ಖೋಟಾ ನೋಟಿನ ಜಾಲ ಬಯಲು

ಖೋಟಾ ನೋಟಿನ ಜಾಲ ಬಯಲು

7.70 ಲಕ್ಷ ರೂ. ಮುಖ ಬೆಲೆಯ ಖೋಟಾ ನೋಟು ವಶ

ದಾವಣಗೆರೆ, ಜ. 24 – ಖೋಟಾ ನೋಟುಗಳನ್ನು ತಯಾರಿಸಿ ಚಲಾವಣೆ ಮಾಡುತ್ತಿದ್ದ ಆರು ಅಂತರ್ ಜಿಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜ.17ರಂದು ಹರಿಹರ ತಾಲ್ಲೂಕು ಹನಗವಾಡಿ ಗ್ರಾಮದ ಬಳಿಯ ಸರ್ವೀಸ್ ರಸ್ತೆಯಲ್ಲಿ ಇಬ್ಬರು ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದ ಮಾಹಿತಿ ದೊರೆತಿತ್ತು. ಈ ಬಗ್ಗೆ ವಿಚಾರಣೆ ಮುಂದುವರೆಸಿದಾಗ, ಖೋಟಾ ನೋಟಿನ ಜಾಲ ಬಯಲಾಗಿದೆ ಎಂದರು.

ದಾವಣಗೆರೆ ತಾಲ್ಲೂಕು ಕುಕ್ಕುವಾಡದ ಟಿ. ಕುಬೇರಪ್ಪ (58) ಹಾಗೂ ತಾಲ್ಲೂಕಿನ ಐಗೂರು – ಲಿಂಗಾಪುರದ ಹರೀಶ್ (29) ಖೋಟಾ ನೋಟು ಪ್ರಕರಣದ ಸೂತ್ರಧಾರಿಗಳು ಎಂಬುದು ಪತ್ತೆಯಾಗಿದೆ.

ಇವರನ್ನು ಬಂಧಿಸಿ, 37 ಸಾವಿರ ರೂ. ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವರಿಂದ ದೊರೆತ ಮಾಹಿತಿ ಆಧರಿಸಿ ಶಿವಮೊಗ್ಗ ಜಿಲ್ಲೆಯ ದೊಡ್ಡಗೊಪ್ಪೇನಹಳ್ಳಿಯ ಜೆ. ರುದ್ರೇಶ (39), ಮೈಸೂರು ಜಿಲ್ಲೆ  ಮಾಕನಹಳ್ಳಿಯ ಮನೋಜ್ ಗೌಡ (21), ಮಂಡ್ಯ ಜಿಲ್ಲೆಯ ಬೋರೆಕಲ್ಲಹಳ್ಳಿಯ ಸಂದೀಪ (30), ಚಿತ್ರದುರ್ಗ ಜಿಲ್ಲೆಯ ಕಲ್ಕೆರೆ ಲಂಬಾಣಿ ಹಟ್ಟಿಯ ಕೃಷ್ಣ ನಾಯ್ಕ (28) ಇವರನ್ನು ಬಂಧಿಸಲಾಗಿದೆ.

ಆರು ಜನ ಬಂಧಿತರಿಂದ 7.70 ಲಕ್ಷ ರೂ. ಮುಖಬೆಲೆಯ ಖೋಟಾ ನೋಟುಗಳು ಹಾಗೂ 43 ಸಾವಿರ ರೂ.ಗಳ ಅಸಲಿ ನೋಟುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಖೋಟಾ ನೋಟು ತಯಾರಿಸಲು ಬಳಸುವ 3 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್, ಕಲರ್ ಪ್ರಿಂಟರ್, ಪೇಪರ್ ಕಟ್ಟರ್, ಕಲರ್ ಬಾಟಲಿ, ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.

