ದುರ್ಬಲರ ಸೇವೆಯೇ ಭಗವಂತನ ಸೇವೆ

ದುರ್ಬಲರ ಸೇವೆಯೇ ಭಗವಂತನ ಸೇವೆ

ಕರುಣಾ ಟ್ರಸ್ಟ್‌ ಕಾರ್ಯಕ್ರಮದಲ್ಲಿ ಯರಗುಂಟೆಯ ಶ್ರೀ ಪರಮೇಶ್ವರ ಸಾಮೀಜಿ  

ದಾವಣಗೆರೆ, ಜ.10- ಬಡವರ, ಶಕ್ತಿಹೀನರ, ದುರ್ಬಲರ, ರೋಗಿಗಳ ಮತ್ತು ಸಂಕಷ್ಟಗಳಿಗೆ ಒಳಗಾಗಿರುವವರ ಸೇವೆ ಮಾಡಿದರೆ, ಭಗವಂತನ ಸೇವೆ ಮಾಡಿದಂತೆಯೇ ಆಗುತ್ತದೆ ಎಂದು ಯರಗುಂಟೆ ಗ್ರಾಮದ ಶ್ರೀ ಪರಮೇಶ್ವರ ಸಾಮೀಜಿ ಅಭಿಪ್ರಾಯಪಟ್ಟರು.

ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ವತಿಯಿಂದ ಟ್ರಸ್ಟ್ ಕಚೇರಿಯಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ 85ನೇ ಸೈಕಲ್ ಮತ್ತು 3 ತಿಂಡಿ ಗಾಡಿಗಳ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು  ಮಾತನಾಡಿದರು.

ಈ ಕಾರ್ಯಕ್ರಮದಂತೆ ಯೋಗ್ಯ ಸತ್ಕಾರ್ಯ ಗಳು ಕರುಣಾ ಟ್ರಸ್ಟಿನಿಂದ ನಡೆಯುತ್ತಿವೆ, ಇದು ಸಂತಸದ ವಿಷಯ. ಎಡಗೈಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು ಎನ್ನುವಂತೆ, ದಾನಿಗಳು ಸಹೃದಯದಿಂದ ದಾನವಿತ್ತು ಸಹಕರಿಸುತ್ತಿದ್ದಾರೆ. ಅವರ ಹಣ ವ್ಯರ್ಥವಾಗದಂತೆ ಸತ್ಕಾರ್ಯಕ್ಕೆ ಕರುಣಾ ಟ್ರಸ್ಟ್ ಉಪಯೋಗಿಸುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಬಡವರು ಪಡೆದುಕೊಳ್ಳಬೇಕು ಮತ್ತು ದಾನಿಗಳು ಹೆಚ್ಚಿನ ಮಟ್ಟದಲ್ಲಿ ಧನ ಸಹಾಯವಿತ್ತು ಸಹಕರಿಸಬೇಕು ಎಂದು ಶ್ರೀಗಳು ಕರೆ ನೀಡಿದರು.

ಕರುಣಾ ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕರುಣಾ ಟ್ರಸ್ಟ್ ಇದ್ದವರು ಮತ್ತು ಇಲ್ಲದವರ ನಡುವೆ ಸೇತುವೆಯಾಗಿ ಕಾರ್ಯವೆಸಗುತ್ತಿದೆ. ಇಂದು 85ನೇ  ಸೈಕಲ್ ಮತ್ತು 3 ತಿಂಡಿ ಗಾಡಿಗಳನ್ನು ಬಡವರಿಗೆ ನೀಡುವುದರ ಮೂಲಕ ಸ್ವಯಂ ಉದ್ಯೋಗಕ್ಕಾಗಿ ಪ್ರೇರೇಪಿಸುತ್ತಿದ್ದೇವೆ. ಇದಕ್ಕೆ ದಾನಿಗಳು ಮತ್ತು ಫಲಾನುಭವಿಗಳ ಬೆಂಬಲಬೇಕು ಎಂದು ತಿಳಿಸಿದರು.  

ಟ್ರಸ್ಟಿನ ಮತ್ತೋರ್ವ ನಿರ್ದೇಶಕ ಪ್ರೊ. ಎಂ. ಬಸವರಾಜ್ ಮಾತನಾಡಿ, ಕಷ್ಟ ಶಾಶ್ವತವಲ್ಲ. ಇಂದು ಕಷ್ಟವಿರಬಹುದು ನಾಳೆ ನೀವೇ ಬೇರೆಯ ವರಿಗೆ ಸಹಾಯ ಮಾಡುವಂತಾಗಬಹುದು. ತಮಗಿಂತ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದರು.

ಟ್ರಸ್ಟಿನ ದಾನಿಗಳಾದ  ಸಿ.ಎನ್. ಜಯಪ್ರಕಾಶ್,   ಎ.ಕಿರಣ್ ಕುಮಾರ್,    ಡಾ. ಹೆಚ್.ಜಿ. ಶ್ರೀಕಂಠಪ್ಪ  ಟ್ರಸ್ಟ್ ಅರ್ಹರಿಗೆ ಸೈಕಲ್ ಮತ್ತು  ತಿಂಡಿ ಗಾಡಿ ನೀಡಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಕರುಣಾ ಟ್ರಸ್ಟಿನ ನಿರ್ದೇಶಕರಾದ ಶ್ರೀಮತಿ ಮಂಜುಳಾ ಬಸವಲಿಂಗಪ್ಪ ಸ್ವಾಗತಿಸಿದರು. ಮಧುಸೂದನ್ ವಂದಿಸಿದರು.  ಬಸವರಾಜ್ ಒಡೆಯರ,  ಜಯ್ಯಣ್ಣ,  ಭೈರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!