ಚಿತ್ರದುರ್ಗ, ಡಿ. 29 – ಇಲ್ಲಿನ ಚಳ್ಳಕೆರೆ ಗೇಟ್ ಬಳಿ ಪಾಳು ಬಿದ್ದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿ ಪತ್ತೆಯಾಗಿರುವುದು ನಿವೃತ್ತ ಸರ್ಕಾರಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಗನ್ನಾಥ್ ರೆಡ್ಡಿ (85), ಪತ್ನಿ ಪ್ರೇಮ (80), ಮಗಳು ತ್ರಿವೇಣಿ (62), ಗಂಡು ಮಕ್ಕಳಾದ ಕೃಷ್ಣ (60) ಹಾಗೂ ನರೇಂದ್ರ (57) ಅವರ ಅಸ್ಥಿಪಂಜರಗಳು ಎಂದು ಶಂಕಿಸಲಾಗಿದೆ.
ಮೂವರು ಮಕ್ಕಳಿಗೂ ಮದುವೆಯಾಗಿರಲಿಲ್ಲ. ಇವರು ಯಾವ ಸಂಬಂಧಿಗಳ ಮನೆಗೂ ಹೋಗುತ್ತಿರಲಿಲ್ಲ, ಸಂಬಂಧಿಗಳೂ ಇವರ ಮನೆಗೆ ಬರುತ್ತಿರಲಿಲ್ಲ ಎನ್ನಲಾಗಿದೆ. ವಿಧಿ ವಿಜ್ಞಾನ ಪರೀಕ್ಷೆ ನಂತರವೇ ಗುರುತು ಹಾಗೂ ಸಾವಿಗೆ ಕಾರಣ ಏನೆಂಬುದು ಖಚಿತವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ಬೇರೆಯವರೊಂದಿಗೆ ಬೆರೆಯದೇ ಪ್ರತ್ಯೇಕ ವಾಗಿದ್ದರು ಹಾಗೂ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. 2019ರ ನಂತರ ಅವರು ಹೊರಗೆ ಕಾಣಸಿಕೊಂಡಿರಲಿಲ್ಲ. ಆಗಿನಿಂದಲೂ ಮನೆಗೆ ಬೀಗ ಹಾಕಲಾಗಿತ್ತು.
ಎರಡು ತಿಂಗಳ ಹಿಂದೆ ಮನೆಯ ಮುಂಬಾಗಿಲನ್ನು ಯಾರೋ ಮುರಿದಿದ್ದರು. ಆದರೆ, ಪೊಲೀಸರಿಗೆ ಯಾರೂ ಮಾಹಿತಿ ನೀಡಿರಲಿಲ್ಲ. ಗುರುವಾರ ಅಸ್ಥಿಪಂಜರದ ಅವಶೇಷಗಳ ಮಾಹಿತಿ ದೊರೆತ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹಲವು ಬಾರಿ ಮನೆಗೆ ನುಗ್ಗಿ ಧ್ವಂಸಗೊಳಿಸಿರುವುದು ಕಂಡು ಬಂದಿದೆ. ನಾಲ್ಕು ಮೃತದೇಹಗಳು ಒಂದು ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇನ್ನೊಂದು ಅಸ್ಥಿಪಂಜರ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ.
ದಾವಣಗೆರೆಯ ವಿಧಿ ವಿಜ್ಞಾನ ಪರಿಣಿತರು ಸ್ಥಳಕ್ಕೆ ಭೇಟಿ ಮಾಡಿ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಸಾಕ್ಷಿಗಳನ್ನು ರಕ್ಷಿಸಲು ಸ್ಥಳವನ್ನು ಬಂದೋಬಸ್ತ್ ಮಾಡಲಾಗಿದೆ.
ಈ ನಡುವೆ ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರವೇ ವಿಷಯ ಸ್ಪಷ್ಟವಾಗಲಿದೆ ಎಂದಿದ್ದಾರೆ.