ಹರಿಹರ, ಫೆ.6- ನಗರದ ತುಂಗಭದ್ರಾ ನದಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ನದಿ ದಂಡೆಯ ಮೇಲೆ ಕಸದ ರಾಶಿ, ಹಳೆಯ ಬಟ್ಟೆಗಳನ್ನು ಎಲ್ಲೆಂದರಲ್ಲಿ ಹಾಕಿದ್ದು ನದಿಯ ದಂಡೆಯು ಕಲುಷಿತ ವಾತಾವರಣದಲ್ಲಿದೆ.
ಈಗಾಗಲೇ ರಾಜ್ಯಾಂದ್ಯಂತ ಮಳೆ ಕೊರತೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಅಷ್ಟಕ್ಕಷ್ಟೇ ಇದ್ದು, ನದಿಯಲ್ಲಿ ನೀರು ಇಲ್ಲದೇ ಇರುವುದರಿಂದ ನದಿಯ ದಂಡೆ ಬಹಳಷ್ಟು ಅಗಲವಾಗಿರುತ್ತದೆ ಮತ್ತು ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಇದ್ದಾಗ ಕಸಕಡ್ಡಿ ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತವೆ. ಇದರಿಂದಾಗಿ ನದಿಯ ದಂಡೆ ಕೂಡ ಸ್ವಚ್ಚತೆಯಿಂದ ಕೂಡಿರುತ್ತದೆ.
ಆದರೆ, ಮಳೆ ಇಲ್ಲದೇ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇರುವುದರಿಂದ ನದಿ ದಂಡೆಯಲ್ಲಿ ಬಿಸಾಡುವ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ವಾಟರ್ ಬಾಟಲ್ ಮತ್ತು ಮದ್ಯಪಾನ ಬಾಟಲ್, ಹಳೆಯ ಬಟ್ಟೆಗಳು ನದಿ ದಂಡೆಯ ಮೇಲೆ ಅಧಿಕ ಪ್ರಮಾಣದಲ್ಲಿದ್ದು, ಡ್ಯಾಮ್ ನೀರನ್ನು ನದಿಗೆ ಬಿಟ್ಟರೆ ಕಸವು ನೀರಿನಲ್ಲಿ ಸೇರಿದಾಗ ಸಾರ್ವಜನಿಕರು ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಸ್ಥಳಕ್ಕೆ ಸಂಬಂಧಿಸಿದ ಕೋಡಿಯಾಲ ಹೊಸಪೇಟೆ ಗ್ರಾಪಂ ಕಚೇರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನದಿ ದಂಡೆ ಮೇಲಿರುವ ಕಸದ ರಾಶಿಯ ಸ್ವಚ್ಚತೆಗೆ ಮುಂದಾಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.