ತಪ್ಪು ಮಾಡುತ್ತಲೇ ಇರುವ ದ್ವಿಚಕ್ರ ವಾಹನ ಚಾಲಕರು !

ಮಾನ್ಯರೇ,

ದಾವಣಗೆರೆ ಸ್ಮಾರ್ಟ್ ಸಿಟಿ ಆಗುತ್ತಿದ್ದರೂ, ನಾವು ಇನ್ನೂ ಸ್ಮಾರ್ಟ್ ಆಗಬೇಕಿದೆ. ಜನಸಾಮಾನ್ಯರು ಸಂಚಾರಿ ನಿಯಮಗಳನ್ನು ಪಾಲಿಸುವುದರಲ್ಲಿ ಯಾಕೋ ಏನೋ ಇನ್ನೂ ತಾತ್ಸಾರದ ಭಾವನೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನಗಳ ಚಾಲನೆ, ತ್ರಿಬಲ್ ರೈಡಿಂಗ್, ಸರ್ಕಲ್ ಬಳಿ ಇರುವ ಸಿಗ್ನಲ್ ಗಮನಿಸದೇ ಹೋಗುವುದು, ಹೆಚ್ಚಿನ ವೇಗವಾಗಿ ವಾಹನ ಚಾಲನೆ, ಕರ್ಕಶ ಉಳ್ಳ ಹಾರ್ನ್ ಬಳಕೆ, ಒಮ್ಮುಖ ರಸ್ತೆಯಲ್ಲಿ ವಾಹನ ಚಾಲನೆ ದಂಡಾರ್ಹ ಎಂದು ತಿಳಿದಿದ್ದರೂ… ತಪ್ಪು ಮಾಡುತ್ತಲೇ ಇದ್ದಾರೆ.

ಆಗಾಗ್ಗೆ, ಪೊಲೀಸ್ ಇಲಾಖೆಯವರು ವಾಹನ ಸವಾರರು ಯಾರಾರು… ಎಷ್ಟು ಬಾರಿ ತಪ್ಪು ಮಾಡಿದ್ದಾರೆ…ಎಷ್ಟು ದಂಡ ವಸೂಲಿ ಮಾಡಿದ್ದಾರೆ ಎಂಬುದನ್ನು ಆಗೊಮ್ಮೆ, ಈಗೊಮ್ಮೆ  (ಮೂರು ತಿಂಗಳು… ಆರು ತಿಂಗಳಿಗೊಮ್ಮೆ) ಪತ್ರಿಕೆಗಳಲ್ಲಿ ಓದಿದ್ದೇನೆ. ಹೀಗಿದ್ದರೂ, ವಾಹನ ಸವಾರರು ತಪ್ಪು ತಿದ್ದಿಕೊಳ್ಳುತ್ತಿಲ್ಲ.

ನನ್ನದೊಂದು ಸಲಹೆ. ಈಗ ಎಲ್ಲೆಡೆ ಸಿ.ಸಿ.ಕ್ಯಾಮರಾಗಳು ಇದ್ದಮೇಲೆ ತಪ್ಪು ಮಾಡುವವರನ್ನು ದಂಡಿಸುವುದು ಕಷ್ಟವೇನಲ್ಲ. ವಾಹನ ಚಾಲನೆ ನಿಯಮಗಳನ್ನು ಪಾಲಿಸದೇ ಇರುವ ಸವಾರರಿಗೆ ದಂಡಕಟ್ಟಲು ನೋಟಿಸ್ ನೀಡಿದರೆ ಸಾಲದು, ಪ್ರತಿವಾರವೂ ದಾವಣಗೆರೆಯ ಯಾವ ಯಾವ ಸರ್ಕಲ್ ಗಳಲ್ಲಿ ಎಷ್ಟು ಜನರು ಎಷ್ಟೋ ಸಲ  ತಪ್ಪು ಮಾಡಿದ್ದಾರೆ… ಎಷ್ಟು ಮಂದಿಗೆ ನೋಟಿಸ್ ನೀಡಿದ್ದಾರೆ… ದಂಡ ಎಷ್ಟು ವಸೂಲಿ ಮಾಡಲಾಗಿದೆ ಎಂಬುದನ್ನು ಕಡ್ಡಾಯವಾಗಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಬೇಕು. ಆಗಾದರೂ ಯಾವ ಯಾವ ಸರ್ಕಲ್ ನಲ್ಲಿ ಸಿ.ಸಿ ಕ್ಯಾಮರಾ ಮೂಲಕ ಕಣ್ಗಾವಲು ಆಗ್ತಿದೆ… ತಪ್ಪು ಮಾಡಿದರೆ ಖಂಡಿತಾ ದಂಡ ತೆರಬೇಕಾಗುತ್ತದೆಂಬ ಭಯ ಬರಬಹುದು.

– ರಘುನಾಥರಾವ್ ತಾಪ್ಸೆ, ದಾವಣಗೆರೆ. 

error: Content is protected !!