ಹೊನ್ನಾಳಿ, ಡಿ.29- ತಾಲ್ಲೂಕಿನ ಯಕ್ಕನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಹಾಲಿವಾಣ ಗ್ರಾಮದಲ್ಲಿ ಸ್ಮಶಾನವಿ ಲ್ಲದೇ ಸತ್ತವರ ಶವ ಸಂಸ್ಕಾರ ಮಾಡಲು ಜಾಗದ ಸಮಸ್ಯೆ ತಲೆದೋರಿತ್ತು.
ಸರ್ವೇ ನಂಬರ್ 40ರಲ್ಲಿ 8 ಎಕರೆ 6 ಗುಂಟೆ ವಿಸ್ತೀರ್ಣದ ಸರ್ಕಾರಿ ಜಾಗದಲ್ಲಿ ಸ್ಮಶಾನಕ್ಕೆಂದು ಜಾಗ ಮೀಸಲಿಡಲಾಗಿದ್ದರೂ ಕೆಲವರು ಸ್ಮಶಾ ನಕ್ಕೆಂದು ಮೀಸಲಿರಿಸಿದ್ದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿ ದ್ದರು. ಕಳೆದ 15 ವರ್ಷ ಗಳಿಂದ ಗ್ರಾಮದಲ್ಲಿ ಮೃತರನ್ನು ಹೂಳಲು ಜಾಗದ ಸಮಸ್ಯೆ ತಲೆದೋರಿ ಹಿಂದಿನಿಂ ದಲೂ ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿ ವರ್ಗದವರಿಗೆ ಗ್ರಾಮಸ್ಥರು ಸ್ಮಶಾನದ ಜಾಗವನ್ನು ತೆರವುಗೊಳಿಸಲು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಚಿಕ್ಕಹಾಲಿವಾಣ ಗ್ರಾಮದಲ್ಲಿ ಹಿಂದಿನ 4 ತಹಶೀಲ್ದಾರ್ಗಳು ಒತ್ತುವರಿ ಜಾಗವನ್ನು ತೆರವುಗೊ ಳಿಸಲು ಪ್ರಯತ್ನಪಟ್ಟರೂ ಸ್ಮಶಾನಕ್ಕೆಂದು ಮೀಸಲಿ ರಿಸಿದ್ದ ಜಾಗವನ್ನು ತೆರವುಗೊಳಿಸಲಾಗಿರಲಿಲ್ಲ.
ತಹಶೀಲ್ದಾರ್ ಪಟ್ಟರಾಜೇಗೌಡ ಪತ್ರಿಕೆಗೆ ಮಾಹಿತಿ ನೀಡಿ, ಕಳೆದ 2 ವರ್ಷಗಳ ಹಿಂದೆ ಗ್ರಾಮದಲ್ಲಿ ಮೃತ ವ್ಯಕ್ತಿಯನ್ನು ಹೂಳಲು ಜಾಗವಿಲ್ಲದ್ದಕ್ಕೆ ಮೃತ ವ್ಯಕ್ತಿಯ ಕುಟುಂಬದವರು ಯಕ್ಕನಹಳ್ಳಿ ಗ್ರಾ.ಪಂ. ಎದುರು ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದರು ಎಂದು ಮಾಹಿತಿ ಲಭ್ಯವಾಗಿದ್ದು, ತಾವು ಆದ್ಯತೆಯ ಮೇರೆಗೆ ಯಾವ ಯಾವ ಗ್ರಾಮಗಳಲ್ಲಿ ಸ್ಮಶಾನದ ಸಮಸ್ಯೆ ಗಂಭೀರವಾಗಿದೆಯೋ ಆಯಾ ಗ್ರಾಮಗಳಲ್ಲಿ ಸ್ಮಶಾನ ತೆರವು ಕಾರ್ಯಾಚರಣೆ ಮಾಡುತ್ತಿರುವುದಾಗಿ ತಿಳಿಸಿದರು.
ಚಿಕ್ಕಹಾಲಿವಾಣ ಗ್ರಾಮದ ಸ್ಮಶಾನದ ಜಾಗದ ಸಮಸ್ಯೆಯನ್ನು ಗುರುವಾರ ತಡರಾತ್ರಿ ತಾ.ಪಂ. ಇಒ ಹೆಚ್.ವಿ.ರಾಘವೇಂದ್ರ ಮತ್ತು ಅವರ ತಂಡ ಹಾಗೂ ಕಂದಾಯ ಮತ್ತು ಸರ್ವೇ, ಪೊಲೀಸ್ ಬಂದೋಬಸ್ತ್ನಲ್ಲಿ ಗ್ರಾಮದವರ ಜೊತೆಗೆ ಚರ್ಚೆ ನಡೆಸಲಾಯಿತು.
ಪ್ರಾರಂಭದಲ್ಲಿ ಸ್ಮಶಾನದ ಜಾಗ ತೆರವು ಕಾರ್ಯಾಚರಣೆಗೆ ಕೆಲ ಗ್ರಾಮಸ್ಥರಿಂದ ಅಡ್ಡಿಪಡಿಸಲಾಯಿತು. ನಂತರ ಒತ್ತುವರಿ ಮಾಡಿದ್ದವರಿಗೆ ತಾಂತ್ರಿಕ ಸಮಸ್ಯೆಗಳ ಬಗ್ಗೆ ಮತ್ತು ಜಾಗ ಬಿಟ್ಟುಕೊಡುವ ವಿಚಾರವಾಗಿ ಸಮರ್ಪಕ ದಾಖಲೆಗಳನ್ನು ತೋರಿಸಿ ಮನವೊಲಿಸಲಾಯಿತು.
ರಾತ್ರಿ 8.30ರ ಸುಮಾರಿಗೆ ಜೆಸಿಬಿ ಯಂತ್ರದ ಮೂಲಕ ಸ್ಮಶಾನದ ಜಾಗವನ್ನು ತೆರವುಗೊಳಿಸಿ, ಒತ್ತುವರಿಯಾಗಿದ್ದ ಜಾಗವನ್ನು ಟ್ರೆಂಚ್ ಹೊಡೆಸಿ, ಎಕ್ಕನಹಳ್ಳಿ ಗ್ರಾ.ಪಂ.ಯವರಿಗೆ ಹಸ್ತಾಂತರಿಸಲಾಯಿತು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಇಒ ಹೆಚ್.ವಿ.ರಾಘವೇಂದ್ರ, ರಾಜಸ್ವ ನಿರೀಕ್ಷಕ ರಮೇಶ್, ಪಿಡಿಓ ಕರಿಯಪ್ಪ, ಕಾರ್ಯದರ್ಶಿ ರಾಜಪ್ಪ ಬನ್ನಿಕೊಡು, ಸರ್ವೇಯರ್ ರಮೇಶ್, ಗ್ರಾಮ ಆಡಳಿತಾಧಿಕಾರಿಗಳಾದ ಅನ್ನಪೂರ್ಣ, ಅನಿತಾ, ಪ್ರಶಾಂತ್, ಪೊಲೀಸ್ ಪೇದೆ ರಾಜು, ಗ್ರಾ.ಪಂ ಸಿಬ್ಬಂದಿ, ಸಾಸ್ವೆಹಳ್ಳಿ-2 ಹೋಬಳಿ ವ್ಯಾಪ್ತಿಯ ಗ್ರಾಮ ಸಹಾಯಕರುಗಳು ಉಪಸ್ಥಿತರಿದ್ದರು.