ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಆಗ್ರಹ

ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಆಗ್ರಹ

ಲಿಂಗಾಯತ ಮಠಾಧೀಶರಿಂದ ಮುಖ್ಯಮಂತ್ರಿಗೆ ಬೇಡಿಕೆ ಮಂಡನೆ

ಬೆಂಗಳೂರು, ಜ.8- ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ಲಿಂಗಾಯತ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ  ಅಧ್ಯಕ್ಷರಾಗಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಸೋಮವಾರ ಭೇಟಿ ಮಾಡಿದ ಲಿಂಗಾಯತ ಹಾಗೂ ವಿವಿಧ ಸಮುದಾಯಗಳ 48 ಮಠಾಧೀಶರ ನಿಯೋಗ, ಈ  ಬೇಡಿಕೆ ಮಂಡಿಸಿತು.

‘ಬಸವಾದಿ ಶರಣರ ಆಶಯಗಳೆಲ್ಲವೂ ನಮ್ಮ ಸಂವಿಧಾನದಲ್ಲಿವೆ. ವಚನ ಮತ್ತು ಸಂವಿಧಾನದ ಧ್ಯೇಯೋದ್ಧೇಶಗಳು ಒಂದೇ ಆಗಿವೆ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ನನ್ನ ತಕರಾರಿಲ್ಲ. ಆದರೆ, ನಾನೊಬ್ಬನೇ ನಿರ್ಧಾರ ಕೈಗೊಳ್ಳಲಾಗದು. ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಿದ್ದರಾಮಯ್ಯ ನಿಯೋಗಕ್ಕೆ ಭರವಸೆ ನೀಡಿದರು.

ಆರಂಭದಲ್ಲಿ ಮುಖ್ಯ ಆಶಯ ನುಡಿಗಳನ್ನಾಡಿದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಸವಣ್ಣ ಮನುಕುಲದ ತಂದೆ, ತಾಯಿ, ಬಂಧು, ಬಳಗವಾಗಿದ್ದಾರೆ. ತಳಸಮುದಾಯ ದವರಲ್ಲಿ ಆತ್ಮವಿಶ್ವಾಸ ಮೂಡಿಸಿ ಲಿಂಗ ಸಮಾನತೆಯನ್ನು ಜಾರಿಗೆ ತಂದವರು. 

ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಎಲ್ಲ ವರ್ಗದವರಿಗೆ ಪ್ರೀತಿಯ ಬೆಳಕು ಚೆಲ್ಲಿದವರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸುವ ಅವಕಾಶ ಸಿದ್ಧರಾಮಯ್ಯನವರಿಗೆ ದೊರೆತಿದೆ. ಹಾಗೆ ಘೋಷಿಸಿದರೆ ಅದೊಂದು ಐತಿಹಾಸಿಕ ದಾಖಲೆಯಾಗುತ್ತದೆ ಮತ್ತು ಬೇರಿಲ್ಲದೆ ಬೆಳೆಯುತ್ತಿರುವ ಯುವಶಕ್ತಿಗೆ ಚೈತನ್ಯ ತುಂಬುತ್ತದೆ. ಆದ್ದರಿಂದ ಮುಂಬರುವ ಬಸವ ಜಯಂತಿಯೊಳಗೆ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಬೇಕೆಂದು ಒತ್ತಾಯಪಡಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಭಾಲ್ಕಿಯ ಬಸವಲಿಂಗ ಪಟ್ಟದ ದೇವರು ಬಸವಣ್ಣನವರು, ಒಂದೇ ಸಮುದಾಯದ ನಾಯಕರಲ್ಲ. ಎಲ್ಲ ಸಮುದಾಯದವರ ನಾಯಕ ಎಂದರು.

ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನಬಸವಾನಂದ ಸ್ವಾಮೀಜಿ,  ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕಡಕಂಚಿ, ಅಕ್ಕ ಅನ್ನಪೂರ್ಣತಾಯಿ, ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಡಾ.ಗಂಗಾಂಬಿಕೆ ಅಕ್ಕ,‌ ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ನಿಯೋಗದಲ್ಲಿದ್ದರು.

ಸಚಿವರಾದ ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ, ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಎಚ್.ಎಲ್.ಪುಷ್ಪಾ, ಲೇಖಕಿಯರಾದ ವಸುಂಧರಾ ಭೂಪತಿ, ಕೆ.ಷರೀಫಾ, ಎಲ್.ಎನ್‌. ಮುಕುಂದರಾಜು, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ಜಾಗೃತ ಕರ್ನಾಟಕದ ಬಿ.ಸಿ.ಬಸವರಾಜು, ದೊಡ್ಡಿಪಾಳ್ಯ ನರಸಿಂಹಮೂರ್ತಿ ನಿಯೋಗದ ಜತೆಗಿದ್ದರು.

error: Content is protected !!