ಜನರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ: ಸಚಿವ ಎಸ್ಸೆಸ್ಸೆಂ ಸೂಚನೆ

ಜನರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ: ಸಚಿವ ಎಸ್ಸೆಸ್ಸೆಂ ಸೂಚನೆ

`ಮನೆ ಬಾಗಿಲಿಗೆ ಇ-ಆಸ್ತಿ ದಾಖಲೆ’ ಆಂದೋಲನಕ್ಕೆ ಚಾಲನೆ ನೀಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ, ಫೆ. 13- ಮಹಾನಗರ ಪಾಲಿಕೆ ವತಿಯಿಂದ ಮಾರ್ಚ್ ಅಂತ್ಯದ ವೇಳೆಗೆ ಎಲ್ಲಾ ವಾರ್ಡ್‌ಗಳಲ್ಲಿ ಇ-ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವಾ ಕಾರ್ಯವನ್ನು ಹಮ್ಮಿಕೊಂಡಿದ್ದು, ನಾಗರಿಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕರೆ ನೀಡಿದರು.

ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ಆಸ್ತಿ ತೆರಿಗೆ ಪಾವತಿಸುವ ನಾಗರೀಕರಿಗೆ `ಮನೆ ಬಾಗಿಲಿಗೆ ಇ-ಆಸ್ತಿ’ ದಾಖಲೆ ವಿತರಿಸುವ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

2012 ರಲ್ಲಿ ನಗರದಲ್ಲಿ 45 ಸಾವಿರ ಜನರಿಗೆ ಆಶ್ರಯ  ಯೋಜನೆಯಡಿ ಆಶ್ರಯ ನಿವಾಸಿಗಳಿಗೆ ಹಕ್ಕುಪತ್ರ ನೀಡ ಲಾಗಿತ್ತು. ಆ ಸಂದರ್ಭದಲ್ಲಿ ಮನೆ ಸಂಖ್ಯೆ ಇರಲಿಲ್ಲ. ಅವರೆಲ್ಲರೂ ಖಾತೆ ಮಾಡಿಸಿ ಕೊಂಡಿದ್ದು, ಎಲ್ಲಾ ಹಕ್ಕುಗಳನ್ನು ಹೊಂದಲು ಇ-ಆಸ್ತಿ ದಾಖಲೆ ಬಹಳ ಪ್ರಮುಖವಾಗಿರುತ್ತದೆ. ಇನ್ನೂ ಕೆಲವು ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವುದು ಬಾಕಿ ಇದೆ ಎಂದರು.

ಜನರು ಆಸ್ತಿ ತೆರಿಗೆ ಪಾವತಿಸಿ, ಇ-ಆಸ್ತಿ ದಾಖಲೆ ಪಡೆಯಲು ಬಂದಾಗ ಅವರಿಂದ ಬಡಾವಣೆ ನಕ್ಷೆ, ಮನೆ ನಕ್ಷೆ, ಮನೆ ನಿರ್ಮಾಣ ಪರವಾನಗಿ ದಾಖಲೆಗಳನ್ನು ಕೇಳದೇ ಪ್ರಾಯೋಗಿಕ ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಂಡು, ಅಲೆದಾಡಿಸದೇ ಆಸ್ತಿ ಖಾತೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನರು ಆಸ್ತಿ ತೆರಿಗೆ ಪಾವತಿಸಿ ಇ-ಆಸ್ತಿ ದಾಖಲೆ ಪಡೆಯುವುದರಿಂದ ಪರೋಕ್ಷವಾಗಿ ಮಹಾನಗರ ಪಾಲಿಕೆಗೆ ಆದಾಯ ಬರಲಿದೆ. ನೀರಿನ ಶುಲ್ಕ ಸಹ ವಸೂಲಿಯಾಗಲಿದೆ.ವಲಯವಾರು ಪ್ರಗತಿ ವರದಿಯನ್ನು ಪ್ರತಿ ವಾರ ನೀಡಲು ತಿಳಿಸಿದರು.

ಅಭಿವೃದ್ಧಿ ಕೆಲಸಕ್ಕೆ ಪಾಲಿಕೆ ಹಣ ಬಳಸಿ: 250 ಲಕ್ಷ ರೂ.ಗಳಲ್ಲಿ 29, 32, 35, 36 ನೇ ವಾರ್ಡ್‍ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು. ಸರ್ಕಾರದ ಅನುದಾನದಿಂದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಪಾಲಿಕೆಯ ಅನುದಾನದಲ್ಲಿ ವಾರ್ಡ್ ರಸ್ತೆ, ಗುಂಡಿ ಮುಚ್ಚುವ ಕಾಮಗಾರಿ, ಬ್ರಿಡ್ಜ್, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲು ತಿಳಿಸಿ, ಪಾಲಿಕೆಗೆ ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಅನುದಾನ ಸರ್ಕಾರದಿಂದ ಬರಲಿದೆ. ಈಗಾಗಲೇ ಜಲಸಿರಿ ಕಾಮಗಾರಿ, ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲೀಕರಣ, 25 ಕೋಟಿ ರೂ.ಗಳಲ್ಲಿ ವಿಸ್ತರಣೆಯಾದ ಬಡಾವಣೆಗಳಿಗೆ ಒಳಚರಂಡಿ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

