ಕಳ್ಳತನ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ, ಜೀವ ಭಯ ಇದೆ : ಸಂಸದ ಸಿದ್ದೇಶ್ವರ

ಕಳ್ಳತನ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ, ಜೀವ ಭಯ ಇದೆ : ಸಂಸದ ಸಿದ್ದೇಶ್ವರ

ಸಂಸದರಿಗೆ ಟಿಕೆಟ್ ಖಚಿತ

ಈ ಬಾರಿ ಲೋಕಸಭಾ ಚುನಾವಣಾ ಟಿಕೆಟ್ ತಮಗೇ ನೀಡುವುದು ಖಚಿತವಾದ ನಂತರ ತೇಜೋವಧೆಯ ಸಂಚು ನಡೆಸಲಾಗು ತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಾವಣಗೆರೆ, ಜ. 14 – ಬೆಂಗಳೂರಿನ ಉಪ್ಪಾರಪೇಟೆಯಲ್ಲಿ ದಾಖ ಲಾದ ಕಳ್ಳತನ ಪ್ರಕರಣದಲ್ಲಿ ನನ್ನ ಹೆಸರನ್ನು ಸಿಲುಕಿಸಲಾಗುತ್ತಿದ್ದು, ಇಂಥವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಮೇಶ್ ಹಾಗೂ ಮಲ್ಲಿಕಾರ್ಜುನ್ ಎಂಬುವವರಿಗೆ ಸೇರಿದ ಸುಮಾರು 1 ಕೋಟಿ ರೂ.ಗಳ ಕಳ್ಳತನವಾಗಿತ್ತು. ಈ ಸಂಬಂಧ ಬೆಂಗಳೂರಿನ ಉಪ್ಪಾರ ಪೇಟೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದರು. ಈ ಬಗ್ಗೆ ಪೊಲೀಸರು ಚಿತ್ರದುರ್ಗ ಜಿಲ್ಲೆಯ ಟ್ಯಾಕ್ಸಿ ಮಾಲೀಕ ಸ್ವಾಮಿ ಹಾಗೂ ಸ್ನೇಹಿತೆ ಅನುಪಮ ಎಂಬುವವರನ್ನು ಬಂಧಿಸಲಾಗಿತ್ತು. ಅವರಿಂದ 93 – 94 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಸಂಸದರು ಹೇಳಿದರು.

ಮೂರು ತಿಂಗಳ ಹಿಂದೆ ಈ ಪ್ರಕರಣ ನಡೆದಿತ್ತು. ಆದರೆ, ಮೂರ್ನಾಲ್ಕು ದಿನಗಳ ಹಿಂದೆ ಸ್ವಾಮಿ ಹೇಳಿಕೆಯೊಂದನ್ನು ನೀಡಿ ನನ್ನ ವಿರುದ್ಧ ಹವಾಲಾ ಆರೋಪ ಮಾಡಿದ್ದು ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ. ಈ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕೆಲವರು ನನ್ನ ವಿರುದ್ಧ ಪ್ರತಿಭಟನೆ ಮಾಡಲು ಹೊರಟಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ಕಂಡುಬಂದಿದೆ ಎಂದು ಸಿದ್ದೇಶ್ವರ ಹೇಳಿದರು. ಆದರೆ, ಈ ಪ್ರಕರಣಕ್ಕೆ ನನಗಾಗಲೀ, ತಮ್ಮ ಕುಟುಂಬಗಳಿಗಾಗಲೀ ಅಥವಾ ತಮ್ಮ ಸಂಸ್ಥೆಗಳಿಗಾಗಲೀ ಯಾವುದೇ ಸಂಬಂಧ ಇಲ್ಲ. ತಮ್ಮ ವಹಿವಾಟುಗಳು ಕಾನೂನುಬದ್ಧವಾಗಿವೆ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೇಜೋವಧೆಗಾಗಿ, ನನ್ನ ಹಾಗೂ ಬಿಜೆಪಿ ಸೋಲಿಸಲು ಇಂತಹ ಆರೋಪ ಹಾಗೂ ಪ್ರತಿಭಟನೆಗೆ ಹುನ್ನಾರ ಮಾಡಲಾಗುತ್ತಿದೆ. ಇಂತಹ ತೇಜೋವಧೆ ಮಾಡುವವರ ವಿರುದ್ಧ 50 ಕೋಟಿ ರೂ.ಗಳ ಮಾನನಷ್ಟ ಪ್ರಕರಣ ದಾಖಲಿಸಲಾಗುವುದು ಎಂದು ಸಿದ್ದೇಶ್ವರ ಎಚ್ಚರಿಸಿದರು.

ಈ ಪ್ರಕರಣದ ನಂತರ ತಮ್ಮ ವಿರುದ್ಧ ಸಂಚು ನಡೆಸುತ್ತಿರುವ ಅನುಮಾನವಾಗಿದೆ. ಆಹಾರದಲ್ಲಿ ವಿಷ ಕೊಟ್ಟು ಹತ್ಯೆ ಸಂಚು ಮಾಡಬಹುದು ಎಂಬ ಭಯ ಉಂಟಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡುತ್ತೇನೆ. ಪಕ್ಷದ ವರಿಷ್ಠರ ಜೊತೆ ಮಾತನಾಡಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಟ್ಯಾಕ್ಸಿ ಚಾಲಕನ ಹೇಳಿಕೆಯನ್ನು ನೆಪ ಮಾಡಿಕೊಂಡು ಕೆಲವರು ಸಂಸದರ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವುದು ಕ್ಷುಲ್ಲಕ ವರ್ತನೆ. ಕೆಲವರು ಟ್ಯಾಕ್ಸಿ ಚಾಲಕನನ್ನು ಮುಂದಿಟ್ಟುಕೊಂಡು ಪಿತೂರಿ ಮಾಡಿರುವ ಅನುಮಾನವಿದೆ ಎಂದರು.

ಈ ವಿಷಯ ಮುಂದಿಟ್ಟುಕೊಂಡು ಜನರ ನಂಬಿಸಲು ಹುಚ್ಚು ಪ್ರಯತ್ನ ನಡೆಸಲಾಗುತ್ತಿದೆ. ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ, ನಿರಾಧಾರವಾಗಿ ತೇಜೋವಧೆಗಾಗಿ ಪ್ರತಿಭಟನೆ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಪಿ. ಹರೀಶ್, ಪರಿಷತ್ ಸದಸ್ಯ ರವಿಕುಮಾರ್, ಮುಖಂಡರಾದ ಯಶವಂತರಾವ್ ಜಾಧವ್, ಬಿ.ಎಸ್. ಜಗದೀಶ್, ಶ್ರೀನಿವಾಸ ದಾಸಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!