ನವದೆಹಲಿ, ಜ. 1 – ಲೋಕಸಭಾ ಚುನಾವಣೆ ಸನಿಹವಿದ್ದರೂ, ಜನಪ್ರಿಯ ಘೋಷಣೆಗಳಿಂದ ದೂರ ಉಳಿದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ.
ಲೋಕಸಭಾ ಚುನಾವಣೆ ಸನಿಹದಲ್ಲೇ ಇರುವ ಹಿನ್ನೆಲೆಯಲ್ಲಿ ಸೀತಾರಾಮನ್ ಅವರು ಮಧ್ಯಂತರ ಅವಧಿಗಾಗಿ ಬಜೆಟ್ ಮಂಡಿಸಿದ್ದು ಬಡವರು, ಮಹಿಳೆಯರು, ಯುವಕರು ಹಾಗೂ ರೈತರ ಕಡೆ ಹೆಚ್ಚು ಗಮನ ಹರಿಸಿರುವುದಾಗಿ ತಿಳಿಸಿದ್ದಾರೆ.
ತೆರಿಗೆಗಳಲ್ಲಿ ಯಾವುದೇ ಬದಲಾವಣೆ ತಂದಿಲ್ಲ, ಆದಾಯ ತೆರಿಗೆ ಪದ್ಧತಿಯೂ ಯಥಾಸ್ಥಿತಿ ಯಲ್ಲಿ ಮುಂದುವರೆದಿದೆ. ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡುವ ಹಾಗೂ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಬಜೆಟ್ ಅನ್ನು ಸೀತಾರಾಮನ್ ಮಂಡಿಸಿದ್ದಾರೆ.
§ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್¬ ಎಂಬುದು ಸರ್ಕಾರದ ಮಂತ್ರವಾಗಿದೆ. §ಸಬ್ಕಾ ಪ್ರಯಾಸ್¬ (ಎಲ್ಲರ ಪ್ರಯತ್ನ) ಮೂಲಕ ಕೊರೊನಾದಂತಹ ಸವಾಲುಗಳನ್ನು ಎದುರಿಸಿ ದ್ದೇವೆ. ಆತ್ಮನಿರ್ಭರ ಭಾರತದ ಕಡೆ ಹೆಜ್ಜೆ ಹಾಕಿದ್ದೇವೆ. ಅಮೃತ ಕಾಲಕ್ಕಾಗಿ ಭದ್ರ ಬುನಾದಿ ಹಾಕಿದ್ದೇವೆ ಎಂದು ಸೀತಾರಾಮನ್ ಬಜೆಟ್ ಮಂಡನೆಯಲ್ಲಿ ಹೇಳಿದ್ದಾರೆ.
ಬಜೆಟ್ನಲ್ಲಿ ಸಾಮಾಜಿಕ ನ್ಯಾಯ ಹಾಗೂ ಸೆಕ್ಯುಲರಿಸಂಗಳಿಗೆ ಹೊಸ ವ್ಯಾಖ್ಯಾನವನ್ನೂ ಬರೆಯಲಾಗಿದೆ.
ಹಿಂದೆ ಸಾಮಾಜಿಕ ನ್ಯಾಯ ಕೇವಲ ರಾಜಕೀಯ ಘೋಷಣೆಯಾಗಿತ್ತು. ನಮ್ಮ ಸರ್ಕಾರ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಹಾಗೂ ಆಡಳಿತದ ಅಗತ್ಯ ಮಾದರಿಯಾಗಿ ಜಾರಿಗೆ ತಂದಿದೆ. ಎಲ್ಲ ಅರ್ಹರಿಗೆ ಯೋಜನೆಗಳನ್ನು ತಲುಪಿಸಲಾಗಿದೆ. ಇದರಿಂದಾಗಿ ಸಮಗ್ರ ಸಾಮಾಜಿಕ ನ್ಯಾಯ ಸಾಧಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು.
ಇದು ಸಕ್ರಿಯವಾಗಿರುವ ಸೆಕ್ಯುಲರಿಸಂ ಆಗಿದೆ. ಭ್ರಷ್ಟಾಚಾರ ಕಡಿಮೆ ಮಾಡಲಾಗಿದೆ ಹಾಗೂ ಸ್ವಜನಪಕ್ಷ ವಾದ ತಡೆಯಲಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಪಾರದರ್ಶಕತೆಯ ಭರವಸೆ ಇದೆ ಎಂದೂ ಅವರು ಹೇಳಿದರು.
