿ ನಿರಂತರವಾಗಿ ಕಾಯ್ದುಕೊಳ್ಳಬೇಕಿದೆ.
ನಾಳೆ ದಿನಾಂಕ 16ರಿಂದ ಭದ್ರಾ ನೀರು ಹರಿಸಲು ಆರಂಭವಾಗಿ ಮೂರು ದಿನಗಳ ನಂತರ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದಲ್ಲಿ ನೀರು ತಲುಪಿದ ಬಗ್ಗೆ ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳಿಂದ ಕಾಲ ಕಾಲಕ್ಕೆ ಮಾಹಿತಿ ಪಡೆದು, ನೀರಿನ ಹರಿವಿನಲ್ಲಿ ವ್ಯತ್ಯಾಸವಾದಲ್ಲಿ ಜಲ ಸಂಪನ್ಮೂಲ ಇಲಾಖೆಯ ನೀರು ನಿರ್ವಹಣಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಕುಕ್ಕುವಾಡ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ.
ಫೆ. 19 ಕ್ಕೆ ರೆಗ್ಯುಲಾರಿಟಿ-2 ರಲ್ಲಿ ವಿನ್ಯಾಸಿತ ನೀರು 13 ಅಡಿ ಹರಿಯದಿದ್ದಲ್ಲಿ ವಿಷಯ ತಿಳಿದ ಕ್ಷಣದಿಂದ ಕಾರಿಗನೂರು ಕ್ರಾಸ್ ಬಳಿ ಅಥವಾ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸ ಲಾಗಿದೆ ಎಂದು ತೇಜಸ್ವಿ ಪಟೇಲ್ ತಿಳಿಸಿದ್ದಾರೆ.
ನಾಲೆಗಳಲ್ಲಿ ನೀರು ಸಮರ್ಪಕವಾಗಿ ಹರಿಯದಿದ್ದರೆ ಕೇವಲ ಅಚ್ಚುಕಟ್ಟುದಾರರಿಗೆ ಅಲ್ಲದೇ, ಅಂತರ್ಜಲ ಕುಸಿದು, ಕೊಳವೆ ಬಾವಿ ಆಶ್ರಿತ ರೈತರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ನೀರಿನಿಂದ ಯಾರೂ ಸಹ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರೈತ ಮುಖಂಡರಾದ ಬಿ.ಎಂ. ಸತೀಶ್, ಡಿ. ಮಲ್ಲೇಶಪ್ಪ ಕುಕ್ಕುವಾಡ, ಮಹೇಶ್ವರಪ್ಪ ಕುಕ್ಕುವಾಡ, ಹನುಮಂತಪ್ಪ ಮತ್ತಿ, ಕೆ.ಎನ್. ಮಂಜುನಾಥ್ ಕುಕ್ಕುವಾಡ, ದಿಳ್ಳೆಪ್ಪ ಮುದಹದಡಿ, ನಿಂಗಣ್ಣ ಹದಡಿ, ಶ್ರೀನಿವಾಸ ತುರ್ಚಘಟ್ಟ ಪಾಲ್ಗೊಂಡಿದ್ದರು.