ಆಧುನಿಕ ಕನ್ನಡದ ರಸಋಷಿ, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು

ಆಧುನಿಕ ಕನ್ನಡದ ರಸಋಷಿ, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು

ಆಧುನಿಕ ಕನ್ನಡದ ರಸಋಷಿ, ಕನ್ನಡದ ಅಗ್ರಮಾನ್ಯ ಕವಿ, ರಾಷ್ಟ್ರಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಂತಹ ಸಾಹಿತ್ಯದ ಮೇರು ಶಿಖರ ನಮ್ಮ ಪುಟ್ಟಪ್ಪನವರು.
`ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು ಕೆ.ವಿ.ಪುಟ್ಟಪ್ಪನವರು. ಇವರ ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ.ಇವರು 29.12.1904 ರಂದು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುಪ್ಪಳಿಯಲ್ಲಿ ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ, ಎಂ.ಎ, ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದರು.
1921 ರಲ್ಲಿ `ಪದ್ಮ ಪತ್ರದ ಸಂಘ’ವನ್ನು ಆರಂಭಿಸಿ ಕಾವ್ಯ ವಿಮರ್ಶೆ, ಚರ್ಚಾ ಗೋಷ್ಠಿಗಳನ್ನು ನಡೆಸುತ್ತಿದ್ದವರು. 1922 ರಲ್ಲಿ ತಮ್ಮ ಮೊದಲ ಇಂಗ್ಲಿಷ್ ಪದ್ಯಗಳ ಸಂಕಲನ `ಬಿಗಿನರ್ಸ್ ಮ್ಯೂಸ್’ ಪ್ರಕಟಿಸಿದರು. ಆಗ ಅವರ ಕಾವ್ಯ ನಾಮ `ಕಿಶೋರ ಚಂದ್ರ ವಾಣಿ’ ಎಂದು. ಮುಂದೆ ಐರಿಶ್ ಕವಿ `ಜೇಮ್ಸ್ ಕಸಿನ್ಸ್’ ಪುಟ್ಟಪ್ಪನವರ ಇಂಗ್ಲೀಷ್ ವ್ಯಾಮೋಹ ಬಿಡಿಸಿ, ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿದರು. 1924 ರಲ್ಲಿ `ಅಮಲನ ಕಥೆ’ ಬರೆದರು. ಎರಡನೆಯ ಬಿ.ಎ, ದಲ್ಲಿ ಓದುತ್ತಿರುವಾಗಲೇ `ಕಿಂದರಿ ಜೋಗಿ’ ಪ್ರಕಟವಾಯಿತು. 1928ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನಕ್ಕೆ ಅಧ್ಯಕ್ಷರಾದರು. 1937ರಲ್ಲಿ ಹೇಮಾವತಮ್ಮನವರೊಂದಿಗೆ ವಿವಾಹವಾದರು. ಪ್ರಸಿದ್ಧ ಕಥಾ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಇವರ ಮಕ್ಕಳಲ್ಲೊಬ್ಬರು. 1929 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದ ಪುಟ್ಟಪ್ಪನವರು 1960 ರವರೆಗೆ ಪ್ರಾಧ್ಯಾಪಕ ಮತ್ತು ಕುಲಪತಿಗಳಾಗಿಯೂ ಕೆಲಸ ಮಾಡಿದರಲ್ಲದೆ ತಮ್ಮ ಅಧಿಕಾರದ ಕಡೆಯ ವರ್ಷ ಮಾನಸ ಗಂಗೋತ್ರಿಯನ್ನು ಆರಂಭಿಸಿದರು. ಒಂದು ಮಾದರಿ ವಿಶ್ವವಿದ್ಯಾಲಯವು ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಾಂಗವೆಂಬ ಮೂರು ಬಗೆಯಲ್ಲಿ ಹೇಗೆ ಕೆಲಸ ಮಾಡಬೇಕೆಂಬುದನ್ನು ತೋರಿಸಿದ್ದಾರೆ. ಅಲ್ಲದೇ ಕನ್ನಡವನ್ನು ಒಂದು ಮರ್ಯಾದೆಯುತ ಭಾಷೆಯ ನ್ನಾಗಿಸುವ ಕಡೆ ಅಪಾರ ಶ್ರಮ ವಹಿಸಿದ್ದಾರೆ.
