ಮಹಾನಗರ ಪಾಲಿಕೆಯಿಂದ ರಾಮನ ಫ್ಲೆಕ್ಸ್ ತೆರವು

ಮಹಾನಗರ ಪಾಲಿಕೆಯಿಂದ ರಾಮನ ಫ್ಲೆಕ್ಸ್ ತೆರವು

ಬಿಜೆಪಿ, ಹಿಂದೂ ಸಂಘಟನೆಗಳ ಆಕ್ರೋಶ, ಪ್ರತಿಭಟನೆ, ಪಾಲಿಕೆ ಆಯುಕ್ತರ ಕ್ಷಮೆ ಯಾಚನೆಗೆ ಬಿಗಿ ಪಟ್ಟು, ಕ್ಷಮೆ ಯಾಚನೆ ನಂತರ ಪ್ರತಿಭಟನೆ ವಾಪಾಸ್

ದಾವಣಗೆರೆ, ಜ.23- ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳು, ಧ್ವಜಗಳು, ಬಂಟಿಂಗ್ಸ್‌ಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿಗಳು ತೆರವು ಮಾಡಲು ಮುಂದಾಗಿದ್ದನ್ನು ವಿರೋಧಿಸಿ ಮಂಗಳವಾರ ಹಿಂದೂ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. 

ಬೆಳಿಗ್ಗೆ ವಿನೋಬನಗರದ ನರಹರಿಷಟ್ ಕಲ್ಯಾಣ ಮಂಟಪದ ಬಳಿ ಅಳವಡಿಸಲಾಗಿದ್ದ ಕಟೌಟ್ ಹಾಗೂ ಫ್ಲೆಕ್ಸ್‌ಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸುತ್ತಿರುವುದು ತಿಳಿಯುತ್ತಿದ್ದಂತೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಮುಖಂಡರು ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪಾಲಿಕೆ ಸಿಬ್ಬಂದಿಗಳು, ಪೊಲೀಸರು ಹಾಗೂ ಪ್ರತಿಭಟನಾಕಾರರು ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಪಿ.ಬಿ. ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಎರಡು ಗಂಟೆಗಳ ಕಾಲ ರಾಮ ಭಜನೆ ಮಾಡುತ್ತಾ ಆಕ್ರೋಶ ಹೊರ ಹಾಕಿದರು. ಇಂದು ಹಿಂದೂ ವಿರೋಧಿ ನೀತಿ ಎಂದು ಮಹಾನಗರ ಪಾಲಿಕೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಸ್ತೆ ತಡೆ ಆರಂಭಿಸಿ ಗಂಟೆ ಕಳೆದರೂ ಪಾಲಿಕೆ ಆಯುಕ್ತರು ಸ್ಥಳಕ್ಕೆ ಆಗಮಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಮಹಾನಗರ ಪಾಲಿಕೆ ಮುತ್ತಿಗೆ ಹಾಕಲು ಹೊರಟರು. ಈ ವೇಳೆ  ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರು. ತಳ್ಳಾಟ, ನೂಕಾಟ ಉಂಟಾಯಿತು. ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಪಾಲಿಕೆ ಕಡೆ ಹೊರಟು, ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು.

ಏತನ್ಮಧ್ಯೆ ಎಸ್ಪಿ ಉಮಾ ಪ್ರಶಾಂತ್ ಅವರು ಪ್ರತಿಭಟನಾಕಾರರ ಮನವೊಲಿಸಲು ನಡೆಸಿದ ಪ್ರಯತ್ನವೂ ವಿಫಲವಾಯಿತು. ಕೂಡಲೇ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಆಯುಕ್ತರು ಕ್ಷಮೆ ಕೇಳಬೇಕು ತೆರವುಗೊಳಿಸಿರುವ ಫ್ಲೆಕ್ಸ್, ಬಂಟಿಂಗ್ಸ್ ಮತ್ತೆ ಹಾಕಬೇಕೆಂದು ಅಗ್ರಹಿಸಿದರು.

