ಅಂಟಿರದ, ದಂಟು ಕಡಿಮೆಯ ಹಲಸು

ಅಂಟಿರದ, ದಂಟು ಕಡಿಮೆಯ ಹಲಸು

ತರಳಬಾಳು ಕೃಷಿ ವಿಜ್ಞಾನದಲ್ಲಿ ‘ಫಲ’ ನೀಡುತ್ತಿರುವ ಪ್ರಯೋಗ

ದಾವಣಗೆರೆ, ಜ. 18 – ಯಾವುದಾದರೂ ವಿಷಯ ಸಲೀಸಾಗುವಂತಿದ್ದರೆ ಅದನ್ನು ಸುಲಿದ ಬಾಳೆ ಹಣ್ಣಿನಂತೆ ಎಂದು ಹೇಳುತ್ತಾರೆ. ಅದೇ ರೀತಿ ಯಾವುದಾದರೂ ವಿಷಯ ಗೋಜಲಿನದಾಗಿದ್ದರೆ ಅದನ್ನು ಹಲಸು ಸುಲಿಯುವಂದದಿ ಎಂದು ಹೇಳಬಹುದೇನೋ? ಏಕೆಂದರೆ ಹಲಸು ಸುಲಿಯುವಷ್ಟರಲ್ಲಿ ಸುಸ್ತಾಗುವವರೇ ಹೆಚ್ಚು.

ಅಂಟಿಲ್ಲದೇ ಸುಲಿಯಲು ಸುಲಭವಾಗಿರುವ, ದಂಟು ಹೆಚ್ಚಾಗಿರದ, ರುಚಿಕರವಾಗಿರುವ ಹಲಸಿದ್ದರೆ ಎಷ್ಟು ಚಂದ ಅಲ್ಲವೇ? ಇದೇ ವಿಚಾರ ನಗರದ ಐ.ಸಿ.ಎ.ಆರ್. – ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಅವರ ಮನಸ್ಸಿಗೆ ಬಂದು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಲವು ಹಲಸಿನ ತಳಿಗಳ ಪ್ರಯೋಗ ನಡೆಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಹಲವಾರು ಜಾತಿಗಳ ಹಲಸಿನ ಸಸಿಗಳನ್ನು ಬೆಳೆಸುತ್ತಿದ್ದೇವೆ. ಈಗ ಕೆಲವು ಫಲ ನೀಡಲು ಆರಂಭಿಸಿವೆ. ಉತ್ಸಾಹ ತರುವ ರೀತಿಯಲ್ಲಿ ಫಲಿತಾಂಶ ದೊರೆಯುತ್ತಿದೆ ಎಂದವರು ಹೇಳಿದ್ದಾರೆ. 

ಹಲಸು ನಮ್ಮ ಭಾಗಕ್ಕೆ ಉಪಯುಕ್ತ ವಾಗುವ ಬೆಳೆಯಾಗಿದೆ. ಇದನ್ನು ಬೆಳೆಯು ವುದೂ ಸುಲಭ, ಕೀಟ ಬಾಧೆಯೂ ಕಡಿಮೆ, ಇಳುವರಿಯೂ ಹೆಚ್ಚು. ಅಲ್ಲದೇ, ಹಲಸಿನಲ್ಲಿ ಅಪಾರ ಪೌಷ್ಠಿಕಾಂಶಗಳಿವೆ. ನಾನಾ ರೀತಿಯ ಉತ್ಪನ್ನಗಳನ್ನು ಪಡೆಯ ಬಹುದಾಗಿದೆ ಎಂದವರು ವಿವರಿಸಿದ್ದಾರೆ.

