ದಾವಣಗೆರೆ, ಜ. 2- ಕನ್ನಡೇತರ ನಾಮಫಲಕ ತೆರವುಗೊಳಿಸುವಂತೆ ಹೋರಾಟ ಮಾಡುತ್ತಿದ್ದ ಕರವೇ ನಾರಾಯಣ ಗೌಡ ಮತ್ತವರ ತಂಡದವರನ್ನು ಬಂಧಿಸಿರುವುದನ್ನು ಖಂಡಿಸಿ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಶಿವಕುಮಾರ್ ನೇತೃತ್ವದಲ್ಲಿ ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಟಿ. ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಕನ್ನಡೇತರ ನಾಮಫಲಕ ತೆರವು ಹೋರಾಟ ಮಾಡುತ್ತಿದ್ದ ಕನ್ನಡ ಪರ ಹೋರಾಟ ಗಾರರನ್ನು ಪೊಲೀಸರು ಬಂಧಿಸಿ, ಹಲವು ಸೆಕ್ಷನ್ ಅಡಿ ಕೇಸ್ ದಾಖಲಿಸಿರುವುದು ಕನ್ನಡ ಪರ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಎಂದು ಕಿಡಿಕಾರಿದರು.
ಹೋರಾಟಗಾರರ ಮೇಲೆ ಕೇಸು ಹಾಕಬಹುದೇ ಹೊರತು, ಕನ್ನಡ ನಾಡು, ನುಡಿ, ನೆಲ, ಜಲ, ಜನಪರ ಹೋರಾಟವನ್ನಾಗಲೀ, ಧ್ವನಿಯನ್ನಾಗಲೀ ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಪರಭಾಷೆಯ ನಾಮಫಲಕಗಳ ದಬ್ಬಾಳಿಕೆಯಲ್ಲಿ ಈ ನೆಲದ ಭಾಷೆಯ ನಾಮಫಲಕ ಹಾಕಿಕೊಳ್ಳುವಂತೆ ಹೋರಾಟ ನಡೆಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತಿತರರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರವು ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನಿಸಿದೆ ಎಂದು ಹೇಳಿದರು.
ಕನ್ನಡ ಪರ ಹೋರಾಟಗಾರರನ್ನು ಜೈಲಿನಲ್ಲಿ ಕೈದಿಗಳಂತೆ ಬಂಧಿಸಿಟ್ಟಿರುವುದು ಅಕ್ಷಮ್ಯ. ಪರಭಾಷಿಗರ ಚಿತಾವಣೆ, ಪ್ರಭಾವಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಗೃಹ ಸಚಿವರು, ಪೊಲೀಸ್ ಇಲಾಖೆ ಕನ್ನಡ ಪರ ಹೋರಾಟಗಾರರನ್ನು ಅಪರಾಧಿಗಳಂತೆ ಬಿಂಬಿಸಲು ಮುಂದಾಗಿರುವುದು ದೌರ್ಭಾಗ್ಯವೇ ಸರಿ ಎಂದರು.
ಕೂಡಲೇ ಬೇಸರತ್ ಮೇಲೆ ಬಿಡುಗಡೆ ಮಾಡಬೇಕು. ಎಲ್ಲಾ ಕೇಸುಗಳನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಪರ ಹೋರಾಟಗಾರರಾದ ಬಸವರಾಜ ಐರಣಿ, ನಾಗೇಂದ್ರ ಬಂಡೀಕರ್, ಕೆ.ಜಿ. ಶಿವಕುಮಾರ್, ಎಸ್.ಜಿ. ಸೋಮಶೇಖರ್, ಕೆ.ಎನ್. ವೆಂಕಟೇಶ್, ಮಂಜುನಾಥ ಗೌಡ, ನಾಗರಾಜ್ ಆದಾಪುರ, ಶುಭಮಂಗಳ, ಎಸ್. ಸುವರ್ಣಮ್ಮ, ಸುನೀತಾ ಭೀಮಣ್ಣ, ರಾಧಾಬಾಯಿ, ಸಂಗಮ್ಮ, ಸುಧಾ, ಸುನಂದ ವರ್ಣೇಕರ್, ಶಾಮ್ ಕುಶಾಲ್ ಮತ್ತಿತರರಿದ್ದರು.