ಹರಪನಹಳ್ಳಿ, ಜ. 9- ವಿಜ್ಞಾನ ಎಂದರೆ ಸಂಶೋಧನೆಗಳಿಂದ ಕೂಡಿದ ಜ್ಞಾನವಾಗಿದೆ ಎಂದು ಮಿಚಗನ್ ವಿಶ್ವ ವಿದ್ಯಾಲಯದ ಸಂಶೋಧಕ ಡಾ.ಹರ್ಷಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನದ ಮಹತ್ವ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಎಂದರೆ ಸಂಶೋಧನೆ ಮಾಡುವ ವಿಧಾನವೂ ಒಂದು, ಸಂಗ್ರಹಿಸಿದ ಸಂಶೋಧನೆಯ ಸಾರಾಂಶವನ್ನು ವ್ಯಾಖ್ಯಾನಿಸುವುದೂ ಒಂದು. ವಿಜ್ಞಾನ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ್ದರೂ, ವಿಜ್ಞಾನಿಗಳು ವಿವಿಧ ವಿಷಯಗಳಲ್ಲಿ ಸಂಶೋಧನೆ ಮಾಡಿ ಹೊಸ ತಿಳುವಳಿಕೆಯನ್ನು ಹೊಂದುವುದರ ಮೂಲಕ ಸಮಾಜಕ್ಕೆ ಉಪಯೋಗವನ್ನು ಒದಗಿಸು ವುದೂ ಆಗಿದೆ. ಈ ವಿಜ್ಞಾನ ಸಂಶೋಧನೆಗಳು ಉದ್ಭವಿಸುವ ವಿಷಯಗಳು ವೈಜ್ಞಾನಿಕ ವಿಧಾನ ಗಳನ್ನು ಬಳಸಿ ಆಯ್ಕೆ ಮಾಡಲಾಗುತ್ತವೆ ಎಂದರು.
ತಾಂತ್ರಿಕತೆಯ ಮೂಲ ಬೇರು ವಿಜ್ಞಾನ ವಾಗಿದೆ. ಒಂದು ದೇಶದ ಪ್ರಗತಿ ವಿಜ್ಞಾನ ದ ಬೆಳವಣಿಗೆ ಆರ್ಥಿಕತೆಯ ತಳಹದಿಯ ಮೇಲೆ ನಿಂತಿದೆ. ತಾಂತ್ರಿಕತೆಯ ಬಗ್ಗೆ ಯುವ ಜನಾಂಗ ಆಸಕ್ತಿ ತೋರಿಸುತ್ತಿಲ್ಲ. ಪ್ರಸ್ತುತ ಭಾರತದಲ್ಲಿ ಅನೇಕ ಯೋಜನೆಗಳು ಮೂಲ ವಿಜ್ಞಾನದ ಅಭಿವೃದ್ಧಿಗೆ ಸಹಕಾರಿಯಾಗಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಮೂಲ ವಿಜ್ಞಾನಿಗಳಾಗಿ ಹೆಸರು ಮಾಡಿದ್ದಾರೆ ಎಂದರು.
ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಷಣ್ಮುಖನಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಭಾರತದಲ್ಲಿ ಸನಾತನ ಕಾಲದಿಂದಲೂ ಉಚ್ಚಾಯಮಾನವಾಗಿ ಬೆಳೆಯುತ್ತಾ ಬಂದಿದೆ. ನಿಮ್ಮಂತಹ ಯುವಜನಾಂಗ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ವಹಿಸಿ ಓದಿದರೆ ನೀವು ಕೂಡ ಶ್ರೇಷ್ಠ ವಿಜ್ಞಾನಿಗಳಾಗಿ ಬೆಳೆಯಬಹುದು. ಪ್ರಗತಿ ಹೊಂದಿದ ಎಲ್ಲ ರಾಷ್ಟ್ರಗಳು ಮೂಲ ವಿಜ್ಞಾನಕ್ಕೆ ಆದ್ಯತೆ ಕೊಡುವ ರಾಷ್ಟ್ರಗಳೇ ಆಗಿರುವುದರಿಂದ ನೊಬೆಲ್ ಪ್ರಶಸ್ತಿಗಳಲ್ಲಿ ಸಿಂಹಪಾಲು ಈ ರಾಷ್ಟ್ರಗಳಿಗೆ ಸಿಗುತ್ತದೆ. ಇಂದು ವಿಜ್ಞಾನ ಕ್ಷೇತ್ರ ಕೊರತೆ ಎದುರಿಸುತ್ತಿರುವುದು ಬುದ್ಧಿಮತ್ತೆಯ ವಿಚಾರದಲ್ಲಿ ಅಲ್ಲ, ಹಣದ ವಿಚಾರದಲ್ಲಿ. ಈಗ ಬೇಕಾಗಿರುವುದು ಅಗತ್ಯ ಪ್ರಮಾಣದಲ್ಲಿ ಅನುದಾನ. ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿದ ಹಣ ದುಪ್ಪಟ್ಟು ಪ್ರಮಾಣದಲ್ಲಿ ರಾಷ್ಟ್ರಕ್ಕೆ ಪ್ರತಿಫಲ ನೀಡುತ್ತದೆ ಎನ್ನುವುದು ಖಚಿತ ಎಂಬುದಕ್ಕೆ ಉಪಗ್ರಹ ಉಡಾವಣೆಯಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯೇ ಉತ್ತಮ ಉದಾಹರಣೆಯಾಗಿದೆ ಎಂದರು.
ಈ ವೇಳೆ ಕಾಲೇಜಿನ ದೈಹಿಕ ನಿರ್ದೇಶಕ ಹೆಚ್. ಕೊಟ್ರೇಶ್, ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಹರಾಳು ಬುಳ್ಳಪ್ಪ, ಡಾ. ತಿಪ್ಪೇಸ್ವಾಮಿ, ಡಾ. ಕೆ. ಸತೀಶ, ವೀರೇಶ ಸಹ ಪ್ರಾಧ್ಯಾಪಕ ನಾಗರಾಜ ಸೇರಿದಂತೆ ಇತರರಿದ್ದರು.