ಸಂಚಾರ ವ್ಯವಸ್ಥೆ ಸುಧಾರಣೆಗೆ ಆಧುನಿಕ ತಂತ್ರಜ್ಞಾನ ಬಳಕೆ

ಸಂಚಾರ ವ್ಯವಸ್ಥೆ ಸುಧಾರಣೆಗೆ ಆಧುನಿಕ ತಂತ್ರಜ್ಞಾನ ಬಳಕೆ

ಸ್ಮಾರ್ಟ್‌ ಸಿಟಿ  ಮತ್ತು ಪೊಲೀಸ್ ಇಲಾಖೆ ಸಹಯೋಗದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಎಸ್ಪಿ ಉಮಾ ಪ್ರಶಾಂತ್ 

ದಾವಣಗೆರೆ, ಜ.16-  ರಸ್ತೆ ಸುರಕ್ಷಾ ಸಪ್ತಾಹದ  ಅಂಗವಾಗಿ   ನಗರದ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಅವರ  ಅಧ್ಯಕ್ಷತೆಯಲ್ಲಿ   ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‌ನಲ್ಲಿ   ಅಡ್ವಾನ್ಸ್ಡ್‌ ಟ್ರಾಫಿಕ್ ಮ್ಯಾನೇಜ್ ಮೆಂಟ್ ಹಾಗೂ ರಸ್ತೆ ಸುರಕ್ಷತೆಯ  ಕಾರ್ಯನಿರ್ವಹಣೆ  ಬಗ್ಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ವೀರೇಶ್ ಕುಮಾರ್ ಹಾಗೂ ಉಪ ವ್ಯವಸ್ಥಾಪಕರಾದ ಶ್ರೀಮತಿ ಮಮತಾ ಸ್ಮಾರ್ಟ್‌ ಸಿಟಿ  ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ  ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ತಿಳಿಸಿದರು.

ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಕೆ, ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ.

ನಗರದ 23 ವೃತ್ತಗಳಲ್ಲಿ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ವಾಹನ ದಟ್ಟಣೆಗೆ ತಕ್ಕಂತೆ ಸಿಗ್ನಲ್‌ಗಳಲ್ಲಿ ಸಮಯ ನಿಗದಿ ಮಾಡಲಾಗಿದೆ. ಇದರ ಪರಿಣಾಮವಾಗಿ ಸಮಯ ಮತ್ತು ಇಂಧನದ ಉಳಿತಾಯವಾಗುತ್ತಿದೆ.  ಹಳೇ ಪಿಬಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಈರುಳ್ಳಿ ಮಾರುಕಟ್ಟೆವರೆಗೆ 7 ಪ್ರಮುಖ ವೃತ್ತಗಳನ್ನು ದಾಟಿ ಹೋಗಲು ಈ ಮೊದಲು 14.46 ನಿಮಿಷ ಬೇಕಿತ್ತು. ಈಗ ಕೇವಲ 8.6 ನಿಮಿಷಗಳಲ್ಲಿ ಆ ಅಂತರವನ್ನು ಕ್ರಮಿಸಬಹುದಾಗಿರುತ್ತದೆ.

ಸಿಟಿ ಸರ್ವೆಲೆನ್ಸ್ ಅಡಿಯಲ್ಲಿ ನಗರದ 111 ಕಡೆಗಳಲ್ಲಿ 215 ಕ್ಯಾಮೆರಾ ಅಳವಡಿಸಲಾಗಿದೆ.ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ ಮೆಂಟ್ ಸಿಸ್ಟಮ್ ಅಡಿಯಲ್ಲಿ 11 ಕಡೆಗಳಲ್ಲಿ 45 ಕ್ಯಾಮೆರಾ ಅಳವಡಿಸಲಾಗಿದೆ. ಈ ವ್ಯವಸ್ಥೆಯಿಂದ ಹಲವು ಪೊಲೀಸ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅನುಕೂಲ ವಾಗಿದೆ. ಮಾರ್ಚ್‌ನಿಂದ ಇಲ್ಲಿಯವರೆಗೆ   140 ಪ್ರಕರಣಗಳ ಪೈಕಿ 123 ಕೇಸ್‌ಗಳು ಬಗೆಹರಿದಿವೆ. 