ಬಡವರು, ಮಹಿಳೆಯರು, ಯುವಕರು ಹಾಗೂ ರೈತರು ನಾಲ್ಕು ಪ್ರಮುಖ ಜಾತಿಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದನ್ನು ಪ್ರಸ್ತಾಪಿಸಿರುವ ಸೀತಾರಾಮನ್, ಈ ವರ್ಗದವರಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಇವರೆಲ್ಲರ ಉತ್ತಮ ಜೀವನಕ್ಕೆ ಬೆಂಬಲ ನೀಡಲಾಗಿದೆ. ಇವರ ಸಶಕ್ತೀಕರಣ ಹಾಗೂ ಕಾಳಜಿಯಿಂದ ದೇಶ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೇರ ಹಾಗೂ ಪರೋಕ್ಷ ತೆರಿಗೆಯಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಆದರೆ, 2009-10ರವರೆಗಿನ 25 ಸಾವಿರ ರೂ.ಗಳವರೆಗಿನ ಆದಾಯ ತೆರಿಗೆ ಹಾಗೂ 2010-11ರಿಂದ 2014-15ರವರೆಗಿನ 10 ಸಾವಿರ ರೂ.ಗಳ ಆದಾಯ ತೆರಿಗೆ ಬೇಡಿಕೆಯನ್ನು ಕೈ ಬಿಡಲಾಗುವುದು. ಇದರಿಂದ ಒಂದು ಕೋಟಿ ತೆರಿಗೆದಾರರಿಗೆ ನೆರವಾಗಲಿದೆ.
ಬಂಡವಾಳ ವೆಚ್ಚವನ್ನು ಶೇ.11ರಷ್ಟು ಹೆಚ್ಚಿಸಿ 11.11 ಲಕ್ಷ ಕೋಟಿ ರೂ.ಗಳಿಗೆ ನಿಗದಿ ಪಡಿಸಲಾಗಿದೆ. ವಿತ್ತೀಯ ಕೊರತೆ 2024-25ರಲ್ಲಿ ಶೇ.5.1ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಶೇ.5.8ಕ್ಕಿಂತ ಕಡಿಮೆ.
ಮುಂದಿನ ಹಣಕಾಸು ವರ್ಷಕ್ಕಾಗಿ ಸರ್ಕಾರ 14.13 ಲಕ್ಷ ಕೋಟಿ ರೂ.ಗಳ ಸಾಲ ಪಡೆಯಲಿದೆ. ಇದು 2023-24ರ ಸಾಲವಾದ 15.43 ಲಕ್ಷ ಕೋಟಿ ರೂ.ಗಳಿಗಿಂತ ಕಡಿಮೆಯಾಗಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಬಂಡವಾಳ ಹಿಂತೆಗೆತದಿಂದ 50 ಸಾವಿರ ಕೋಟಿ ರೂ.ಗಳನ್ನು ಪಡೆಯುವ ಗುರಿ ಹೊಂದಲಾಗಿದೆ. ಈ ವರ್ಷ 30 ಸಾವಿರ ಕೋಟಿ ರೂ.ಗಳ ಗುರಿ ಇತ್ತು.
ಮುಂದಿನ ಹಣಕಾಸು ವರ್ಷದಲ್ಲಿ ನೇರ ತೆರಿಗೆಯಿಂದ 21.99 ಲಕ್ಷ ಕೋಟಿ ರೂ. ಹಾಗೂ ಪರೋಕ್ಷ ತೆರಿಗೆಯಿಂದ 16.22 ಲಕ್ಷ ಕೋಟಿ ರೂ. ದೊರೆಯುವ ನಿರೀಕ್ಷೆ ಇದೆ.
ಯುವಕರಿಗೆ ಬಡ್ಡಿ ರಹಿತ ಸಾಲ ನೀಡಲು 1 ಲಕ್ಷ ಕೋಟಿ ರೂ.ಗಳ ನಿಧಿ ಸ್ಥಾಪಿಸಲಾಗುವುದು. ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಸಾಲ ನೀಡುವ ಯೋಜನೆಯನ್ನು ಮುಂದುವರೆಸಲು ಹಾಗೂ ಇದಕ್ಕಾಗಿ 1.3 ಲಕ್ಷ ಕೋಟಿ ರೂ.ಗಳನ್ನು ಒದಗಿಸಲು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.