ಶೇ.70 ಅಪಘಾತಗಳಿಗೆ ಯುವಕರ ಅತಿ ವೇಗ ಕಾರಣ

ಶೇ.70 ಅಪಘಾತಗಳಿಗೆ ಯುವಕರ ಅತಿ ವೇಗ ಕಾರಣ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್

ದಾವಣಗೆರೆ, ಜ. 23 – ದೇಶದಲ್ಲಿ ಸಂಭವಿಸುತ್ತಿರುವ ಶೇ.70ರಷ್ಟು ಅಪಘಾತಗಳಲ್ಲಿ ಯುವಜನತೆಯೇ ಭಾಗಿಯಾಗಿದ್ದಾರೆ. ಶೇ.72ರಷ್ಟು ಅಪಘಾತಗಳಿಗೆ ಅತಿ ವೇಗವೇ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ನಗರದ ಯು.ಬಿ.ಡಿಟಿ. ಕಾಲೇಜಿನಲ್ಲಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸದೇ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿರುವುದು, ಕರ್ಕಶ ಹಾರ್ನ್ ಹಾಗೂ ವೀಲಿಂಗ್‌ನಲ್ಲಿ ತೊಡಗಿರುವುದು ಕಂಡು ಬಂದಿದೆ. ಇಂತಹ ವರ್ತನೆಯಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಬ್ಬರಿಗೂ ತೊಂದರೆಯಾಗುತ್ತಿದೆ ಎಂದು ಉಮಾ ಪ್ರಶಾಂತ್ ತಿಳಿಸಿದರು.

ಪಾನಮತ್ತರಾಗಿ ಹಾಗೂ ಮಾದಕ ವಸ್ತುಗಳ ಸೇವಿಸಿ ವಾಹನ ಚಲಾಯಿಸುವುದು ಸಾಕಷ್ಟು ಪ್ರಕರಣಗಳಲ್ಲಿ ಅಪಘಾತಕ್ಕೆ ಕಾರಣವಾಗಿದೆ. ಮಾದಕಗಳ ದುಶ್ಚಟದಿಂದ ಹೊರ ಬರುವುದು ಕಷ್ಟ. ಇಂತಹ ವ್ಯಸನಗಳಿಂದ ದೂರವಿರಬೇಕು ಎಂದವರು ಕಿವಿಮಾತು ಹೇಳಿದರು.

ಶೇ.85-90ರಷ್ಟು ಅಪಘಾತಗಳಿಗೆ ಮಾನವ ಲೋಪವೇ ಕಾರಣ. ಸಾರ್ವಜನಿಕರ ನಿರ್ಲಕ್ಷ್ಯದಿಂದಲೇ ಬಹುತೇಕ ಅಪಘಾತಗಳು ಸಂಭವಿಸುತ್ತಿವೆ. ಇಂತಹ ಅಪಘಾತಗಳನ್ನು ತಡೆಯಲು ಸುರಕ್ಷತಾ ನಿಯಮಗಳು ಹಾಗೂ ಮೋಟಾರು ವಾಹನ ಕಾಯ್ದೆಗಳನ್ನು ಪಾಲಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.

ಅಪಘಾತ ನಡೆದ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗಲು ಜನರು ಮುಂದಾಗಬೇಕು. ಈ ರೀತಿ ನೆರವು ನೀಡಿದವರಿಗೆ ಪೊಲೀಸರಿಂದ ಯಾವುದೇ ತೊಂದರೆಯಾಗುವುದಿಲ್ಲ. ಗಾಯಗೊಂಡವರಿಗೆ ನೆರವಾಗಲು ತುರ್ತು ನೆರವು ಸಂಖ್ಯೆಯಾದ 112ಗೆ ಕರೆ ಮಾಡಿ ಎಂದವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾರಿಗೆ ಇಲಾಖೆ ಸೀನಿಯರ್ ಇನ್‌ಸ್ಪೆಕ್ಟರ್ ಎ.ಎಸ್. ಮೊಹಮ್ಮದ್ ಖಾಲೀದ್, ದೇಶದಲ್ಲಿ ವರ್ಷದಲ್ಲಿ 5 ಲಕ್ಷ ಅಪಘಾತಗಳು ಸಂಭವಿಸಿ 1.5 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಅಪಘಾತಗಳಿಂದ ಸಂಭವಿಸುವ ಸಾವುಗಳ ಸಂಖ್ಯೆ ಕೊವಿಡ್, ಕ್ಯಾನ್ಸರ್ ಹಾಗೂ ಏಡ್ಸ್‌ಗಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದರು.

ಯುವ ಪೀಳಿಗೆ ದೇಶದ ಆಸ್ತಿ. ಅವರು ಸಾವು ನೋವಿಗೆ ಸಿಲುಕಿದಾಗ ಕುಟುಂಬಕ್ಕಷ್ಟೇ ಅಲ್ಲದೇ ದೇಶಕ್ಕೇ ನಷ್ಟವಾಗುತ್ತದೆ. ಇಂತಹ ಅಪಘಾತಗಳನ್ನು ತಡೆಯಲು ತಂತ್ರಜ್ಞಾನ ಬಳಕೆಯ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಒತ್ತು ನೀಡಬೇಕು ಎಂದು ಹೇಳಿದರು.

ವೇದಿಕೆಯ ಮೇಲೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣನವರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ಯು.ಬಿ.ಡಿ.ಟಿ. ಕಾಲೇಜಿನ ಸಿವಿಲ್ ವಿಭಾಗದ ಚೇರ್ಮನ್ ಹೆಚ್. ಈರಮ್ಮ, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಉಪಸ್ಥಿತರಿದ್ದರು.

ಯು.ಬಿ.ಡಿ.ಟಿ. ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಪಿ. ನಾಗರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರೇಖಾ ಜಿ. ಪದಕಿ ಪ್ರಾರ್ಥಿಸಿದರು. ಡಾ. ಸಿ.ಎಂ. ರವಿಕುಮಾರ್ ಸ್ವಾಗತಿಸಿದರು. ಎಂ. ದಿವ್ಯಶ್ರೀ ನಿರೂಪಿಸಿದರೆ, ಎಂ. ಸುರೇಶ್ ವಂದಿಸಿದರು.

error: Content is protected !!