ಭದ್ರಾ ಸಲಹಾ ಸಮಿತಿ ನಿರ್ಣಯ ರದ್ದುಗೊಳಿಸಲು ಆಗ್ರಹ

ಜಿಲ್ಲಾ ರೈತ ಒಕ್ಕೂಟದಿಂದ ಪ್ರತಿಭಟನೆ, ರಸ್ತೆ ತಡೆ, ಸರ್ಕಾರಕ್ಕೆ ಮನವಿ

ದಾವಣಗೆರೆ, ಜ.10- ಭದ್ರಾ ನದಿ ನೀರು ನಮ್ಮ ಹಕ್ಕು. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ ರದ್ದುಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ರೈತ ಒಕ್ಕೂಟದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಪಿ. ಬಿ. ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಹೊರಟ ರೈತ ಮುಖಂಡರು, ಉಪ ವಿಭಾಗಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ,  ಪಿ.ಬಿ. ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹರಿಹರ ಶಾಸಕ ಬಿ.ಪಿ. ಹರೀಶ್, ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಮಧು ಬಂಗಾರಪ್ಪ ಅಕ್ರಮ ಪಂಪ್‌ಸೆಟ್ ದಾರರ ಏಜೆಂಟರಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅವರಿಗೆ ಅಚ್ಚುಕಟ್ಟು ಪ್ರದೇಶದ ಅರಿವಿಲ್ಲ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿವಮೊಗ್ಗ, ಭದ್ರಾವತಿ ಭಾಗದ ಜನರ ಮತ ಗಳಿಕೆಗಾಗಿ ಈ ರೀತಿಯ ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಸಲಹಾ ಸಮಿತಿಯ ನೇತೃತ್ವ ವಹಿಸಿಕೊಳ್ಳಬೇಕು. ಈ ಭಾಗದ ರೈತರ ಹಿತ ಕಾಪಾಡಲು ಮುಂದಾಗಬೇಕು. ರೈತರ ವಿಚಾರದಲ್ಲಿ ನಾವು ಎಂದಿಗೂ ಜೊತೆಯಲ್ಲಿರುತ್ತೇವೆ ಎಂದು ಹೇಳಿದರು.

ರೈತ ಮುಖಂಡ ಹೆಚ್.ಆರ್. ಲಿಂಗರಾಜ್ ಶಾಮನೂರು ಮಾತನಾಡಿ, ಈ ಭಾಗದ ರೈತರಿಗೆ ಮಾರಕವಾಗಿರುವ ಸಲಹಾ ಸಮಿತಿಯ ನಿರ್ಣಯವನ್ನು ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

ಲೋಕಿಕೆರೆ ನಾಗರಾಜ್ ಮಾತನಾಡಿ, ನೀರಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ತಿಂಗಳಲ್ಲಿ 12 ದಿನ ನೀರು ಹರಿಸಿದರೆ ಯಾವ ಬೆಳೆಯನ್ನೂ ಬೆಳೆಯಲಾಗದು. ಶೀಘ್ರವೇ 20 ದಿನದಂತೆ 60 ದಿನ ನೀರು ಹರಿಸಬೇಕು ಎಂದರು. ಬಿ.ಎಂ. ಸತೀಶ್ ಕೊಳೇನಹಳ್ಳಿ, ಕೆ.ಬಿ. ಕೊಟ್ರೇಶ್, ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೆಬಾಳ್, ಶಾಮನೂರು ಎಲ್.ಎನ್. ಕಲ್ಲೇಶ್, ಶ್ರೀನಿವಾಸ ದಾಸಕರಿಯಪ್ಪ,  ಕಾಶೀಪುರದ ಶಂಭಣ್ಣ, ಕೆ.ಜಿ. ಸ್ವಾಮಿಲಿಂಗಪ್ಪ, ಬಲ್ಲೂರು ಬಸವರಾಜ್, ಶಾಗಲೆ ದೇವೇಂದ್ರಪ್ಪ , ಲೋಕಿಕೆರೆ ನಾಗರಾಜ್, ಬೇತೂರು ಸಂಗಪ್ಪ, ಆರನೇ ಕಲ್ಲು ವಿಜಯಕುಮಾರ್, ಹೆಚ್.ಎನ್. ಗುರುನಾಥ್, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಆವರಗೊಳ್ಳ ಷಣ್ಮುಖಯ್ಯ, ಕೃಷ್ಣಮೂರ್ತಿ ಪವಾರ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಪ್ರದೀಪ್, ಶ್ಯಾಗಲೆ ಜಗದೀಶಗೌಡ್ರು, ಗೋಪನಾಳ್ ಮಲ್ಲಿಕಾರ್ಜುನಯ್ಯ, ಕಲ್ಪನಹಳ್ಳಿ ಸತೀಶ್, ಬಾತಿ ವೀರೇಶ್ ದೊಗ್ಗಳ್ಳಿ, ಅಣಬೇರು ಶಿವಪ್ರಕಾಶ್, ಮಳಲ್ಕೆರೆ ಕಲ್ಲಪ್ಪಗುಡ್ಡದ, ಸದಾನಂದ, ನಾಗರಸನಹಳ್ಳಿ ರುದ್ರೇಶ, ಕೈದಾಳೆ ಗುರುಪ್ರಸಾದ್, ಗೋಣಿವಾಡ ನಾಗರಾಜಪ್ಪ, ಹೊಸಹಳ್ಳಿ ಶಿವಮೂರ್ತಿ ಇತರರು ಪ್ರತಿಭಟನೆಯಲ್ಲಿದ್ದರು.

error: Content is protected !!