ಜಗಳೂರು : ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ-ಶಾಸಕ ಬಿ. ದೇವೇಂದ್ರಪ್ಪ ಪ್ರತಿಪಾದನೆ

ಜಗಳೂರು : ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ-ಶಾಸಕ ಬಿ. ದೇವೇಂದ್ರಪ್ಪ ಪ್ರತಿಪಾದನೆ

ಜಗಳೂರು, ಜ.14- ಶಿಕ್ಷಣದಿಂದ ಮಾತ್ರ  ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ನಾಲಂದ ಕಾಲೇಜು ಆವರಣದಲ್ಲಿ ಅಮರಭಾರತಿ ವಿದ್ಯಾಕೇಂದ್ರದಿಂದ ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ ಹಾಗೂ `ವಿದ್ಯಾರತ್ನ’ ಡಾ.ತಿಪ್ಪೇಸ್ವಾಮಿ ಅವರ ಪುಣ್ಯಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನನ್ನ ಕುಟುಂಬಕ್ಕೆ ಅನ್ನ, ಅಕ್ಷರ, ಧರ್ಮ ಕಲಿಸಿದ ತ್ರಿವಿಧ ದಾಸೋಹ ಕೇಂದ್ರವಾಗಿರುವ  ಅಮರಭಾರತಿ ವಿದ್ಯಾಕೇಂದ್ರವನ್ನು ನಾನು ಯಾವ ಜನ್ಮದಲ್ಲಿಯೂ ಮರೆಯುವುದಿಲ್ಲ ಎಂದು ದೇವೇಂದ್ರಪ್ಪ ಭಾವುಕರಾಗಿ  ನುಡಿದರು. 

ಕುಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ನನಗೆ 33 ವರ್ಷಗಳ ಕಾಲ ಡಿ.ದರ್ಜೆ ನೌಕರನ ಸೇವೆಗೆ ಅವಕಾಶ ನೀಡಿದ್ದು, ನನ್ನ ವೈಯಕ್ತಿಕ ಬದುಕು ಕಟ್ಟಿಕೊಡುವುದಲ್ಲದೆ, ಮೂರು ತಲೆಮಾರಿಗೆ ಶಿಕ್ಷಣ ಕಾಶಿಯಾಗಿದೆ. ಇಂದು ಶಾಸಕನಾಗಿರುವೆ, ನನ್ನ ಪುತ್ರ ಉನ್ನತ ಹುದ್ದೆಗೇರಲು ವಿದ್ಯಾರತ್ನ ಟಿ.ತಿಪ್ಪೇಸ್ವಾಮಿ ಅವರೇ ಕಾರಣ ಎಂದರು. ನಾನು ಶಾಸಕನಾಗಿ ಆಯ್ಕೆಯಾದ ನಂತರ ನಾನು ಸೇವೆಗೈದ ಶಾಲೆಯಲ್ಲಿ ವೇತನ ರಹಿತ ಒಂದು ದಿನದ ನೌಕರಿ ಮಾಡಲು ಸಂಸ್ಥೆ ಅವಕಾಶ ಕಲ್ಪಿಸಿದ್ದರ ಫಲವಾಗಿ ರಾಜ್ಯವೇ ಹಿಂತಿರುಗಿ ನೋಡುವಂತೆ ಮಾಡಿತು ಎಂದರು.