ಸ್ವಾತಂತ್ರ್ಯ ಚಳವಳಿ, ನಾಡು ನುಡಿ, ಕರ್ನಾಟಕದ ಏಕೀಕರಣ ಮತ್ತು ಪ್ರಾದೇಶಿಕ ಭಾಷಾ ಶಿಕ್ಷಣದ ಅವಶ್ಯಕತೆಗೆ ಸದಾ ಒತ್ತಾಯಿಸುತ್ತಿದ್ದ ಪುಟ್ಟಪ್ಪನವರು ಕನ್ನಡದ ಮೂಲಕವೇ ಭಾರತ ಮತ್ತು ವಿಶ್ವಗಳನ್ನು ಕಂಡ ಅಪರೂಪದ ಮನುಷ್ಯ. ಅಲ್ಲದೆ ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕ.
ಪುಟ್ಟಪ್ಪನವರು ಮೂಲತಃ ಕವಿ. ಅವರು ಕವಿತೆ, ಕಥೆ, ನಾಟಕ, ಕಾದಂ ಬರಿ, ಜೀವನ ಚಿತ್ರಗಳು, ಮಕ್ಕಳ ಸಾಹಿತ್ಯ, ಮಹಾಕಾವ್ಯ, ವಿಮರ್ಶೆ, ವಿಚಾರ, ಜೀವನ ಚರಿತ್ರೆ ಮತ್ತು ಆತ್ಮಕತೆ ಮುಂತಾದ ಪ್ರಕಾರಗಳಲ್ಲಿ ಎಂಭತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳಲ್ಲಿ ಕಲೆ, ತತ್ವ, ಅಧ್ಯಾತ್ಮ, ಪ್ರಕೃತಿ, ಪ್ರೀತಿ, ದೇವರು, ನಾಡು ನುಡಿ, ಪುರಾಣ, ಇತಿಹಾಸ, ಸಂಸ್ಕೃತಿ, ಸಾಹಿತ್ಯ ಮೀಮಾಂಸೆ, ವಿಜ್ಞಾನ, ವಿಚಾರ ಮುಂತಾಗಿ ನಾನಾ ವಿಷಯಗಳು ವಸ್ತುವಾಗಿವೆ. ಅವರ ಸಾಹಿತ್ಯ ಕನ್ನಡಕ್ಕಷ್ಟೇ ಅಲ್ಲದೆ ಭಾರತೀಯ ಸಾಹಿತ್ಯಕ್ಕೂ ಸಹಾ ಮೌಲೀಕವಾದುದಾಗಿದೆ. ಅವರ ಸೃಜನಶೀಲತೆಯ ಮುಖ್ಯ ಜೀವಾಳ ಶೂದ್ರ ಪ್ರಜ್ಞೆಯ ವಿಚಾರವಾದ.
ಯಾವುದೇ ಸಮಕಾಲೀನ ಸಾಹಿತಿಗಿಂತಲೂ ವಿಭಿನ್ನವಾದ ಪ್ರತಿಭೆ ಮತ್ತು ಆಲೋಚನಾ ಶಕ್ತಿಯ ಪುಟ್ಟಪ್ಪನವರು `ಪ್ರೇಮ ಕಾಶ್ಮೀರ’, `ಜೇನಾಗುವ’, `ಚಂದ್ರಮಂಚಕೆ ಬಾ ಚಕೋರಿ’, `ನವಿಲು’, `ಪಕ್ಷಿಕಾಶಿ’ ಮುಂತಾದ ಕವನ ಸಂಕಲನಗಳಲ್ಲಿ ಮನುಷ್ಯ ಮತ್ತು ಪ್ರಕೃತಿಗಳ ಸಂಬಂಧ, ಮನುಷ್ಯನ ತನ್ಮಯತೆ, ಅಲ್ಲಿನ ಸೌಂದರ್ಯ, ಸಾಕ್ಷಾತ್ಕಾರ, ಶಿಶುಸಹಜ ಮುಗ್ಧತೆ, ಭೀಕರತೆ ಮತ್ತು ಕೋಮಲತೆಗಳು, ಮಾನವ ಪ್ರೀತಿಯ ನೆಲೆಗಳು ಕವಿತೆಗಳು ಮತ್ತು ಕಥನ ಕವನಗಳಲ್ಲಿ ಕಂಡು ಬರುತ್ತವೆ. ಅವರ ಶೂದ್ರ ಪ್ರಜ್ಞೆ ದಿಟ್ಟವಾಗಿ ಪ್ರಕಟವಾಗಿರುವುದು `ಬೆರಳ್‌ಗೆ ಕೊರಳ್ ‘ , ಶೂದ್ರ ತಪಸ್ವಿ, ಜಲಗಾರ ಮುಂತಾದ ನಾಟಕಗಳಲ್ಲಿ `ರಸೋವೈಸಃ’, `ವಿಭೂತಿ ಪೂಜೆ’, `ತಪೋನಂದನ’, `ದ್ರೌಪದಿಯ ಶ್ರೀ ಮುಡಿ’ಗಳಲ್ಲಿ ಅವರ ದಾರ್ಶನಿಕ ವಿಮರ್ಶೆಯನ್ನು ಕಂಡರೆ, `ಷಷ್ಟಿ ನಮನ’, `ನಿರಂಕುಶಮತಿಗಳಾಗಿ’, `ವಿಚಾರ ಕ್ರಾಂತಿಗೆ ಆಹ್ವಾನ ‘ ಕೃತಿಗಳಲ್ಲಿ ಬೌದ್ಧಿಕ ದಾರಿದ್ರ್ಯದ ಬಿಡುಗಡೆ, ಪುರೋಹಿತ ಶಾಹಿಯ ವಿರುದ್ಧ ಅಜ್ಞಾನದ ಬಿಡುಗಡೆಯ ಬಗ್ಗೆ ದಟ್ಟವಾಗಿ ಬರೆಯುತ್ತಾರೆ. `ನನ್ನ ದೇವರು ಮತ್ತು ಇತರೆ ಕಥೆಗಳು’, `ಸನ್ಯಾಸಿ ಮತ್ತು ಇತರ ಕತೆಗಳು’, ಕಥಾ ಸಂಕಲನಗಳು. ಅವರ `ಮಲೆನಾಡಿನ ಚಿತ್ರಗಳು’ ಸಾಹಿತ್ಯದ ವಿಶಿಷ್ಟವಾದ ಕೃತಿ.
ಇವರ `ಕಾನೂರು ಹೆಗ್ಗಡತಿ’ ಮತ್ತು `ಮಲೆಗಳಲ್ಲಿ ಮದುಮಗಳು’ ಎಂಬೆರಡು ಮಹಾ ಕಾದಂಬರಿಗಳು ಕನ್ನಡ ಕಾದಂಬರಿ ಸಾಹಿತ್ಯದ ಮೇಲೆ ದಟ್ಟ ಪ್ರಭಾವ ಬೀರಿದವು. ಮಲೆನಾಡಿನ ಮನುಷ್ಯ ಜಗತ್ತಿನ ಸಂಕೀರ್ಣ ಬದುಕನ್ನು ಚಿತ್ರಿಸುವ ಇವು ಭಾರತೀಯ ಸಾಹಿತ್ಯದ ಪ್ರಮುಖ ದಾಖಲೆಗಳು. `ಷಷ್ಟಿ ನಮನ’, `ನಿರಂಕುಶಮತಿಗಳಾಗಿ’, `ವಿಚಾರ ಕ್ರಾಂತಿಗೆ ಆಹ್ವಾನ ‘, ಕೃತಿಗಳ ಮೂಲಕ ಅವರ ವೈಚಾರಿಕತೆಯ ಹೊಸ ಬೆಳಕು ಪ್ರದರ್ಶಿತವಾದರೆ `ಶ್ರೀ ರಾಮಕೃಷ್ಣ ಪರಮಹಂಸ’, `ಸ್ವಾಮಿ ವಿವೇಕಾನಂದ’ ಕೃತಿಗಳಲ್ಲಿ ಜೀವನ ಚರಿತ್ರೆಯ ನಿರೂಪಣಾ ಶಕ್ತಿ ಮತ್ತು ಗದ್ಯ ಬರಹದ ವಿಶೇಷವನ್ನು ಕಾಣುತ್ತೇವೆ. ಅವರ `ಶ್ರೀ ರಾಮಾಯಣ ದರ್ಶನಂ’ ಕನ್ನಡ ಭಾಷಾ ಸಂಸ್ಕೃತಿ ದೃಷ್ಟಿಕೋನಗಳಿಗೆ ಹೊಸ ಚಾಲನೆ ನೀಡಿದ ಮಹಾಕಾವ್ಯ.
ಕುವೆಂಪು ಅವರು ಮನುಜಮತ, ವಿಶ್ವಪಥ, ಸರ್ವೋ ದಯ, ಸಮನ್ವಯ ಮತ್ತು ಪೂರ್ಣ ದೃಷ್ಟಿ ಎಂಬ `ವಿಶ್ವಮಾನವ ತತ್ವವನ್ನು’ ಸಾರಿದ ಮೇರು ಕವಿಯಾಗಿದ್ದಾರೆ.


ಆಧುನಿಕ ಕನ್ನಡದ ರಸಋಷಿ, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು - Janathavani– ಮಾ.ಬ.ನಾಗರಾಜ್ ಕುಂದೂರು, ಶಿಕ್ಷಕರು, ದಾವಣಗೆರೆ. ಮೊ : 9611480732

error: Content is protected !!