ಸಂಘರ್ಷದಿಂದ ಮಹಿಳೆ ಎಲ್ಲವನ್ನೂ ಪಡೆಯಬೇಕು

ಸಂಘರ್ಷದಿಂದ ಮಹಿಳೆ ಎಲ್ಲವನ್ನೂ ಪಡೆಯಬೇಕು

ನಗರದ §ಸತ್ವಸಂಗಮ¬ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ದಾವಣಗೆರೆ, ಜ. 23 – ಮಹಿಳೆಯರನ್ನು ಹಿಂದೆ ತಳ್ಳುವ ಪ್ರವೃತ್ತಿ ಈಗಲೂ ಇದೆ. ಈ ಸವಾಲನ್ನು ಹಿಂದಿಕ್ಕಿ, ಸಂಘರ್ಷದಿಂದಲೇ ಎಲ್ಲವನ್ನೂ ಪಡೆಯಲು ಮಹಿಳೆ ಮುಂದಾಗ ಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ನಗರದ ಆತ್ಮಿ ಅಸೋಸಿಯೇಷನ್ ವತಿಯಿಂದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದ §ಸತ್ವಸಂಗಮ¬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 21ನೇ ಶತಮಾನಕ್ಕೆ ಬಂದಿದ್ದರೂ ಮಹಿಳೆಯರ ಸವಾಲು ಗಳು ನಿವಾರಣೆಯಾಗಿಲ್ಲ. ಮಹಿಳೆಯರಿಗೆ ಸುಲಭ ವಾಗಿ ಏನೂ ಸಿಗುತ್ತಿಲ್ಲ. ಸಂಘರ್ಷದಿಂದಲೇ ಎಲ್ಲವನ್ನೂ ಪಡೆಯಬೇಕು ಎಂದರು.

ಮಹಿಳೆಯರು ಈಗ ಐಎಎಸ್ – ಐಪಿಎಸ್ ಪರೀಕ್ಷೆಗಳಲ್ಲಿ ಉನ್ನತ ರಾ್ಯಂಕ್ ಪಡೆಯುತ್ತಾರೆ. ಮಂಡಳಿ ಪರೀಕ್ಷೆಗಳಲ್ಲೂ ಮೊದಲ ಸ್ಥಾನಗಳಲ್ಲಿರುತ್ತಾರೆ. ಆದರೆ, ಮಹಿಳೆಯರಿಗೆ ಅವಕಾಶ ನೀಡುವ ವಿಷಯ ಬಂದಾಗ ಒಂದು ಹೆಜ್ಜೆ ಹಿಂದೆ ತಳ್ಳುತ್ತಾರೆ ಎಂದು ಸಚಿವರು ವಿಷಾದಿಸಿದರು.

ಮಹಿಳೆ ಈ ಎಲ್ಲ ಸವಾಲುಗಳನ್ನು ಮೆಟ್ಟಿ ತನ್ನ ಗುರಿ ತಲುಪಬೇಕಿದೆ. ಮಕ್ಕಳನ್ನು ಆರೋಗ್ಯವಂತ ಹಾಗೂ ಸುಶಿಕ್ಷಿತರನ್ನಾಗಿ ಮಾಡಿ ದೇಶ ಕಟ್ಟುವ ಹಾಗೂ ದೇಶ ಸಮೃದ್ಧಿ ಮಾಡುವ ಜವಾಬ್ದಾರಿಯೂ ಮಹಿಳೆಯರ ಮೇಲಿದೆ ಎಂದರು.

ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂ ಬನೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರ ಆರ್ಥಿಕ ಸಬಲೀಕರಣ ವಾಗಿದೆ. ಕುಟುಂಬ ನಿರ್ವಹಣೆ ಚೆನ್ನಾಗಿ ನಡೆಯುತ್ತಿದೆ ಎಂದು ಪ್ರತಿದಿನ ನೂರಾರು ಕರೆಗಳು ತಮಗೆ ಬರುತ್ತಿವೆ ಎಂದು ಹೆಬ್ಬಾಳ್ಕರ್ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, 12ನೇ ಶತಮಾನದಲ್ಲಿ ಪಟ್ಟಭದ್ರ ಹಿತಾಸಕ್ತರು ಮಹಿಳೆಯರನ್ನು ಕತ್ತಲ ಕೋಣೆಯಲ್ಲಿರಿಸಿದ್ದರು. ಆಗ ಬಸವಣ್ಣ ನವರು ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದರು ಎಂದರು.

ಇಂದು ಮಹಿಳೆಯರು ಸೈನಿಕರಾಗಿ, ಪೈಲಟ್‌ಗಳಾಗಿ, ಐಎಎಸ್-ಐಪಿಎಸ್ ಅಧಿಕಾರಿಗಳಾಗಿ ಎಲ್ಲ ವಲಯಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇಷ್ಟಾದರೂ, ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇಂತಹ ಕೃತ್ಯ ಎಸಗುವವರಿಗೆ ನ್ಯಾಯಾಲಯಗಳು ಕಠಿಣ ಶಿಕ್ಷೆ ನೀಡಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್, ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಬಿ.ಪಿ.ಎಲ್. ಕಾರ್ಡುದಾರರಿಗೆ 16 ಸಾವಿರಕ್ಕೂ ಹೆಚ್ಚು ಉಚಿತ ಡಯಾಲಿಸಿಸ್ ಹಾಗೂ 450 ಉಚಿತ ಹೆರಿಗೆಗಳನ್ನು ಮಾಡಿಸಲಾಗಿದೆ ಎಂದರು.

ಆರೋಗ್ಯ ಶಿಬಿರಗಳನ್ನು ಆಯೋಜಿಸಿ 10 ಸಾವಿರ ಜನರಿಗೆ ನೆರವು ನೀಡಲಾಗಿದೆ. ಗರ್ಭಕೋಶ ತಪಾಸಣೆ, ರಕ್ತಹೀನತೆಯ ತಪಾಸಣೆ, ಬಾಯಿ ಸ್ವಚ್ಛತೆ ಬಗ್ಗೆ ಅರಿವು, ಹೆಚ್.ಐ.ವಿ. ಸೋಂಕಿತರಿಗೆ ಜೀವನ ಕೌಶಲ್ಯ ಯೋಜನೆ ಮುಂತಾದ ಕ್ರಮಗಳನ್ನು ಟ್ರಸ್ಟ್ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದರು.

ವೇದಿಕೆಯ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಬಿ.ಎಸ್.ಸಿ. ಜವಳಿ ಸಂಸ್ಥೆಯ ಬಿ.ಸಿ. ಚಂದ್ರಶೇಖರ್, ಆತ್ಮಿ ಅಸೋಸಿಯೇಷನ್ ಅಧ್ಯಕ್ಷೆ ಬಿ. ಪ್ರಸನ್ನ, ಕಾರ್ಯದರ್ಶಿ ಶೋಭ ಶಿವರಾಜ್, ಸಮಾಜ ಸೇವಾ ಕಾರ್ಯಕರ್ತ ಘನಶ್ಯಾಮ್ ಟಿ. ಬಾಂಡಗೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!