ಸಾಮಾನ್ಯ ಹಲಸಿನಲ್ಲಿ ಅಂಟು ಹಾಗೂ ದಂಟು ಎರಡೂ ಹೆಚ್ಚಾಗಿರುತ್ತದೆ. ಅಂಟಿನ ಪ್ರಮಾಣ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದಾದ ರೀತಿಯ ಹಲವಾರು ತಳಿಗಳನ್ನು ನಮ್ಮ ಕೇಂದ್ರದಲ್ಲಿ ಬೆಳೆದಿದ್ದೇವೆ. ಇವುಗಳಲ್ಲಿ ಕೆಲವು ಅಕ್ಟೋಬರ್ – ನವೆಂಬರ್‌ನಲ್ಲೇ ಹೂವು ಬಿಟ್ಟು, ಜನವರಿಯಲ್ಲೇ ರುಚಿಕರ ಹಣ್ಣಾಗಿವೆ ಎಂದು ಹೇಳಿದರು.

ಸಾಮಾನ್ಯವಾಗಿ ಏಪ್ರಿಲ್ ತಿಂಗಳ ನಂತರವೇ ಹಲಸಿನ ಹಣ್ಣು ಲಭ್ಯವಾಗು ತ್ತದೆ. ನಾವು ಕೇಂದ್ರದಲ್ಲಿ ಬೆಳೆದಿರುವ §ಕನಕ¬ ಎಂಬುದು ಜನವರಿಯಲ್ಲೇ ಫಲ ನೀಡುತ್ತಿದೆ. ಇದರಲ್ಲಿ ಅಂಟು – ದಂಟು ಎರಡೂ ಕಡಿಮೆ. ಹಣ್ಣಿನ ಋತುವಿಗೆ ಮುಂಚೆ ಹಾಗೂ ನಂತರದಲ್ಲೂ ಹಣ್ಣು ನೀಡುವ ತಳಿಗಳನ್ನು ಇಲ್ಲಿ ಬೆಳೆಯಲಾಗಿದೆ ಎಂದು ದೇವರಾಜ್ ತಿಳಿಸಿದರು.

ರುದ್ರಾಕ್ಷಿ ಎಂಬ ತಳಿಯು ದುಂಡನೆ ಗಾತ್ರದಲ್ಲಿ ಹಣ್ಣು ನೀಡುತ್ತದೆ. ಇದಲ್ಲದೇ, ಸರ್ವ ಋತು ವಿಜಯ ಹಾಗೂ ಸರ್ವ ಋತು ಸದಾನಂದ, ಅಂಟು ರಹಿತ ಲೈಟ್, ಲಾಲ್‌ಬಾಗ್ ಮಧುರ, ಬೈರಚಂದ್ರ, ಪ್ರಕಾಶ್ ಚಂದ್ರ, ಮಂಕಾಲೆ ರೆಡ್, ತುಬ್‌ಗೆರೆ ರೆಡ್, ವರಶ್ರೀ, ಥೈಲ್ಯಾಂಡ್ ಪಿಂಕ್, ಕಮತ್ತಮ್, ಆರ್.ಎಕ್ಸ್. ಸಿಂಧೂರ, ವಾಡಿ, ವಿ 1, ವಿ.ಎಸ್.ಸಿ., ವಾಟ್‌ಹಾರ್, ಸಿಂಹ ಈಪುರ, ಜಿ11, ಹಾಗೂ ಎನ್.ಬಿ.  ತಳಿಗಳನ್ನು ಇಲ್ಲಿ ಬೆಳೆಯಲಾಗಿದೆ ಎಂದವರು ಹೇಳಿದರು.

ಮಣ್ಣಿನ ಗುಣದ ಕಾರಣದಿಂದಾಗಿ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಯುವ ಹಲಸಿನ ರುಚಿ ಹೆಚ್ಚಾಗಿರುತ್ತದೆ. ತಳಿ ಗುಣದ ಕಾರಣದಿಂದಾಗಿ ಎಲ್ಲೇ ಬೆಳೆದರೂ ರುಚಿ ನೀಡುವ ತಳಿಗಳೂ ಇವೆ. ಈ ಹಿನ್ನೆಲೆಯಲ್ಲಿ ಹಲವಾರು ರೀತಿಯ ತಳಿಗಳನ್ನು ಪರೀಕ್ಷಿಸುತ್ತಿರುವುದಾಗಿ ಅವರು ತಿಳಿಸಿದರು.

error: Content is protected !!