ದಾವಣಗೆರೆಗೆ ಇದೆ ಬೆಣ್ಣೆ ದೋಸೆ `ಹಕ್ಕು’

ದಾವಣಗೆರೆಗೆ ಇದೆ ಬೆಣ್ಣೆ ದೋಸೆ `ಹಕ್ಕು’

ದಾವಣಗೆರೆ, ಜ. 18 – ಪಶ್ಮಿನಾ ಬಟ್ಟೆಗೆ ಕಾಶ್ಮೀರ, ಟೀಗೆ ಡಾರ್ಜಲಿಂಗ್ ಹಾಗೂ ಅಲ್ಫೋನ್ಸೋ ಮಾವಿನ ಹಣ್ಣಿಗೆ ರತ್ನಗಿರಿಯು ಭೌಗೋಳಿಕ ಸೂಚಕ (ಜಿ.ಐ.) ಹಕ್ಕು ಪಡೆದುಕೊಂಡಿದೆ. ಅದೇ ರೀತಿ ದಾವಣಗೆರೆಯೂ ಬೆಣ್ಣೆ ದೋಸೆಗೆ ಜಿ.ಐ. ಪಡೆಯಬೇಕಿದೆ ಎಂದು ಡಬ್ಲ್ಯೂ.ಐ.ಪಿ.ಒ. ಸಲಹೆಗಾರರಾದ ಡಾ. ಸರಸಿಜಾ ಪದ್ಮನಾಭನ್ ಸಲಹೆ ನೀಡಿದ್ದಾರೆ.

ನಗರದ ಬಿ.ಐ.ಇ.ಟಿ. ಕಾಲೇಜಿನಲ್ಲಿ ಬೆಂಗಳೂರಿನ ಎಂ.ಎಸ್.ಎಂ.ಇ. ಸೆಂಟರ್ ಆಫ್ ಎಕ್ಸಲೆನ್ಸ್ – ಐ.ಐ.ಎಸ್.ಸಿ. ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಸಂಶೋಧನಾ ವಿಧಾನ ಹಾಗೂ ಬೌದ್ಧಿಕ ಹಕ್ಕುಸ್ವಾಮ್ಯ ಕುರಿತ ಕಾರ್ಯಗಾರದ ಮೂರನೇ ದಿನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಚೆನ್ನೈನಲ್ಲಿ ತಯಾರಿಸುವ ದೋಸೆಗೆ ದಾವಣಗೆರೆ ಬೆಣ್ಣೆದೋಸೆ ಎಂದು ಕರೆಯ ಲು ಸಾಧ್ಯವಾಗದು. ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ವಿಶೇಷವಾಗಿ ದೊರೆಯುವ ಆಹಾರ ಪದಾರ್ಥಗಳನ್ನು ವಿಶಿಷ್ಟವಾಗಿ ಪರಿಗಣಿಸ ಬೇಕಾಗುತ್ತದೆ. ಇಂತಹ ಉತ್ಪನ್ನಗಳಿಗೆ ಭೌಗೋಳಿಕ ಸೂಚಕಗಳನ್ನು ಪಡೆದರೆ ಬೇರೆಯವರು ನಕಲು ಮಾಡುವುದನ್ನು ತಡೆಯಬಹುದು ಎಂದರು.

ಬೌದ್ಧಿಕ ಹಕ್ಕುಗಳನ್ನು ಹಲವಾರು ಶಾಸನಗಳು ಮತ್ತು ಅಂತರರಾಷ್ಟ್ರೀಯ ಒಪ್ಪಂದ ಮೂಲಕ ರಕ್ಷಿಸಲಾಗಿದೆ. ಈ ಹಕ್ಕುಗಳು ಬೆಳವಣಿಗೆಗೆ ನೆರವಾಗುತ್ತವೆ. ಭಾರತ 2015ರಲ್ಲಿ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 81ನೇ ಸ್ಥಾನದಲ್ಲಿತ್ತು. 2022ರಲ್ಲಿ 40ನೇ ಸ್ಥಾನಕ್ಕೆ ಬಂದಿದೆ. ಭಾರತ ಈಗ ಆವಿಷ್ಕಾರ ವಲಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶವಾಗಿದೆ ಎಂದು ಸರಸಿಜಾ ತಿಳಿಸಿದರು.

ಯಾವುದೇ ಉತ್ಪನ್ನವನ್ನು ಇಲ್ಲವೇ ಉತ್ಪಾದನೆಯ ಪ್ರಕ್ರಿಯೆಯನ್ನು ಆವಿಷ್ಕರಿಸಿ ದಾಗ ಅದಕ್ಕಾಗಿ ಹಕ್ಕುಸ್ವಾಮ್ಯ ಪಡೆಯಬ ಹುದು. ಇಂತಹ ಆವಿಷ್ಕಾರಗಳು ವಿನೂತನ, ವಿಭಿನ್ನ ಹಾಗೂ ವಾಣಿಜ್ಯವಾಗಿ ಉಪಯುಕ್ತ ವಾಗಿರಬೇಕು. ಸಮಾಜಕ್ಕೆ ಹಾನಿ ತರುವ ಇಲ್ಲವೇ ಕ್ಷುಲ್ಲಕ ರೀತಿಯ ಉತ್ಪನ್ನಗಳಿಗೆ ಹಕ್ಕುಸ್ವಾಮ್ಯ ಪಡೆಯಲು ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದರು.

ವ್ಯಾಪಾರಿ ಗುರುತುಗಳು, ವಿನ್ಯಾಸಗಳು, ಭೌಗೋಳಿಕ ಸೂಚಕ, ವಿನೂತನ ಸಸ್ಯ ತಳಿಗಳು, ಸೆಮಿಕಂಡಕ್ಟರ್ ವಿನ್ಯಾಸ ಹೀಗೆ ಹಲವು ರೀತಿಯ ಆವಿಷ್ಕಾರಗಳಿಗೆ ಹಕ್ಕುಸ್ವಾಮ್ಯ ನೀಡಲು ಪ್ರತ್ಯೇಕ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದವರು ವಿವರಿಸಿದರು.

ವೇದಿಕೆಯ ಮೇಲೆ ಕೆ.ಎಸ್.ಸಿ.ಎಸ್.ಟಿ. ಪ್ರಾಜೆಕ್ಟ್ ಇಂಜಿನಿಯರ್ ಎಸ್.ಆರ್. ವಿನೀತ್ ಕುಮಾರ್, ಬಿ.ಐ.ಇ.ಟಿ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ ಸುಜಾತ, ಪರೀಕ್ಷಾ ವಿಭಾಗದ ಡೀನ್ ಕುಮಾರಪ್ಪ ಹಾಗೂ ಸಂಶೋಧನಾ ವಿಭಾಗದ ಡೀನ್ ಡಾ. ಶಂಕರಮೂರ್ತಿ ಉಪಸ್ಥಿತರಿದ್ದರು.

error: Content is protected !!