ಸ್ಮಾರ್ಟ್‌ಸಿಟಿ ಐಸಿಟಿ ಪ್ರಾಜೆಕ್ಟ್‌ನಿಂದ  ನಗರದಲ್ಲಿ ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ  ತುಂಬಾ ಪರಿಣಾಮ ಬೀರಿದೆ. ಒಟ್ಟು 123 ಪ್ರಕರಣಗಳ ಪೈಕಿ 250 ಗ್ರಾಂ ಚಿನ್ನ, 48 ಕೆಜಿ ಬೆಳ್ಳಿ, 72 ಬೈಕ್ ವಶಪಡಿಸಿಕೊಳ್ಳಲಾಗಿದೆ.

1 ಕೊಲೆ ಪ್ರಕರಣ, 22 ಅಪಘಾತ ಪ್ರಕರಣ, ನಕಲಿ ನಂಬರ್ ಪ್ಲೇಟ್‌ನ 7 ಕೇಸ್ ಪತ್ತೆಯಲ್ಲಿ ಸಹಾಯಕವಾಗಿದೆ.

ನಗರ ಮತ್ತು ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ  ಸಾರ್ವಜನಿಕರು ಇಲಾಖೆಗೆ ನೇರವಾಗಿ ದೂರು ಸಲ್ಲಿಸಲು ಮೊಬೈಲ್ ಸಂಖ್ಯೆ: 9480803208 ವ್ಯವಸ್ಥೆ ಮಾಡಲಾಗಿರುತ್ತದೆ.  ಈ ಮೊಬೈಲ್ ನಂಬರ್‌ಗೆ ಸಾರ್ವಜನಿಕರು ಕಣ್ಣಿಗೆ ಬೀಳುವ/ಗಮನಕ್ಕೆ ಬರುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ  ಸದರಿ ನಂಬರ್‌ಗೆ ವಾಟ್ಸಾಪ್ ಮೂಲಕ ತಿಳಿಸಬಹುದಾಗಿರುತ್ತದೆ.

ಇ-ಚಲನ್ ವ್ಯವಸ್ಥೆ ಜಾರಿ : ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ಪಾವತಿಸಲು ಇ-ಚಲನ್ ವ್ಯವಸ್ಥೆ ಜಾರಿಗೆ ತರಲಾಗಿರುತ್ತದೆ.

ಸುರಕ್ಷಾ ಆಪ್ :   ಮಹಿಳಾ ಸುರಕ್ಷತೆಗಾಗಿ  ದಾವಣಗೆರೆ ‘ಸುರಕ್ಷಾ’ ಆಪ್ ಬಿಡುಗಡೆ ಮಾಡಲಾಗಿದೆ. ಈ ಆಪ್ ಮೂಲಕ ಹೆಣ್ಣುಮಕ್ಕಳು ತುರ್ತು ಪರಿಸ್ಥಿತಿಯಲ್ಲಿ ನೆರವು ಪಡೆಯಬಹುದಾಗಿ ರುತ್ತದೆ. ಹಾಗೆಯೇ ಇಂಟೆಲಿಜೆಂಟ್ ಟ್ರಾನ್ಸ್‌ ಪೋರ್ಟ್ ಸಿಸ್ಟಮ್‌ನ್ನು,  ವೇರಿಯೇಬಲ್ ಮೆಸೇಜ್ ಸೈನ್ ಬೋರ್ಡ್‌ಗಳನ್ನು ಅಳವಡಿಸಲಾಗಿರುತ್ತದೆ ಎಂದು  ಅವರು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ,  ಡಿವೈಎಸ್ಪಿ   ಯಶವಂತ್, ಪೊಲೀಸ್ ನಿರೀಕ್ಷಕರಾದ ನಲವಾಗಲು ಮಂಜುನಾಥ, ಮಲ್ಲಮ್ಮ ಚೌಬೆ, ಇಮ್ರಾನ್ ಬೇಗ್ ಹಾಗೂ ಪಿಎಸ್ಐ ಶ್ರೀಮತಿ ಶೈಲಜಾ  ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!