ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ವ್ಯಾಕುಲತೆ
ದಾವಣಗೆರೆ, ಜ. 16- ಕಾಲ ಬದಲಾದಂತೆ ಅಗ್ರಹಾರಗಳು ಬದಲಾದರೂ ಹಟ್ಟಿಗಳು, ಹಾಡಿಗಳು ಬದಲಾಗುತ್ತಿಲ್ಲ. ಸಂಸ್ಕೃತಿ, ದೇವರು, ಧರ್ಮ, ಆಚಾರ, ವಿಚಾರಗಳೇ ಮೇಲು ಎನ್ನುವ ಕಿತ್ತಾಟದಲ್ಲಿಯೇ ನಾವುಗಳು ತೊಡಗಿದ್ದೇವೆ. ನಮ್ಮನ್ನು ಒಂದಾಗದಂತೆ ಮೇಲ್ವರ್ಗಗಳು ನೋಡಿಕೊಳ್ಳುತ್ತಿವೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು.
ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಚಿತ್ರದುರ್ಗದಲ್ಲಿ ಇದೇ ದಿನಾಂಕ 28 ರಂದು ನಡೆಯಲಿರುವ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶೋಷಿತ ವರ್ಗದ ಏಳಿಗೆಗಾಗಿ ರಚಿಸಲಾಗಿರುವ ಸಂವಿಧಾನದ ಫಲವನ್ನು ಅನುಭವಿಸುತ್ತಿರುವವರು ಮೇಲ್ಜಾತಿಯವರೇ ಹೊರತು ಶೋಷಿತ ಸಮುದಾಯಗಳಲ್ಲ ಎಂದರು.
ನಾವುಗಳು ಕೇವಲ ಸವಲತ್ತುಗಳನ್ನು ಪಡೆದು ಫಲವನ್ನು ಅನುಭವಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಇನ್ನಾದರೂ ಈ ಬಗ್ಗೆ ಎಚ್ಚರಗೊಳ್ಳಬೇಕಾದ ಅಗತ್ಯತೆ ಇದ್ದು, ತನ್ಮೂಲಕ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಶೈಕ್ಷಣಿಕವಾಗಿ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದು, ನಿಜವಾದ ಶಿಕ್ಷಣ ನಮಗೆ ದೊರಕುತ್ತಿಲ್ಲ. ಸಂವಿಧಾನ ಬದ್ದವಾಗಿ ಸರಿಯಾದ ಶಿಕ್ಷಣ ಶೋಷಿತರ ಮಕ್ಕಳಿಗೆ ಸಿಕ್ಕಿದ್ದರೆ ಎಸಿ, ಡಿಸಿಗಳು ಆಗಿರುತ್ತಿದ್ದರು ಎಂದರು.
ಪುರಾತನ ಕಾಲದಿಂದಲೂ ವೈದಿಕ ಧರ್ಮವನ್ನೇ ಹಿಂದೂ ಧರ್ಮವೆಂದು ಪ್ರತಿಪಾದಿಸುತ್ತಾ ಬರಲಾಗುತ್ತಿದ್ದು, ಶೋಷಿತರ ಮಧ್ಯೆಯೇ ಒಡಕುಂಟು ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದದ ಸಂಗತಿ ಎಂದರು.
ಪೂರ್ವಭಾವಿ ಸಭೆ ನೇತೃತ್ವ ವಹಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಈ ದೇಶದ ಕೇವಲ ಮೂರು ಪ್ರತಿಶತ ಜನರು ಶೇ. 70 ಕ್ಕಿಂತ ಹೆಚ್ಚು ಇರುವ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಮೇಲೆ ಅಧಿಕಾರ, ಹಕ್ಕು ಚಲಾಯಿಸುವುದು ದುರಂತದ ನೆಲ ನಮ್ಮದು ಎಂದು ಹೇಳಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳಾದ ಹರಿಹರದ ಮಾಜಿ ಶಾಸಕ ಎಸ್. ರಾಮಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಹೊನ್ನಾಳಿಯ ಡಾ. ಈಶ್ವರನಾಯ್ಕ, ಬಿ. ಸಿದ್ಧಪ್ಪ, ಹೆಚ್.ಎ. ಉಮಾಪತಿ, ಜಗಳೂರಿನ ಕೆ.ಪಿ. ಪಾಲಯ್ಯ, ಇಬ್ರಾಹಿಂ ಖಲೀಲ್‌ವುಲ್ಲಾ, ಹೆಗ್ಗೆರೆ ರಂಗಪ್ಪ ಮಾತನಾಡಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ನಿವೃತ್ತ ಎಸ್ಪಿ ಎನ್. ರುದ್ರಮುನಿ, ವಕೀಲ ಎನ್. ಜಯದೇವನಾಯ್ಕ, ಶಿವಯೋಗಿ, ಬಿ.ಹೆಚ್. ಪರಶುರಾಮಪ್ಪ, ಮೀಸೆ ರಾಮಣ್ಣ, ಮಹೇಶ್, ಬಸವರಾಜ್, ಕೃಷ್ಣಾನಾಯಕ್, ಹರಪಹಳ್ಳಿ ಅಂಜಿನಪ್ಪ, ಕೆ. ಚಮನ್ ಸಾಬ್, ಹಾಲೇಶ್ ನಲ್ಕುಂದ, ರಂಜಿತ್, ವಾಸಪ್ಪ, ತಮ್ಮಣ್ಣ, ಬಿ. ಲಿಂಗರಾಜ್, ಅರವಿಂದ್ ಹಾಲೇಕಲ್, ಮನು, ದೀಪಕ್ ಜೋಗಪ್ಪನವರ್, ಅನಿಸ್ ಪಾಷ, ಮಂಜಪ್ಪ, ಶಿವಪ್ಪ, ಶಿವಾನಂದ ಬೇಲಿಮಲ್ಲೂರು, ಕುಂದೂರು ವಿನೋದ್, ಕುಂಕುವ ಅಶೋಕ್, ವಿನಯ್ ಎಂ. ವಗ್ಗರ್, ರಂಗನಾಥ್, ಶ್ರೀನಿವಾಸ್ ಚನ್ನಗಿರಿ, ಫುಟ್ಬಾಲ್ ಗಿರೀಶ್, ಬುಡಕಟ್ಟು ಜನಾಂಗದ ತಿಪ್ಪೇಶ್, ಹಕ್ಕಿಪಿಕ್ಕಿ ಜನಾಂಗದ ಹರೀಶ್, ಪುರಂದರ್ ಲೋಕಿಕೆರೆ, ಬಸವರಾಜ್ ಗುಬ್ಬಿ, ಮತ್ತಿತರರು ಭಾಗವಹಿಸಿದ್ದರು.