ಪುಷ್ಕರಣಿಯಲ್ಲಿ ಪೂಜೆ, ಸಾವಿರಾರು ಜನರಿಂದ ಅನ್ನ, ಹಾಲು, ಸಕ್ಕರೆ, ಬಾಳೆಹಣ್ಣು ಪ್ರಸಾದ ಸೇವನೆ
ದಾವಣಗೆರೆ, ಜ.2- ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಮಹೇಶ್ವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಎರಡು ದಿನಗಳ ಕಾಲ ನಡೆ ಯುವ ಈ ಜಾತ್ರೆಯಲ್ಲಿ ಪ್ರಥಮ ದಿನ ವಾದ ಮಂಗಳವಾರ ಅನ್ನ, ಹಾಲು, ಬಾಳೆಹಣ್ಣು, ಬೋರ ಸಕ್ಕರೆಯನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು. ಬೆಳಿಗ್ಗೆಯಿಂದ ರಾತ್ರಿ 8 ಗಂಟೆವರೆಗೂ ಪ್ರಸಾದ ಕಾರ್ಯ ನೆರವೇರಿತು.
ದಾವಣಗೆರೆ ಸೇರಿದಂತೆ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಅಕ್ಕಿ, ಹಾಲು, ಬಾಳೆ ಹಣ್ಣುಗಳೊಂದಿಗೆ ಆಗಮಿಸಿ, ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿದರೆ, ಗ್ರಾಮದ ಚಿಕ್ಕ ಮಕ್ಕಳು, ಯುವಕರು ಇಳಿ ವಯಸ್ಸಿನ ಹಿರಿಯರು ಉತ್ಸಾಹದಿಂದ ಪಾಲ್ಗೊಂಡು ಪ್ರಸಾದ ಬಡಿಸುವಲ್ಲಿ ಮಗ್ನರಾಗಿದ್ದರು.
ಬೆಳಿಗ್ಗೆ 7 ಗಂಟೆಗೆ ಮಹೇಶ್ವರ ಸ್ವಾಮಿಯ ಗದ್ದುಗೆ ಸಮೀಪ ಇರುವ ಪುಷ್ಕರಣಿಯಲ್ಲಿ ಸ್ವಾಮೀಜಿ ಒಬ್ಬರು ಮುಳುಗಿ ಮೃತ್ತಿಕೆಯನ್ನು ತಂದರು. ಅದನ್ನು 2 ಬಾಳೆಹಣ್ಣಿನ ಚಿಪ್ಪಿನಲ್ಲಿಟ್ಟು ಪೂಜಿಸ ಲಾಯಿತು. ನಂತರ ಪುಷ್ಕ ರಣೆಗೆ ವಿಸರ್ಜಿಸ ಲಾಯಿತು. ಒಂದು ಚಿಪ್ಪು ಮುಳುಗಿ, ಮತ್ತೊಂದು ಚಿಪ್ಪ ತೇಲಿತು. ಇದರಿಂದಾಗಿ ಸಾಧಾರಣ ಫಲ ಎಂದು ಗ್ರಾಮಸ್ಥರು ಹೇಳಿದರು.
ಅಂದ ಹಾಗೆ ಈ ಪುಷ್ಕರಣೆಯಲ್ಲಿ ವಿಸರ್ಜಿಸಿದ ಎರಡೂ ಚಿಪ್ಪುಗಳು ಮುಳುಗಿದರೆ ಗಂಡಾಂತರವೆಂದೂ, ಎರಡೂ ತೇಲಿದರೆ ತುಂಬಾ ಒಳ್ಳೆಯ ದೆಂದೂ, ಒಂದು ತೇಲಿ ಒಂದು ಮುಳುಗಿದರೆ ಸಾಧಾರಣ ಫಲ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದೆ.
ಇಂದು 10 ಕ್ವಿಂಟಾಲ್ ಅಕ್ಕಿಯ ಅನ್ನ ಮಾಡಿದ್ದೇವೆ. ನಾಳೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದ್ದು, 15 ಕ್ವಿಂಟಾಲ್ ಅನ್ನ ಮಾಡುವುದಾಗಿ ಭಕ್ತ ಮುಖಂಡರು ಪತ್ರಿಕೆಗೆ ತಿಳಿಸಿದರು.
ಜಾತ್ರೆಯ ಹಿಂದಿನ ದಿನ ಆನೆಕೊಂಡ ಬಸವೇಶ್ವರ ಸ್ವಾಮಿ ಹಾಗೂ ಬಸಾಪುರದ ಗುರು ಸಿದ್ದೇಶ್ವರ ಸ್ವಾಮಿ ಹಾಗೂ ಹಾಲಸ್ವಾಮಿ ದೇವರುಗಳನ್ನು ಪಲ್ಲಕ್ಕಿ ಮೂಲಕ ಮೆರವಣಿಗೆಯಲ್ಲಿ ಕರೆ ತಂದ ಮೇಲೆಯೇ ಪ್ರಸಾದ ತಯಾರಿಸಲು ಒಲೆ ಹಚ್ಚುವುದು ಇಲ್ಲಿನ ವಾಡಿಕೆಯಾಗಿದೆ. ಜಾತ್ರೆ ಮುಗಿದ ಮೇಲೆ ಈ ದೇವರುಗಳು ವಾಪಸ್ ತಮ್ಮ ಮೂಲ ಸ್ಥಾನಗಳಿಗೆ ತೆರಳುತ್ತವೆ.