ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯಕ್ಕೆ ರಾಜ್ಯಪಾಲರ ಪ್ರಶಂಸೆ

ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯಕ್ಕೆ ರಾಜ್ಯಪಾಲರ ಪ್ರಶಂಸೆ

ದಾವಣಗೆರೆ, ಜ.14- ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾದ್ಯಂತ ಏರ್ಪಡಿಸುತ್ತಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ಸೂಚಿಸಿ, ಅಭಿನಂದನಾ ಪತ್ರ ಕಳುಹಿಸಿದ್ದಾರೆ.

ಜನವರಿ 3ರಂದು ಬೆಂಗಳೂರಿನ ರಾಜಭವನಕ್ಕೆ ಆಹ್ವಾನಿಸಿ, ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ಅವರೊಂದಿಗೆ ಶಿಬಿರಗಳ ಆಯೋಜನೆ ಕುರಿತಾಗಿ ರಾಜ್ಯಪಾಲರು ಚರ್ಚೆ ನಡೆಸಿದ್ದರು. ಈ ವೇಳೆ, ಜಗಳೂರಿನ ಮಾಜಿ ಶಾಸಕ ಟಿ.ಗುರುಸಿದ್ಧನಗೌಡರು ಸಹ ಜೊತೆಗಿದ್ದು, ಪ್ರೀತಿ ಆರೈಕೆ ಟ್ರಸ್ಟ್ ಆಯೋಜಿಸುತ್ತಿರುವ ಆರೋಗ್ಯ ಸೇವೆಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು.

ರಾಜ್ಯಪಾಲರಿಂದ ಪ್ರಶಂಸನಾ ಪತ್ರ ಬಂದಿರುವ ಬಗ್ಗೆ ಡಾ. ರವಿಕುಮಾರ್ ಅವರು ಪ್ರತಿಕ್ರಿಯಿಸಿ, ಮೂರು ವರ್ಷಗಳ ಹಿಂದೆ ಇದೇ ದಿನ ಶ್ರೀಮತಿ ಪ್ರೀತಿ ಅವರು ನಮ್ಮನ್ನು ಅಕಾಲಿಕವಾಗಿ ಅಗಲಿದರು. ಆ ದುಃಖವನ್ನು ಭರಸಿಕೊಂಡು, ಪ್ರೀತಿ ಅವರ ಸಾಮಾಜಿಕ ಸೇವಾ ಕಾರ್ಯದ ತುಡಿತವನ್ನು ಈಡೇರಿಸಲು ಪ್ರೀತಿ ಆರೈಕೆ ಟ್ರಸ್ಟ್ ಆರಂಭಿಸಿದೆವು.

ಈವರೆಗೂ ಜಿಲ್ಲಾದ್ಯಂತ 48 ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಸರಿಸುಮಾರು 23 ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ದಾಸೋಹ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

error: Content is protected !!