ಮಹಿಳೆಯರ ರಕ್ಷಣೆಗಾಗಿ ಜಿಲ್ಲಾ ಪೊಲೀಸ್‌ನಿಂದ ಸುರಕ್ಷಾ ಆ್ಯಪ್‌ ಲಭ್ಯ

ಮಹಿಳೆಯರ ರಕ್ಷಣೆಗಾಗಿ ಜಿಲ್ಲಾ ಪೊಲೀಸ್‌ನಿಂದ ಸುರಕ್ಷಾ ಆ್ಯಪ್‌ ಲಭ್ಯ

ದಾವಣಗೆರೆ, ಜ. 3- ಹೆಣ್ಣು ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿ ಹದಿನಾರು ಪೊಲೀಸ್ ವಾಹನಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿನಿಯರು ಏನೇ ಸಮಸ್ಯೆಯಿದ್ದರೂ 112 ಕ್ಕೆ ಕರೆ ಮಾಡಬಹುದು. ಇದಲ್ಲದೇ ಇತ್ತೀಚಿಗೆ ಸುರಕ್ಷಾ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ನಗರದ ರಾಜನಹಳ್ಳಿ ಸೀತಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ  ನಡೆದ 2023-24 ನೇ ಸಾಲಿನ ಪ್ರತಿಭಾ ವಿಕಾಸ ಸಂಘದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆ ಹೆಲ್ಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡರೆ ಸುರಕ್ಷಾ ಆಪ್  ಸಿಗುತ್ತದೆ. ಈ ಮೂಲಕ ತುರ್ತು ಬಟನ್ ಒತ್ತಿದರೆ ಸಾಕು ಜಿಲ್ಲಾ ಪೊಲೀಸ್ ಸಹಾಯಕ್ಕೆ ಸಿದ್ದವಿರುತ್ತದೆ ಎಂದರು.

ಉತ್ತಮ ಪುಸ್ತಕಗಳೇ ವಿದ್ಯಾರ್ಥಿಗಳಿಗೆ ಸ್ನೇಹಿತರಾಗಬೇಕೆ ವಿನಃ ಮೊಬೈಲ್ ಅಲ್ಲ. ಶೇ. 80 ರಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೊಬೈಲ್ ಬಳಕೆ ಮಾಡುತ್ತಿದ್ದು, ಆ ಬಳಕೆ ಕೇವಲ ವಿದ್ಯಾಭ್ಯಾಸಕ್ಕೆ ಪೂರಕವಾಗಿರಬೇಕು ಎಂದು ಹಿತ ನುಡಿದರು.

ಪ್ರತಿಯೊಬ್ಬರಲ್ಲೂ ತನ್ನದೇ ಆದ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ನಾವು ಏನಾಗಬೇಕೆಂದು ನಿರ್ಧರಿಸಬೇಕು.  ಸತತ ವಿದ್ಯಾಭ್ಯಾಸದ ಮೂಲಕ ಗುರಿ ಸಾಧನೆಗೆ ಮುಂದಾಗಬೇಕೆಂದು ಕರೆ ನೀಡಿದರು.

ವಿದ್ಯಾರ್ಥಿನಿಯರು ಸಹ ಓದಿನ ಮೂಲಕ ಸಶಕ್ತರಾಗಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಶಕ್ತಿಯಿಂದ ಜೀವನ ನಡೆಸುತ್ತೇನೆಂಬ ಆತ್ಮವಿಶ್ವಾಸ ಮೂಡಬೇಕು. ಆಸಕ್ತಿಗೆ ಅನುಗುಣವಾಗಿ ಜೀವನದಲ್ಲಿ ಮುನ್ನಡೆಯಬೇಕೆಂದರು.

ಲಕ್ಷ್ಮಿದೇವಿ ದಯಾನಂದ್ ಮಾತನಾಡಿ, ಮಹಿಳೆ ಮಾನಸಿಕವಾಗಿ, ದೈಹಿಕವಾಗಿ ಸದೃಢಳಾದರೆ ಸಮಾಜವನ್ನು ಧೈರ್ಯವಾಗಿ ಎದುರಿಸುವ ಆತ್ಮಬಲ ಬರುತ್ತದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ, ಕಾಲೇಜಿನ ನಂತರವೂ ಕ್ರೀಡೆಗಳಲ್ಲಿ ಭಾಗವಹಿಸುವ ಹವ್ಯಾಸವನ್ನು  ರೂಢಿಸಿಕೊಂದೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಿದರು.

ರಾಜ್ಯಮಟ್ಟದ ಕ್ರೀಡೆಗಳಲ್ಲಿ ಪದಕಗಳನ್ನು ಗಳಿಸಿ, ಅತ್ಯುತ್ತಮ ಸಾಧನೆ ಮಾಡಿದರೆ ಸರ್ಕಾರಿ ಕ್ರೀಡಾ ವಸತಿ ನಿಲಯಗಳಲ್ಲಿ ಪ್ರವೇಶ ದೊರೆಯುತ್ತದೆ. ವಿದ್ಯಾಭ್ಯಾಸದ ಜೊತೆಗೆ ಉದ್ಯೋಗವೂ ದೊರೆಯುತ್ತದೆ ಎಂದು ಅವರು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟರು.

ಕಾಲೇಜಿನ ಪ್ರಾಚಾರ್ಯರಾದ ಟಿ.ಎ. ಕುಸಗಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ಧಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಜಿ. ಶಿವಕುಮಾರ್, ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಪಾಲಾಕ್ಷಿ ಸೇರಿದಂತೆ, ಇತರೆ ಗಣ್ಯರು ಉಪಸ್ಥಿತರಿದ್ದರು.

error: Content is protected !!