ಹಾಲಿನ ದರ ಹೆಚ್ಚಳ ಮಾಡಲು ಆಗ್ರಹ

ಹಾಲಿನ ದರ ಹೆಚ್ಚಳ ಮಾಡಲು ಆಗ್ರಹ

ಶಿವಮೊಗ್ಗದಲ್ಲಿ ನಾಳೆ ಪ್ರತಿಭಟನೆ

ಹೊನ್ನಾಳಿ, ಜ. 7 – ನಾಡಿದ್ದು ದಿನಾಂಕ 9ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಶಿಮುಲ್ ಹಾಲು ಒಕ್ಕೂಟ ಶಿವಮೊಗ್ಗದ ಮಾಚೇನಹಳ್ಳಿ ಬಳಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಕೆ.ಸಿ. ತಿಪ್ಪೇಶ್ ತಿಳಿಸಿದರು.

ತಾಲ್ಲೂಕಿನ ಬೀರಗೊಂಡನ ಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಎದುರು ಮಾಚೇನಹಳ್ಳಿಯ ಬಳಿ ನಡೆಯಲಿರುವ ಪ್ರತಿಭಟನೆಯ ಕರ ಪತ್ರಗಳನ್ನು ರೈತರಿಗೆ ವಿತರಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿ ಅವರು ಮಾತನಾಡಿದರು.

ದೇಶದ ಬೆನ್ನೆಲುಬಾಗಿರುವ ರೈತಾಪಿ ವರ್ಗದವರು ಕಳೆದ ಹತ್ತಾರು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತಾವು ಬೆಳೆದ ಬೆಳೆ ಕೈಸೇರದೆ ಆತಂಕಕ್ಕೀಡಾಗಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿ ಹೈನುಗಾರಿಕೆಯಲ್ಲಿ ಆದಾಯ ಕಂಡು ಕೊಳ್ಳೋಣವೆಂದರೆ ಹಾಲಿನ ದರಕ್ಕಿಂತ ಉತ್ಪಾದನಾ ವೆಚ್ಚ ಜಾಸ್ತಿಯಾಗಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ರೈತ ಸಮುದಾಯಕ್ಕೆ ಸರ್ಕಾರವು ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಒಟ್ಟು 122ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಇವುಗಳಿಂದ ಸುಮಾರು 3800 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ ಎಂದರು. 1 ಲೀಟರ್ ನೀರಿನ ಬಾಟಲ್ ದರವೇ ರೂ.20 ಇದೆ. ಆದರೆ ಹಾಲಿನ ದರ ಲೀಟರ್‌ಗೆ ರೂ. 30 ಇದೆ. 1 ಲೀಟರ್ ಹಾಲು ಉತ್ಪಾದನಾ ವೆಚ್ಚ ಅಂಕಿ-ಅಂಶಗಳ ಪ್ರಕಾರ ಸುಮಾರು 60 ರೂ. ಖರ್ಚಾಗುತ್ತಿದೆ, ಬೂಸಾ 50 ಕೆ.ಜಿಗೆ. 1250 ರೂ. ದರವಿದೆ. ಸರ್ಕಾರವು ಹಾಲಿನ ದರವನ್ನು ಲೀಟರ್‍ಗೆ 60 ರೂ ನಿಗದಿಪಡಿಸುವ ಮೂಲಕ ರೈತ ಸಮುದಾಯದ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಕೋಶಾಧ್ಯಕ್ಷ ಎಂ.ಕೆ. ಶಾಂತರಾಜ್, ಕಾರ್ಯದರ್ಶಿ ಕೆ.ವಿ. ಹಾಲಸ್ವಾಮಿ, ಸದಸ್ಯರುಗಳಾದ ಬಸವನಗೌಡ, ನಾಗರಾಜ್ ಮತ್ತು ಗ್ರಾಮದ ಹಾಲು ಉತ್ಪಾದಕರ ಸಂಘದ ಸದಸ್ಯರುಗಳಿದ್ದರು.

error: Content is protected !!