ರೈತ ವಿರೋಧಿ ಮನಸ್ಥಿತಿಯ ಸಚಿವರ ವಜಾಕ್ಕೆ ಜಿಲ್ಲಾ ರೈತರ ಒಕ್ಕೂಟದ ಆಗ್ರಹ

ರೈತ ವಿರೋಧಿ ಮನಸ್ಥಿತಿಯ ಸಚಿವರ ವಜಾಕ್ಕೆ ಜಿಲ್ಲಾ ರೈತರ ಒಕ್ಕೂಟದ ಆಗ್ರಹ

ದಾವಣಗೆರೆ, ಡಿ. 26-ಬೆಳೆ ಪರಿಹಾರ, ಸಾಲಮನ್ನಾ ಆಗುತ್ತದೆ ಎಂಬ ಕಾರಣಕ್ಕಾಗಿಯೇ ಮೇಲಿಂದ ಮೇಲೆ ಬರ ಬರಲಿ ಎಂದು ರೈತರು ಬಯಸುತ್ತಾರೆಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಯನ್ನು   ಜಿಲ್ಲಾ ರೈತರ ಒಕ್ಕೂಟ ಖಂಡಿಸಿ, ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ರೈತ ಒಕ್ಕೂಟದ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಸಚಿವ ಶಿವಾನಂದ್ ಪಾಟೀಲ್ ರೈತರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ರೈತ ವಿರೋಧಿ ಮನಸ್ಥಿತಿ ಇರುವ ಅವರನ್ನು ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಅವರು ಒತ್ತಾಯಿಸಿದರು.

ಈ ಹಿಂದೆ ಕೂಡ ಐದು ಲಕ್ಷ ರೂ. ಪರಿಹಾರದ ಆಸೆಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ ಎಂದು ರೈತರ ಜೀವನವನ್ನು ಅಣಕ ಮಾಡಿದ್ದರು. ರೈತರನ್ನು ಕೀಳಾಗಿ ನೋಡುವುದೇ ಇವರ  ಸಂಸ್ಕೃತಿ ಆಗಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ 125 ವರ್ಷಗಳಲ್ಲಿ ಕಂಡರಿಯದ ಭೀಕರ ಬರಗಾಲ ಬಂದಿದ್ದು, ರಾಜ್ಯದಲ್ಲಿ 48.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆಯಿಂದ ತಿಳಿದುಬಂದಿದೆ.  ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ನೀಡಲು ಮುಂದಾಗದಿರುವುದು ವಿಷಾದದ ಸಂಗತಿಯಾಗಿದೆ. ರೈತರ ಸಂಕಷ್ಟಕ್ಕೆ ನೆರವಾಗದೇ ಇರುವುದು ಖಂಡನೀಯ ಎಂದರು.

ಬರ ಪರಿಹಾರ ಕೇಳಲು ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣ ಭೈರೇಗೌಡ, ಜಮೀರ್ ಅಹಮದ್  ಅವರು ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವುದು ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಹೇಳಿದರು.

ಒಂದು ವಾರದೊಳಗೆ ಸಚಿವ ಶಿವಾನಂದ ಪಾಟೀಲರನ್ನು ಸಂಪುಟದಿಂದ ವಜಾಗೊಳಿಸದಿದ್ದರೆ, ಹೋರಾಟ ರೂಪಿಸಲಾಗುವುದು. ವಿಳಂಬ ಧೋರಣೆಯನ್ನು ಅನುಸರಿಸದೇ ಬರ ಪರಿಹಾರವನ್ನು ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಬೆಳವನೂರು ನಾಗೇಶ್ವರರಾವ್, ವಾಸನ ಬಸವರಾಜಪ್ಪ,ಧನಂಜಯ ಕಡ್ಲೇಬಾಳು, ಗೋಪನಾಳು ಕರಿಬಸಪ್ಪ, ಚಿಕ್ಕಬೂದಿಹಾಳ್ ಭಗತ್ ಸಿಂಗ್, ಆರನೇ ಕಲ್ಲು ವಿಜಯಕುಮಾರ್, ಕನಗೊಂಡನಹಳ್ಳಿ ನಿಂಗಪ್ಪ, ರಾಜಶೇಖರ ನಾಗಪ್ಪ, ಮಳಲ್ಕೆರೆ ಕಲ್ಲಪ್ಪ  ಉಪಸ್ಥಿತರಿದ್ದರು. 

error: Content is protected !!