ಮಲೇಬೆನ್ನೂರು, ಡಿ. 26 – ನಾಡಿನಲ್ಲಿ ನೂರಾರು ವರ್ಷಗಳಿಂದ ಮಠಗಳು ಆದ್ಯಾತ್ಮದ ಜೊತೆಗೆ ಶಿಕ್ಷಣ, ಸಂಸ್ಕೃತಿ, ಸಂಸ್ಕಾರವನ್ನು ಒಟ್ಟೊಟ್ಟಿಗೆ ನೀಡುತ್ತವೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಂದಿಗುಡಿ ವೃಷಭಪುರಿ ಬೃಹನ್ಮಠದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಶ್ರೀ ಕೆಂಚವೀರೇಶ್ವರ ಮಹಾ ಶಿವ ಯೋಗಿಗಳ ಪುಣ್ಯ ಸಂಸ್ಮರಣಾ ಮಹೋತ್ಸವ ಮತ್ತು ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 14ನೇ ಸೂರ್ಯ ಸಿಂಹಾಸನಾರೋಹಣ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಸಂಸ್ಕಾರ ಸಿಕ್ಕಲ್ಲಿ ಶ್ರೇಷ್ಠ ಸಮಾಜ ನಿರ್ಮಾಣ ಆಗುತ್ತದೆ. ಈ ನಿಟ್ಟಿನಲ್ಲಿ ನಂದಿಗುಡಿ ಬೃಹನ್ಮಠವು ಹಲವು ವರ್ಷಗಳಿಂದ ಅಂತಹ ಮಹಾತ್ಕಾರ್ಯ ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣದ ಜೊತೆ ಸಮಾಜದಲ್ಲಿ ಸಂಸ್ಕಾರವನ್ನು ಬಿತ್ತಿ ಬೆಳೆಸುತ್ತಿದೆ ಎಂದು ಹರೀಶ್ ಮೆಚ್ಚುಗೆ ವ್ಯಕ್ತ ಪಡಿಸಿದರು.
ಉಪನ್ಯಾಸಕರಾಗಿದ್ದ ಹೊನ್ನಾಳಿಯ ಶಾಂತರಾಜ ಪಾಟೀಲ್ ಮಾತನಾಡಿ, ತುಂಗಭದ್ರಾ ನದಿಯ ತಟದಲ್ಲಿ ಐತಿಹಾಸಿಕ ನಂದಿ ವಿಗ್ರಹ ಇರುವುದರಿಂದ ಈ ಗ್ರಾಮಕ್ಕೆ ನಂದಿಗುಡಿ ಎಂಬ ಹೆಸರು ಬಂದಿದೆ. ಈ ನದಿಯ ತಟದಲ್ಲಿ ಇರುವ ಈ ಮಠವು ಐತಿಹಾಸಿಕ ಭವ್ಯ ಪರಂಪರೆ ಹೊಂದಿದೆ. ಜಾತಿ ಮತಗಳನ್ನು ಮೀರಿ ಎಲ್ಲಾ ಸಮುದಾಯದ ಭಕ್ತರನ್ನು ಹೊಂದಿದ ಮಠವಾಗಿದೆ. ಶಾಲಾ ಕಾಲೇಜುಗಳನ್ನು ತೆರೆದು ಶಿಕ್ಷಣ, ದಾಸೋಹ ಮತ್ತು ಅನ್ನದಾಸೋಹವನ್ನು ನೆಡಸಿಕೊಂಡು ಬಂದಿದೆ ಎಂದು ತಿಳಿಸಿದರು.
ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಹೊನ್ನಾಳಿ ಶಾಸಕ ಶಾಂತನಗೌಡ, ಮಾಜಿ ಶಾಸಕ ಡಿ.ಬಿ. ಗಂಗಪ್ಪ, ನೊಳಂಬ ವೀರಶೈವ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಆರ್.ಎಸ್. ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಉಕ್ಕಡಗಾತ್ರಿ ಶ್ರೀ ಗುರು ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್. ಸುರೇಶ್ ಮಾತನಾಡಿದರು. ಉಕ್ಕಡಗಾತ್ರಿ ಗ್ರಾ.ಪಂ. ಅಧ್ಯಕ್ಷೆ ಭಾರತಮ್ಮ, ಉಪಾಧ್ಯಕ್ಷ ಗೋವಿನಹಾಳ್ ದಡ್ಡಿ ಪ್ರಕಾಶ್, ವಾಸನ ಗ್ರಾ. ಪಂ. ಅಧ್ಯಕ್ಷ ರುದ್ರಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಜಿ.ಪಂ. ಮಾಜಿ ಸದಸ್ಯೆ ಶ್ರೀಮತಿ ಚಿದಾನಂದಮ್ಮ ಮತ್ತು ಮಲೇಬೆನ್ನೂರು ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಟಿ. ಬಸವರಾಜ್ ಈ ದಿನದ ದಾಸೋಹ ಸೇವಾರ್ಥಿಗಳಾಗಿದ್ದರು.