ಮಲೇಬೆನ್ನೂರು ಸೌಂದರ್ಯ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ : ಶಾಸಕ ಹರೀಶ್

ಮಲೇಬೆನ್ನೂರು ಸೌಂದರ್ಯ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ : ಶಾಸಕ ಹರೀಶ್

ಮಲೇಬೆನ್ನೂರಿನಿಂದ ಕೊಕ್ಕನೂರಿನವರೆಗೆ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಶೀಘ್ರ ಚಾಲನೆ

ಮಲೇಬೆನ್ನೂರು, ಜ.17- ಪಟ್ಟಣದ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡಲು ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸಹಕರಿಸಬೇಕೆಂದ ಶಾಸಕ ಬಿ.ಪಿ.ಹರೀಶ್ ಹೇಳಿದರು.

ಪಟ್ಟಣದ ನಂದಿಗುಡಿ ರಸ್ತೆಯ ಅಕ್ಕ-ಪಕ್ಕದಲ್ಲಿ ಸಿ.ಸಿ ಚರಂಡಿ ನಿರ್ಮಿಸಲು ತೆರವು ಮಾಡಿದ್ದ ಶೆಡ್‌ಗಳನ್ನು ಪುನಃ ಅಲ್ಲಿಯೇ ಇಡಲು ಅವಕಾಶ ಮಾಡಿಕೊಡುವಂತೆ ವ್ಯಾಪಾರಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ನಂತರ ಪುರಸಭೆ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ, ಮಾತನಾಡಿದರು.

ಪಟ್ಟಣದಲ್ಲಿ ಇನ್ನು ಮುಂದೆ ಏನೇ ಮಾಡಿದರೂ ಪ್ಲಾನ್ ಪ್ರಕಾರ ಮಾಡಬೇಕು. ಏಕೆಂದರೆ, ಪಟ್ಟಣ ಬೆಳೆಯುತ್ತಿರುವುದರಿಂದ ನಾವು ಮುಂದಿನ ವ್ಯವಸ್ಥೆಗೆ ಸಜ್ಜಾಗಬೇಕಿದೆ. ಹಾಗಾಗಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಶೆಡ್‌ಗಳನ್ನು ಇಡಬೇಡಿ. ಪುರಸಭೆ ನಿಗದಿ ಮಾಡುವ ಸ್ಥಳದಲ್ಲಿ ವ್ಯಾಪಾರ ಮಾಡಿ ಎಂದು ಹರೀಶ್ ಸಲಹೆ ನೀಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಕೊಡುವ ಉದ್ದೇಶ ಯಾರಿಗೂ ಇಲ್ಲ. ಆದರೆ, ನಿಯಮಗಳನ್ನು ಯಾರೂ ಉಲ್ಲಂಘನೆ ಮಾಡಬಾರದೆಂದು ಹೇಳಿದ ಹರೀಶ್ ಅವರು, ನಂದಿಗುಡಿ ರಸ್ತೆ ಡಾಂಬರೀಕರಣ ಮತ್ತು ರಸ್ತೆಯ ಅಕ್ಕ-ಪಕ್ಕದಲ್ಲಿ ಚರಂಡಿವರೆಗೂ ಸಿಮೆಂಟ್ ಬ್ರಿಕ್ಸ್ ಹಾಕಿದ ನಂತರ 6×6 ಅಳತೆಯಲ್ಲಿ ಒಂದೇ ತರಹದಲ್ಲಿ ಶೆಡ್‌ಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡುತ್ತೇವೆಂದು ಹೇಳಿದರು. ಇದಕ್ಕೆ ವ್ಯಾಪಾರಸ್ಥರು ಸಮ್ಮತಿ ಸೂಚಿಸಿ, ಶಾಸಕ ಹರೀಶ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಹಾಜರಿದ್ದ ಲೋಕೋಪಯೋಗಿ ಇಲಾಖೆಯ ಎಇ ಬಿ.ಜಿ.ಶಿವರುದ್ರಪ್ಪ ಅವರು, 4 ಕೋಟಿ ರೂ. ವೆಚ್ಚದಲ್ಲಿ ಮಲೇಬೆನ್ನೂರಿನ ಎಸ್.ಹೆಚ್.ರಸ್ತೆಯಿಂದ ಕೊಕ್ಕನೂರಿನವರೆಗೆ ಹದಗೆಟ್ಟಿರುವ ರಸ್ತೆಯಲ್ಲಿ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಪುರಸಭೆ ಸದಸ್ಯರಾದ ಬಿ.ಮಂಜುನಾಥ್, ಗೌಡ್ರ ಮಂಜುನಾಥ್, ಕೆ.ಪಿ.ಗಂಗಾಧರ್, ಭೋವಿಕುಮಾರ್, ಯೂಸೂಫ್, ಕಣ್ಣಾಳ್ ಪರಸಪ್ಪ, ಕಣ್ಣಾಳ್ ಹನುಮಂತಪ್ಪ, ಕೆ.ಎಸ್.ಬೀರಪ್ಪ, ಪಾಳೇಗಾರ್ ನಾಗರಾಜ್, ಭೋವಿ ಮಂಜಣ್ಣ, ಜಿಗಳಿ ಹನುಮಗೌಡ, ಗುತ್ತಿಗೆದಾರ ಬಿ.ಎಂ.ಜಗದೀಶ್ ಸ್ವಾಮಿ, ಪುರಸಭೆ ಇಂಜಿನಿಯರ್ ಮಂಜುನಾಥ್, ಕಂದಾಯಾಧಿಕಾರಿ ಪ್ರಭು ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!