ದಾವಣಗೆರೆ, ಡಿ. 29- ಕನ್ನಡ ಕಡೆಗಣಿಸಿ ಬೇರೆ ಭಾಷೆಗಳನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಕ್ರಮ ಸರಿಯಲ್ಲ ಎಂದು ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಪರಶುರಾಮನಗೌಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ತು ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ `ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಕರ್ನಾಟಕ ಸಂಭ್ರಮ-50 ಹಾಗೂ ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಲರವ ಮಾಲಿಕೆ-2 ಹಾಗೂ `ಅವಾಂತರ’ ಹಾಸ್ಯ ಪ್ರಸಂಗಗಳು ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ `ಕರ್ನಾಟಕ’ ಎಂದು ನಾಮಕರಣಗೊಂಡು ಐವತ್ತು ವರ್ಷಗಳಾದರೂ ರಾಜಧಾನಿಯಲ್ಲಿ ಕನ್ನಡವನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಅನೇಕ ನಾಮಫಲಕಗಳಲ್ಲಿ ವ್ಯಾಕರಣ ದೋಷಗಳಿರುವುದು ದುರಂತ ಎಂದು ಹೇಳಿದರು.
ತಮಿಳು ನಾಡು ಸೇರಿದಂತೆ ನೆರೆಯ ರಾಜ್ಯಗಳಲ್ಲಿ ಜನರು ಅವರದ್ದೇ ಆದ ಭಾಷೆ ಮಾತನಾಡುತ್ತಾರೆ. ಆದರೆ ನಾವು ಬೇರೆ ರಾಜ್ಯಗಳ ಜನತೆ ಜೊತೆಗೆ ಅವರದ್ದೇ ಭಾಷೆಯಲ್ಲಿ ಮಾತನಾಡುವುದರಿಂದ ಅನ್ಯಭಾಷಿಗರು ಬಂದು ಐವತ್ತು ವರ್ಷಗಳ ಕಳೆದರೂ ಕನ್ನಡ ಭಾಷೆ ಕಲಿಯುತ್ತಿಲ್ಲ. ಮೊದಲು ನಾವು ಕನ್ನಡ ಮಾತನಾಡಬೇಕು. ಅನ್ಯ ಭಾಷಿಗರಿಗೆ ಕನ್ನಡ ಕಲಿಸಬೇಕು ಎಂದು ಹೇಳಿದರು.
ಇಂದು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಕನ್ನಡ ಮಾತನಾಡಿದರೆ ಶಿಕ್ಷೆ ವಿಧಿಸಲಾಗುತ್ತಿದೆ. ಇದು ತಪ್ಪು. ಮಕ್ಕಳು ಕನ್ನಡ ಮಾತನಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಕುವೆಂಪುರವರ ಬದುಕು-ಬರಹ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎಂ. ಮಂಜಣ್ಣ ಮಾತನಾಡಿ, ನಾನೇ ಶ್ರೇಷ್ಠ ಎನ್ನುವ ಮನಸ್ಥಿತಿ, ಅಸಮಾನತೆ ತುಂಬಿರುವ ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಹೇಗೆ ಕಟ್ಟಬೇಕು ಎಂಬ ಪ್ರಶ್ನೆಗೆ ಕುವೆಂಪು ಅವರ ಕೃತಿಗಳಲ್ಲಿ ಉತ್ತರವಿದೆ ಎಂದರು.
ಕುವೆಂಪು ಅವರು ಅಂದೇ ಅಸಮಾನತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ತಮ್ಮ ಕೃತಿಗಳ ಮೂಲಕ ಉತ್ತರ ಕೊಡುವ ಕೆಲಸವನ್ನು ನಿರಂತರವಾಗಿ ಮಾಡಿದ್ದರು ಎಂದು ತಿಳಿಸಿದರು.
ಇಂದು ಪ್ರಜಾಸತ್ತಾತ್ಮಕ ಆಶಯವನ್ನು ಇಟ್ಟುಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುವೆಂಪುರವರ ಪ್ರಜಾಸತ್ತಾತ್ಮಕ ಆಶಯಗಳು ಇಂದು ನಮಗೆ ಬಹುದೊಡ್ಡ ನಿರೀಕ್ಷೆಗಳಾಗಿ ಕಾಣುತ್ತವೆ ಎಂದರು.
ಅಧ್ಯಕ್ಷತೆ ವಹಿಸಿ, ಬಿ.ಎಸ್. ಸಿದ್ದೇಶ್ ರವರು ರಚಿಸಿರುವ ಅವಾಂತರ ಕೃತಿಯ ಲೋಕಾರ್ಪಣೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡುತ್ತಾ, 50 ಹಾಸ್ಯ ಪ್ರಸಂಗಗಳನ್ನು ಸೃಷ್ಟಿಸಿ ಅವುಗಳನ್ನು ಅವಾಂತರ ಎನ್ನುವ ಹಾಸ್ಯ ಪುಸ್ತಕದ ರೂಪದಲ್ಲಿ ಹೊರತೊಂದು ಸಿದ್ದೇಶ್ ಓದಿಗರಿಗೆ ಅರ್ಪಿಸಿದ್ದಾರೆ. ಮುಂದೆ ಇಂತಹ ಹಲವಾರು ಕೃತಿಗಳು ಅವರಿಂದ ಹೊರಬರಲಿ ಎಂದು ಆಶಿಸುತ್ತಾ ಕನ್ನಡ ಸಾಹಿತ್ಯ ಪರಿಷತ್ತು ಸದಾ ಅವರೊಟ್ಟಿಗೆ ಇರುತ್ತದೆ ಎಂದು ತಿಳಿಸಿದರು.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಹಾಲೇಶ್ ಬಿ., ಲೇಖಕ ಸಿದ್ದೇಶ್ ಬಿ.ಎಸ್. ವೇದಿಕೆ ಮೇಲಿದ್ದರು. ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಸಾಹಿತಿ ಬಾ.ಮ. ಬಸವರಾಜ್, ಆವರಗೆರೆ ರುದ್ರಮುನಿ ಇತರರು ಉಪಸ್ಥಿತರಿದ್ದರು. ಕಸಾಪ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.