ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿರುವ ಜನ: ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್
ದಾವಣಗೆರೆ, ಜ.2- ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರ ಅಲ್ಪ ಸಂಖ್ಯಾತರ ರಕ್ಷಣೆಗೆ ಮುಂದಾಗಿದೆ. ಈ ಸರ್ಕಾರಕ್ಕೆ ಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು.
ಮಂಗಳವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆಯನ್ನು ಹೀಯಾಳಿಸಿ ಅಪಮಾನ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿ ದ್ದರೂ ರೈತರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಘೋಷಿಸಿ ಅದರಲ್ಲಿ 1000 ಕೋಟಿ ರೂ. ಕಾರ್ಯಯೋಜನೆ ರೂಪಿಸುವಂತೆ ಸೂಚಿಸಲಾಗಿದೆ. ಆದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ದೇವರಾಜ ಅರಸು, ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಗೆ ಒಂದು ಪೈಸೆ ನೀಡಿಲ್ಲ ಎಂದು ದೂರಿದರು.
ಬರಗಾಲ ಬಂದಿರುವ ಈ ಸಂದರ್ಭದಲ್ಲಿ ರೈತರು ಮೊದಲ ಆದ್ಯತೆಯಾಗಬೇಕೋ ಇಲ್ಲ ಅಲ್ಪಸಂಖ್ಯಾತರೋ ಎಂಬುದನ್ನು ಮೆಜೆಸ್ಟಿಕ್‌ನಲ್ಲಿ ಡಬ್ಬ ಇಟ್ಟು ಅಭಿಪ್ರಾಯ ಸಂಗ್ರಹಿಸಲಿ. ಯಾವ ಉತ್ತರ ಬರುತ್ತದೋ ಅವರೇ ತಿಳಿಯಲಿ. ಮುಖ್ಯಮಂತ್ರಿ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದು ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಗೋರಕಕ್ಷರನ್ನು, ಕನ್ನಡಪರ ಹೋರಾಟಗಾರರು ಹಾಗೂ ರಾಮ ಜನ್ಮಭೂಮಿಗೆ ಹೋರಾಟ ಮಾಡಿದವರ ಹಳೆಯ ಪ್ರಕರಣಗಳನ್ನು ಕೈಗೆತ್ತಿಕೊಂಡು ಬಂಧಿಸುತ್ತಿದ್ದು, ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ಕಾರ್ಯಕರ್ತರನ್ನು ಬಿಡುಗಡೆ ಮಾಡುತ್ತಿದೆ. ಈ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಬುಧವಾರ ಕರೆಕೊಟ್ಟಿರುವ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಅಡಿ ಕರ್ನಾಟಕ ಒಂದೇ ಅಲ್ಲ, ಬೇರೆ ಯಾವ ರಾಜ್ಯಗಳಿಗೂ ಪರಿಹಾರ ನೀಡಿಲ್ಲ. ಬೇರೆ ರಾಜ್ಯಗಳಿಗೆ ನೀಡಿ ಕರ್ನಾಟಕಕ್ಕೆ ನೀಡದೇ ಇದ್ದರೆ ಅವರು ಕೇಳಲಿ. ಅದು ಬಿಟ್ಟು ಕೇಂದ್ರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ರವಿಕುಮಾರ್ ಹೇಳಿದರು.
ಸರ್ಕಾರ 136 ಸೀಟು ಗಳಿಸಿ ಅಧಿಕಾರಕ್ಕೆ ಬಂದರೂ ಜನರ ಭರವಸೆ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಟ್ಟಿಲ್ಲ. ಅದಕ್ಕಾಗಿಯೇ ಶಾಸಕಾಂಗ ಪಕ್ಷದ ಸಭೆಯನ್ನೇ ಕರೆದಿಲ್ಲ. ಈ ಪಕ್ಷಪಾತದ ಸರ್ಕಾರದ ವಿರುದ್ಧ ಹೋರಾಟ ಮಾಡುವುದೇ ನಮ್ಮ ಗುರಿಯಾಗಿದ್ದು, 28 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ ಎಂದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಶಿವರಾಜ್ ಪಾಟೀಲ್, ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಸದಸ್ಯರಾದ ಎಚ್.ಎಲ್.ಶಿವಪ್ರಕಾಶ್, ಕೆ.ಎಂ.ವೀರೇಶ್, ಸೋಗಿ ಶಾಂತಕುಮಾರ್, ಮುಖಂಡರಾದ ಎಚ್.ಎನ್.ಶಿವ ಕುಮಾರ್, ಧನಂಜಯ ಕಡ್ಲೇಬಾಳು, ಶಿವಾನಂದ ಇದ್ದರು.