ರೈತನ ಶ್ರಮ ವ್ಯರ್ಥ ಮಾಡಬೇಡಿ : ಕವಿತಾ ಉಮಾಶಂಕರ್‌

ರೈತನ ಶ್ರಮ ವ್ಯರ್ಥ ಮಾಡಬೇಡಿ : ಕವಿತಾ ಉಮಾಶಂಕರ್‌

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಾರ್ಷಿಕ ಸಂಭ್ರಮ

ದಾವಣಗೆರೆ, ಜ.5- ಎಲ್ಲರ ಜೀವನ ಪ್ರಾರಂಭವಾಗುವುದೇ `ರೈತ’ ಎಂಬ ಎರಡಕ್ಷರಿಂದ. ಬೆಳಿಗ್ಗೆ ಹಾಲು, ಚಹಾ ಕುಡಿಯುವ ಮೂಲಕ ದಿನ ಆರಂಭಿಸುತ್ತೇವೆ. ಅದರಲ್ಲಿ ರೈತನ ಶ್ರಮ ಇರುತ್ತದೆ. ಆದರೆ ಹಾಲು ಬಿಳಿಯಾಗಿರುವಷ್ಟು ರೈತನ ಬದುಕು ಬಿಳಿಯಾಗಿರುವುದಿಲ್ಲ ಎಂದು ಪ್ರಗತಿಪರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಕವಿತಾ ಉಮಾಶಂಕರ್ ಮಿಶ್ರಾ ಹೇಳಿದರು.

ಶುಕ್ರವಾರ ಸಂಜೆ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 54ನೇ ವಾರ್ಷಿಕ ಸಂಭ್ರಮ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದೆರಡು ತಾಸಿನಲ್ಲಿ ಅನ್ನ-ಸಾರು ತಯಾರಿಸಿ, ಸೇವಿಸುತ್ತೇವೆ. ಆದರೆ ಅದಕ್ಕೆ ಬೇಕಾದ ಅಕ್ಕಿ, ಬೇಳೆ ಬೆಳೆಯಬೇಕಾದರೆ ರೈತ ತನ್ನ ಬೆವರ ಜೊತೆ ರಕ್ತವನ್ನೂ ಹರಿಸಿರುತ್ತಾನೆ. ಆದ್ದರಿಂದ ಅನ್ನವನ್ನು ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದರು.

ಕೃಷಿಯಲ್ಲಿ ಸಾಧಿಸಿ ತೋರಿಸಿ: ಹೆಣ್ಣು, ಹೊನ್ನು, ಮಣ್ಣಿನ ಬೆಲೆ ಎಂದೂ ಕಡಿಮೆಯಾಗುವುದಿಲ್ಲ. ಕೃಷಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಹಿರಿಯರು ನಿಮಗೆ ಒಂದು ಎಕರೆ ಜಮೀನು ಉಳಿಸಿದ್ದರೂ ಅದರಲ್ಲಿಯೇ ಬೆಳೆದು ಸಾಧಿಸಿ ತೋರಿಸಿ, ಅದೇ ಸಮಾಜಕ್ಕೆ ನೀವು ನೀಡುವ ದೊಡ್ಡ ಕೊಡುಗೆ ಎಂದರು.

ನಿಮ್ಮ ಜೀವನದ ಶಿಲ್ಪಿ ನೀವೇ: ನಿಮ್ಮನ್ನು ನೀವು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ತ್ಯಾಗ, ಸ್ವ ಸಮರ್ಪಣೆ, ಶಕ್ತಿ ಮಹಿಳೆಯಲ್ಲಿರುತ್ತದೆ. ನಿಮ್ಮ
ಜೀವನದ ಶಿಲ್ಪಿ ನೀವೇ ಎಂಬುದು ತಿಳಿದಿರಲಿ. ಬೇಡಿ ತಿಂದರೆ ಸಣ್ಣವರಾಗುತ್ತೇವೆ. ಯಾವುದೇ ಕೆಲಸವಿರಲಿ ದುಡಿದು ತಿಂದರೆ ನಾವೇ ದೊಡ್ಡವರು ಎಂದು ತಮ್ಮ ನುಡಿಗಳ ಮೂಲಕ ಮಹಿಳೆಯರಿಗೆ ಧೈರ್ಯ ತುಂಬಿದರು.

ಯಶೋಗಾಥೆ ಬಿಚ್ಚಿಟ್ಟ ಕವಿತಾ: ತಾವು ಇಂಜಿನಿಯರಿಂಗ್ ಪದವಿ ಪಡೆದದ್ದು, ವಿವಾಹವಾಗಿದ್ದು, ನಂತರ ಕೃಷಿ ಕ್ಷೇತ್ರದಲ್ಲಿನ ಏಳು-ಬೀಳು, ಸಾಧನೆಗಳನ್ನು ವಿವರವಾಗಿ ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟ ಕವಿತಾ ಅವರು, ಪ್ರಸ್ತುತ ಋತು ಆಧಾರಿತ ಬೆಳೆ ಪದ್ಧತಿ ಅಳವಡಿಸಿಕೊಂಡು ಸಾಕಷ್ಟು ಲಾಭ ಪಡೆಯುತ್ತಿರುವುದಾಗಿ ಹೇಳಿದರು.

ಪ್ರಶಸ್ತಿಗಳ ಸಮರ್ಪಣೆ: ತಮಗೆ ಬಂದಿರುವ ರಾಷ್ಟ್ರ, ರಾಜ್ಯ ಪ್ರಶಸ್ತಿಗಳೆಲ್ಲವನ್ನೂ ನೆರೆದಿದ್ದ ವಿದ್ಯಾರ್ಥಿಗಳಿಗೇ ಅರ್ಪಿಸುವುದಾಗಿ ಕವಿತಾ ಉಮಾಶಂಕರ್ ಹೇಳಿದರು.

ಸಮಾರಂಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಶಿಕ್ಷಕಿ ಶಶಿಕಲಾ ಸಾಯಿನಾಥ್ ಅವರನ್ನು ಸನ್ಮಾನಿಸಲಾಯಿತು.   ದ್ವಿತೀಯ ಪಿ.ಯು.ಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸಿದ್ಧಗಂಗಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ವಾಣಿಶ್ರೀ ಅಧ್ಯಕ್ಷತೆ ವಹಿಸಿದ್ದರು.  ಸಿದ್ಧಗಂಗಾ ಸ್ಕೂಲ್ (ಸಿಬಿಎಸ್‌ಇ) ಸಹ ಶಿಕ್ಷಕಿ ಅಂಬುಜಾಕ್ಷಿ ಎನ್., ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅರುಣ್ ಕುಮಾರ್ ಜೆ.ಎಂ., ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ,  ಪದವಿ ಪೂರ್ವ ಕಾಲೇಜು ನಿರ್ದೇಶಕ ಡಾ.ಜಯಂತ್ ಡಿ.ಎಸ್. ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕೆ.ಎಸ್. ರೇಖಾರಾಣಿ ನಿರೂಪಿಸಿದರು. ಕು.ಯಶಸ್ವಿನಿ ಅತಿಥಿಗಳನ್ನು ಪರಿಚಯಿಸಿದರು.

error: Content is protected !!