ತಂತ್ರಜ್ಞಾನ ಮುಂದುವರೆದಂತೆ ಸಾಮಾಜಿಕ ಪಿಡುಗುಗಳೂ ನಿರ್ಮೂಲನೆಯಾಗಬೇಕಿದೆ : ನ್ಯಾ. ರಾಜೇಶ್ವರಿ ಹೆಗಡೆ

ತಂತ್ರಜ್ಞಾನ ಮುಂದುವರೆದಂತೆ ಸಾಮಾಜಿಕ ಪಿಡುಗುಗಳೂ ನಿರ್ಮೂಲನೆಯಾಗಬೇಕಿದೆ : ನ್ಯಾ. ರಾಜೇಶ್ವರಿ ಹೆಗಡೆ

ಗಣರಾಜ್ಯೋತ್ಸವ ಜಾಥಾಕ್ಕೆ ಚಾಲನೆ

ದಾವಣಗೆರೆ, ಜ. 24- ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದರೂ ಸಹ ಸಾಮಾಜಿಕ ಪಿಡುಗುಗಳಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ  ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಕಳವಳ ವ್ಯಕ್ತಪಡಿಸಿದರು.

ನಗರದ ಆರ್.ಎಲ್. ಕಾನೂನು ಕಾಲೇಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತಾಡಿದರು.

ಬ್ರಿಟೀಷರ ಕಪಿಮುಷ್ಟಿಯಿಂದ ಹೊರ ಬಂದ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಇದರ ಜೊತೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡುವಂತಹ ಸಾಧನೆಯನ್ನೂ ಮಾಡಬೇಕಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ, ಸದೃಢ ಸಮಾಜ ನಿರ್ಮಾಣ ಹೇಗೆ ಸಾಧ್ಯ? ಎಂದವರು ಪ್ರಶ್ನಿಸಿದರು.

ಕಾನೂನು ವಿದ್ಯಾರ್ಥಿಗಳು ಇಂತಹ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡುವಂತಹ ಕಾರ್ಯಗಳಲ್ಲಿ ಕೈ ಜೋಡಿಸಬೇಕು. ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಜಿ. ಸಲಗರೆ ಮಾತನಾಡುತ್ತಾ, ಜನ ಸೇವೆ ಮಾಡಲು ವಕೀಲ ವೃತ್ತಿಗಿಂತ ಬೇರೆ ವೃತ್ತಿ ಇಲ್ಲ. ಇದು ಗೌರವಾನ್ವಿತ ವೃತ್ತಿ ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವಲ್ಲಿ ಹಾಗೂ ನಂತರ ಸಂವಿಧಾನ ರಚನೆಯಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ.
ಹಿರಿಯರು ಕಷ್ಟ ಪಟ್ಟು ಪಡೆದ ಸ್ವಾತಂತ್ರ್ಯವನ್ನು ಉತ್ತಮ ರೀತಿಯಲ್ಲಿ ಉಳಿಸಬೇಕು.
ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲಿದೆ ಎಂದರು.

ಸಾಕಷ್ಟು ಜನರು ಇಂದು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಅನೇಕರಿಗೆ ಒಂದು ಹೊತ್ತಿನ ಊಟವೂ ಸಿಗುತ್ತಿಲ್ಲ. ಇಂತವರನ್ನು ಗುರುತಿಸಿ, ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಒದಗಿಸುವಲ್ಲಿ ಕಾನೂನು ವಿದ್ಯಾರ್ಥಿಗಳು ಕೈ ಜೋಡಿಸಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಆರ್.ಎಲ್. ಕಾನೂನು ಕಾಲೇಜು ಪ್ರಾಚಾರ್ಯ ಡಾ.ಜಿ.ಎಸ್. ಯತೀಶ್, ವಿದ್ಯಾಹರ ವೇದವರ್ಮ ಟಿ., ಡಾ.ಪಂಕಜಾ ಟಿ.ಸಿ., ಪವನ್ ಹೆಚ್.ಆರ್. ಇತರರು ಉಪಸ್ಥಿತರಿದ್ದರು.

error: Content is protected !!