ಶಾಲಾ‌ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್ ಮಾತನಾಡಿ, ಟಿ.ತಿಪ್ಪೇಸ್ವಾಮಿ ಅವರ ಬರದ ನಾಡಿನಲ್ಲಿ ಶಿಕ್ಷಣದ ದೂರದೃಷ್ಟಿಕೋನದಿಂದ ಸ್ಥಾಪಿಸಿದ ವಿದ್ಯಾಸಂಸ್ಥೆ, ತಾಲ್ಲೂಕಿನಲ್ಲಿ  ಅತ್ಯಂತ ಉತ್ತಮ‌ ನಾಗರಿಕನಾಗಿ ಸಮಾಜದಲ್ಲಿ  ಹೊರಹೊಮ್ಮಿರುವುದಕ್ಕೆ ಸಾಕ್ಷಿಯಾಗಿದೆ. ಪೋಷಕರು ಉತ್ತಮ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿ, ಮೈಮರೆಯಬಾರದು. ಮಕ್ಕಳ ಕಲಿಕಾ ಪ್ರಗತಿಯನ್ನು  ಪ್ರತಿನಿತ್ಯ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ಎಂ.ಎಂ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಎಚ್.ವಿ.ವಾಮದೇವಪ್ಪ ಮಾತನಾಡಿ, ಇಚ್ಛಾಶಕ್ತಿ ಹಾಗೂ ನಿರಂತರ ಪ್ರಯತ್ನದಿಂದ ಗುರಿ ಸಾಧನೆಗೆ ಮಕ್ಕಳನ್ನು ಪ್ರೆರೇಪಿಸಬೇಕಿದೆ. ವಿದ್ಯಾರ್ಥಿಗಳು ಕೇವಲ ಕಂಠಪಾಠಕ್ಕೆ ಸೀಮಿತವಾಗದೆ, ಪಠ್ಯಪುಸ್ತಕದ ವಿಷಯವನ್ನು   ಅರ್ಥೈಸಿಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ತಮ್ಮಲ್ಲಿ  ಆಲೋಚನಾ ಶಕ್ತಿ ಹೆಚ್ಚುತ್ತದೆ ಎಂದರು.

ವೈಜ್ಞಾನಿಕತೆಯನ್ನು‌ ಬೆಳೆಸಿಕೊಳ್ಳಬೇಕಿದೆ. ಮಕ್ಕಳು ಕೇವಲ ಭತ್ತ ತುಂಬುವ ಚೀಲಗಳಾಗದೆ, ಭತ್ತ ಬೆಳೆಯುವ ಗದ್ದೆಗಳಾಗಬೇಕು  ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಿಂದ `ಜನತಾವಾಣಿ’ ಉಪಸಂಪಾದಕ ಬಿ.ಪಿ.ಸುಭಾನ್, ಸಮಾಜ ಸೇವಾ ಕ್ಷೇತ್ರದಿಂದ ಜಿ.ಹೆಚ್. ಶಂಭುಲಿಂಗಪ್ಪ, ಕೃಷಿ ಕ್ಷೇತ್ರದಿಂದ ಬಿ.ಆರ್. ರಂಗಪ್ಪ  ಅವರಿಗೆ ಹಾಗೂ ನಿವೃತ್ತ  ಉಪನ್ಯಾಸಕರಾದ ಜಿ.ಬಿ.ಶಿವಕುಮಾರ್, ಜೆ.ಟಿ.ಶಂಷುದ್ದೀನ್, ಆರ್.ಅಮಾನುಲ್ಲಾ  ಅವರಿಗೆ ಮತ್ತು ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ರಾಜೇಶ್ವರಿ, ಇ.ಓ, ಪ್ರಿಯಾಂಕ.ಬಿ.ಎಸ್, ಎ.ವಿ.ಶಾಂತೇಶ್, ನಯನ ಪಿ.ಆರ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಮರಭಾರತಿ ವಿದ್ಯಾಕೇಂದ್ರದ ಅಧ್ಯಕ್ಷೆ ಟಿ.ಅನ್ನಪೂರ್ಣಮ್ಮ ಕಾರ್ಯಕ್ರಮ ಉದ್ಘಾಟಿಸಿದರು,  ಗೌರವ ಕಾರ್ಯದರ್ಶಿ ಟಿ.ಮಧು, ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಶ್ವೇತಾಮಧು, ಪ್ರಾಂಶುಪಾಲರಾದ ಸಿ.ತಿಪ್ಪೇಸ್ವಾಮಿ, ಮಹೇಶ್, ಎಸ್.ಆರ್.ಕಲ್ಲೇಶಿ, ಉಪನ್ಯಾಸಕ ಬಿ.ಎನ್.ಎಂ.ಸ್ವಾಮಿ, ಮುಖ್ಯಶಿಕ್ಷಕ ಬಾಲರಾಜ್, ಕೋಚಿಂಗ್ ಸೆಂಟರ್ ವ್ಯವಸ್ಥಾಪಕ ರಾಜೇಶ್ ಜೈನ್, ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಸೇರಿದಂತೆ, ಪೋಷಕರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳು ಉಪಸ್ಥಿತರಿದ್ದರು.

error: Content is protected !!