ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು

ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ

ದಾವಣಗೆರೆ, ಜ.24-  ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆದು, ಅವರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಸಿಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ತಿಳಿಸಿದರು.

ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಬೇಟಿ ಬಚಾವೋ-ಬೇಟಿ ಪಡಾವೋ” ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಅಭಿಯಾನದಡಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಈಗಿನ ದಿನಮಾನದಲ್ಲಿ ಎಲ್ಲ ಸವಾಲುಗಳನ್ನು ಸ್ವೀಕರಿಸಿ, ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುವುದರ ಮೂಲಕ ತನ್ನದೇ ಆದ ನೆಲೆ ಕಂಡುಕೊಂಡು ಧೈರ್ಯದಿಂದ ಮುನ್ನಡೆಯುತ್ತಿದ್ದಾಳೆ. ಇಂತಹ ಹೆಣ್ಣು ಮಕ್ಕಳನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಗುಣವನ್ನು ನಾವೆಲ್ಲರೂ ಬೆಳಿಸಿಕೊಳ್ಳಬೇಕು ಎಂದರು.

ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಬಹಳಷ್ಟು ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಪ್ಪಿತಸ್ಥರಿಗೆ ಕಾನೂನಿನ ರೀತಿಯಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸಿದರೆ ಮಾತ್ರ ಮುಂದೆ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.  ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಮಾತನಾಡಿ, ಗಂಡು ಮಕ್ಕಳಿಗೆ ಉನ್ನತ ಹಂತದ ಶಿಕ್ಷಣ ನೀಡಿದರೆ, ಹೆಣ್ಣು ಮಕ್ಕಳ ಶಿಕ್ಷಣ ಕೇವಲ ಪ್ರೌಢಶಾಲೆ ಅಥವಾ ಕಾಲೇಜು ಹಂತಕ್ಕೆ ಸೀಮಿತಗೊಳಿಸುವಂತಹ ಭಾವನೆಗಳು ಇಂದಿಗೂ ನಮ್ಮಲ್ಲಿ ಜೀವಂತವಾಗಿವೆ. ಹೆಣ್ಣು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದಾಳೆ. ಗಂಡು ಮಕ್ಕಳಿಗೆ ನೀಡುವಂತಹ ಸ್ವಾತಂತ್ರ್ಯವನ್ನು ಹೆಣ್ಣು ಮಕ್ಕಳಿಗೆ ನೀಡಬೇಕೆಂದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವುದು ಹಾಗೂ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ಜ.24 ರಂದು `ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ಯನ್ನು ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿಯನ್ವಯ ಲಿಂಗಾನುಪಾತದನ್ವಯ 1000 ಪುರುಷರಿಗೆ 1006 ಮಹಿಳೆಯರಿದ್ದಾರೆ. ನಮ್ಮಲ್ಲಿರುವ ಲಿಂಗ ತಾರತಮ್ಯದ ಭಾವನೆ ಬದಲಾಗಬೇಕು. ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳು ಗರ್ಭಿಣಿಯರಾಗುತ್ತಿದ್ದಾರೆ. ಇದು ನಮ್ಮ ಜಿಲ್ಲೆಗೆ ಕಳಂಕ ತರುವ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಹೆಣ್ಣು-ಗಂಡು ಎಂಬ ಭೇದ ತೋರದೆ, ಮಕ್ಕಳಿಗೆ ಸಮಾನ ಶಿಕ್ಷಣ ನೀಡಿ, ಅವರನ್ನು ಪ್ರೋತ್ಸಾಹಿಸಿ ಬೆಳೆಸುವ ಮೂಲಕ ಮಕ್ಕಳ ಸಾಧನೆಗೆ ಸ್ಪೂರ್ತಿ ನೀಡಬೇಕು ಎಂದರು. ಹೆಣ್ಣು ಪ್ರಕೃತಿ, ಹೆಣ್ಣು ಸಂಸ್ಕೃತಿ, ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಸಂರಕ್ಷಿಸಿ ಮುನ್ನಡೆಸಿದರೆ ನಾಗರಿಕತೆ ಉಳಿದು, ಸಮಾಜ ಮತ್ತು ದೇಶ ಅಭಿವೃದ್ಧಿಯಾಗುತ್ತದೆ ಎಂದರು.

ಜಿ.ಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಮಹಿಳಾ
ರಕ್ಷಣಾ ಘಟಕದ ರಕ್ಷಣಾಧಿಕಾರಿ ಕವಿತ,  ಮಹಿಳಾ ಠಾಣೆಯ
ಸಬ್‌ಇನ್‌ಸ್ಪೆಕ್ಟರ್ ಮಲ್ಲಮ್ಮ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿಯ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!