 ದಾವಣಗೆರೆ ಜಿಲ್ಲೆ ಪ್ರಥಮ: ಕಂದಾಯ ಇಲಾಖೆಯಡಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಅದೇ ರೀತಿ ಪಾಲಿಕೆಯಿಂದ ಎಲ್ಲಾ ನಾಗರಿಕರ ಸೇವೆಗಳನ್ನು ಆನ್‍ಲೈನ್ ಮಾಡುವ ನಿಟ್ಟಿನಲ್ಲಿ ಕಚೇರಿ ಗಣಕೀಕರಣ ಗೊಳಿಸಿ ಶೀಘ್ರವೇ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.  ವೆಂಕಟೇಶ್ ಮಾತನಾಡಿ, ಜನಸ್ನೇಹಿ ಆಡಳಿತ ನೀಡಲು ಸರ್ಕಾರ ಬದ್ದವಾಗಿದ್ದು, ಮನೆ ಬಾಗಿಲಿಗೆ ಸೇವೆ ಒದಗಿಸಲಾಗುತ್ತಿದೆ. ನನ್ನ ಆಸ್ತಿ, ನನ್ನ ದಾಖಲೆ, ನನ್ನ ಹಕ್ಕು ಘೋಷವಾಕ್ಯದಡಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಆಸ್ತಿ ದಾಖಲೆ ನೀಡಲು ಇಂದಿನಿಂದಲೇ  ಚಾಲನೆ ನೀಡಲಾಗಿದೆ ಎಂದರು.

 ಇ-ಆಸ್ತಿ ದಾಖಲೆ ಪಡೆಯುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಹಾಗೂ ಆಸ್ತಿ ಮಾಲೀಕರಿಗೆ ಶೇ. 100 ರಷ್ಟು ಮಾಲಿಕತ್ವ ಸಿಗಲಿದೆ. ಇದರಿಂದ ಆಸ್ತಿ ಮಾರಾಟ, ಖರೀದಿ ಮತ್ತು ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಪಡೆಯಲು ಅನುಕೂಲವಾಗುತ್ತದೆ. ನಿವೇಶನ ಹಕ್ಕುಪತ್ರ ಪಡೆದವರೂ ಸಹ ಇ-ಆಸ್ತಿ ಪಡೆದುಕೊಳ್ಳಬೇಕು. ಈ ಕಾಯಿದೆಯು 2021 ರಿಂದ ಜಾರಿಗೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ 1.75 ಲಕ್ಷ ಆಸ್ತಿಗಳಲ್ಲಿ ಇಲ್ಲಿಯವರೆಗೆ ಕೇವಲ 30 ಸಾವಿರ ಆಸ್ತಿಗೆ ಇ-ಆಸ್ತಿ ದಾಖಲೆಗಳನ್ನು ಪಡೆಯಲಾಗಿದೆ. ಇನ್ನೂ 1.45 ಲಕ್ಷ ಇ-ಸ್ವತ್ತುಗಳನ್ನು ವಿತರಣೆ ಮಾಡಬೇಕಾಗಿದೆ ಎಂದು ಹೇಳಿದರು. 

ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಪಾಲಿಕೆ 35ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.

ತೆರಿಗೆ ಹಣಕಾಸು ಸಮಿತಿ ಅಧ್ಯಕ್ಷ ಉದಯಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರಾದ ನಾಗರತ್ನಮ್ಮ, ಜಯಮ್ಮ ಗೋಪಿನಾಥ್, ಚಮನ್‍ಸಾಬ್, ಗಡಿಗುಡಾಳ್ ಮಂಜುನಾಥ್, ನಾಗರಾಜ್, ನಗರ ಯೋಜನಾ ಅಧ್ಯಕ್ಷ ಅಬ್ದುಲ್ ಲತೀಫ್, ಮುಖಂಡರಾದ ಆರ್. ಹೆಚ್. ನಾಗಭೂಷಣ್, ಆರ್.ಎಸ್. ಶೇಖರಪ್ಪ ಮತ್ತಿತರೆ ಗಣ್ಯರು ಭಾಗವಹಿಸಿದ್ದರು.

ಭೂಮಿ ಪೂಜೆ : ನಿಟುವಳ್ಳಿ ಇಎಸ್‌ಐ ಆಸ್ಪತ್ರೆ ಎದುರಿಗೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41.70 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಿದರು. 

error: Content is protected !!