ಈ ಆರೋಪಿಗಳು 500 ರೂ. ಹಾಗೂ 200 ರೂ.ಗಳ ಖೋಟಾ ನೋಟುಗಳನ್ನು ತಯಾರು ಮಾಡುತ್ತಿದ್ದರು. ಇವರಿಂದ ಇನ್ನೂ ಪೂರ್ಣ ರೀತಿ ಮುದ್ರಣವಾಗದ 30 ಲಕ್ಷ ರೂ. ಮುಖಬೆಲೆಯ ನೋಟುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಕಳೆದ ಮೂರು ತಿಂಗಳಲ್ಲಿ ಇವರು ಸುಮಾರು 20 ಲಕ್ಷ ರೂ. ಮುಖ ಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದ್ದರು. ನಾವು 7.70 ಲಕ್ಷ ರೂ.ಗಳ ಮುಖ ಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದೇವೆ. ಉಳಿದವು ಚಲಾವಣೆಯಲ್ಲಿರುವ ಶಂಕೆ ಇದೆ ಎಂದು ಉಮಾ ಪ್ರಶಾಂತ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎ.ಎಸ್.ಪಿ.ಗಳಾದ ಎಂ. ವಿಜಯಕುಮಾರ ಸಂತೋಷ ಹಾಗೂ ಜಿ. ಮಂಜುನಾಥ್, ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ, ಹರಿಹರ ವೃತ್ತದ ಸಿ.ಪಿ.ಐ. ಸುರೇಶ ಸಗರಿ ಮತ್ತಿತರರು ಉಪಸ್ಥಿತರಿದ್ದರು.

ಈ ಹಿಂದೆಯೂ ಖೋಟಾ ನೋಟು ಕೃತ್ಯ

ಕುಕ್ಕವಾಡದ ಕುಬೇರಪ್ಪ ಹಾಗೂ ಐಗೂರು – ಲಿಂಗಾಪುರದ ಹರೀಶಗೌಡ ಈ ಹಿಂದೆ ಖೋಟಾ ನೋಟು ಪ್ರಕರಣ ಎದುರಿಸುತ್ತಿದ್ದರು. ಇವರ ವಿರುದ್ಧ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 2022ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ಕಳೆದ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಇವರು, ಮತ್ತೆ ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.

ಖೋಟಾದಲ್ಲಿ ಸಿಕ್ಕಿಬಿದ್ದ ಎಂ.ಬಿ.ಎ. ಪದವೀಧರ

ಶಿವಮೊಗ್ಗ ಜಿಲ್ಲೆಯ ದೊಡ್ಡಗೊಪ್ಪೇನಹಳ್ಳಿಯ ಜೆ. ರುದ್ರೇಶ ಎಂ.ಬಿ.ಎ. ಪದವೀಧರ. ಕೋಳಿ ಫಾರಂ ಒಂದನ್ನು ನಡೆಸುತ್ತಿದ್ದ. ಕೊರೊನಾ ವೇಳೆ ನಷ್ಟವಾಗಿತ್ತು, ಬೇರೆ ಉದ್ಯೋಗವೂ ಸಿಕ್ಕಿರಲಿಲ್ಲ.

ಇದೇ ವೇಳೆ ಕುಬೇರಪ್ಪ ಹಾಗೂ ಹರೀಶ ಪರಿಚಯವಾಗಿ, ಖೋಟಾ ನೋಟು ದಂಧೆಯಲ್ಲಿ ಜೊತೆಯಾದ. ಖೋಟಾ ನೋಟಿನ ತಯಾರಿಗೆ ಅಗತ್ಯವಾದ ತಾಂತ್ರಿಕ ಪರಿಣಿತಿಯನ್ನು ರುದ್ರೇಶ ಒದಗಿಸುತ್ತಿದ್ದ. ಮನೋಜ್ ಗೌಡ ಹಾಗೂ ಸಂದೀಪ ನೋಟುಗಳನ್ನು ಮುದ್ರಿಸುತ್ತಿದ್ದರು. ಕುಬೇರಪ್ಪ, ಹರೀಶ್ ಹಾಗೂ ಕೃಷ್ಣಾನಾಯ್ಕ ಈ ನೋಟುಗಳನ್ನು ಚಲಾವಣೆಗೆ ತರುತ್ತಿದ್ದರು.

ಅಸಲಿ ನೋಟುಗಳ ನಡುವೆ ನಕಲಿ ನೋಟುಗಳನ್ನು ಇಟ್ಟು, ಜನನಿಬಿಡ ಪ್ರದೇಶಗಳು ಹಾಗೂ ಸಂಜೆ ಕತ್ತಲು ಕವಿದ ಸಮಯದಲ್ಲಿ ವಹಿವಾಟಿಗೆ ಮುಂದಾಗುತ್ತಿದ್ದರು.

error: Content is protected !!