ಪಾಲಿಕೆ ಮುಂಭಾಗ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ಕೆಲಸ ಮಾಡಬಾರದು. ಅನ್ಯ ಕೋ ಮಿನಿ ಕಟೌಟ್‌ಗಳು, ಹಸಿರು ಬಣ್ಣದ ಧ್ವಜಗಳು ತಿಂಗಳುಗಟ್ಟಲೆ ಇರುತ್ತವೆ. ಆದರೆ ಹಿಂದೂ ರಾಷ್ಟ್ರದಲ್ಲಿ ಕೇಸರಿ ಧ್ವಜಗಳನ್ನು ತೆಗೆಸಲಾಗುತ್ತದೆ. ಮುಖ್ಯಮಂತ್ರಿಗಳು ಸ್ವಾರ್ಥಕ್ಕಾಗಿ ಹಿಂದೂ ಗಳನ್ನು ಬಗ್ಗುಬಡಿಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ನಾವೇ ಗೌರವದಿಂದ ಶ್ರೀರಾಮನ ಕಟೌಟ್‌ಗಳನ್ನು ತೆರವುಗೊಳಿಸುತ್ತೇವೆ. ಅಲ್ಲಿಯವರಿಗೆ ಅಧಿಕಾರಿಗಳು ಸುಮ್ಮನಿರಬೇಕು ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ , ರಾಜ್ಯದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಕಟ್ಟಿರುವ ಪ್ಲೆಕ್ಸ್ ಗಳನ್ನು, ಧ್ವಜವನ್ನು ತೆರವು ಗೊಳಿಸಿದರೆ ರಾಜ್ಯಾದ್ಯಂತ  ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಪಾಲಿಕೆ ಮಾಜಿ ಮೇಯರ್ ಎಸ್.ಟಿ ವೀರೇಶ್ ಮಾತನಾಡಿ, ಐತಿಹಾಸಿಕ ರಾಮ ಸಂಭ್ರಮಾಚರಣೆಗಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಗಳನ್ನ ಪಾಲಿಕೆ ಅಧಿಕಾರಿಗಳು ದುರ್ವರ್ತನೆಯಿಂದ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಇದನ್ನು ಎಲ್ಲಾ ರಾಮಭಕ್ತರು ಉಗ್ರವಾಗಿ ಖಂಡಿಸುತ್ತೇವೆ ಎಂದರು.

ಕಾನೂನು ಎಲ್ಲರಿಗೂ ಅನ್ವಯವಾಗಬೇಕು. ಈ ಹಿಂದೆ 5-6 ತಿಂಗಳ ಹಿಂದೆ ಜನ್ಮ ದಿನಕ್ಕಾಗಿ ಹಾಕಲಾಗಿದ್ದ ಬಂಟಿಂಗ್ಸ್ ಗಳು ಇನ್ನು ಇವೆ. ಅದನ್ನು ತೆರವುಗೊಳಿಸದೆ ರಾಮಭಕ್ತರು ಹಾಕಿರುವ ಫ್ಲೆಕ್ಸ್ ಗಳನ್ನು ತೆರವುಗೊಳಿಸಿ  ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಇದರಿಂದ ಮುಂದೆ ಅಶಾಂತಿ ಉಂಟಾದರೆ ಇದಕ್ಕ ನೇರ ಹೊಣೆ ಪಾಲಿಕೆ ಅಧಿಕಾರಿಗಳು ಎಂದು ಎಚ್ಚರಿಸಿದರು.

ಪಾಲಿಕೆ ಸದಸ್ಯ ಶಿವಾನಂದ್ ಮಾತನಾಡಿ, ಕೇವಲ 24 ಗಂಟೆ ಒಳಗೆ ಫ್ಲಕ್ಸ್ ಗಳನ್ನು ತೆರವುಗೊಳಿಸಲು ಆಯುಕ್ತರು ಆದೇಶಿಸಿದ್ದಾರೆ ಇವರಿಗೆ ಯಾರ ಕುಮ್ಮಕ್ಕಿದೆ ಎಂದು ಆಯುಕ್ತರೇ ಸ್ಥಳಕ್ಕೆ ಆಗಮಿಸಿ ನಿಜಾಂಶ ಹೇಳಬೇಕು. ರಾಜ್ಯ ಸರ್ಕಾರ ಆದೇಶಿಸಿದ್ದಾರೆ ಅದರ ಪ್ರತಿಯನ್ನು ನಮಗೆ ನೀಡಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ರೇಣುಕಾ ಮಾತನಾಡಿ, ಫ್ಲೆಕ್ಸ್‌ಗಳ ತೆರುವಿನಿಂದ  ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಾಗ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಪಾಲಿಕೆ ಮಾಜಿ ಮೇಯರ್, ಬಿ.ಜೆ. ಅಜಯ್ ಕುಮಾರ್, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್,  ಸದಸ್ಯರಾದ ಕೆ.ಎಂ.ವೀರೇಶ್, ರಾಕೇಶ್ ಜಾಧವ್, ಆರೈಕೆ ಆಸ್ಪತ್ರೆಯ ಮುಖ್ಯಸ್ಥ  ಡಾ. ರವಿಕುಮಾರ್, ಹಿಂದೂ ಸಂಘಟನೆ ಮುಖಂಡರಾದ ಸತೀಶ್ ಪೂಜಾರಿ, ಗುರು ಜೊಳ್ಳಿ, ಸುರೇಶ್ ಗಂಡಗಾಳೆ, ಅನಿತ್ ಕುಮಾರ್, ಬಿ. ಎಸ್.ಜಗದೀಶ್, ಶ್ರೀನಿವಾಸ್ ದಾಸಕರಿಯಪ್ಪ, ವೀರೇಶ್ ಹನಗವಾಡಿ, ರಾಜನಹಳ್ಳಿ ಶಿವಕುಮಾರ್, ಶಿವನಗೌಡ ಪಾಟೀಲ್, ಹೆಚ್. ಪಿ. ವಿಶ್ವಾಸ್, ಲೋಕಿಕೆರೆ ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!